ಸೇಂಟ್ ಪೀಟರ್ ಶಾಲೆಯಲ್ಲಿ ಯೋಗಾರಂಭ
ವಿಶ್ವ ಯೋಗ ದಿನಾಚರಣೆ, ವಿವಿಧ ಸಾಂಸ್ಕೃತಿಕ ಸಮಿತಿಗಳ ರಚನೆ
ಯೋಗಬದ್ಧವಾದ ನಡೆ ಆರೋಗ್ಯ ಬದುಕಿಗೆ ಆಸರೆ
ಯಾದಗಿರಿ, ಶಹಾಪುರಃ ದಿನ ನಿತ್ಯ ಯೋಗ ಮಾಡುವದನ್ನು ರೂಢಿಸಿಕೊಂಡಲ್ಲಿ, ಅದಕ್ಕೆ ಬದ್ಧವಾಗಿ ನಡೆದುಕೊಂಡಲ್ಲಿ ಉತ್ತಮ ಆರೋಗ್ಯ ವೃದ್ಧಿಸಿ ಬದುಕು ಚೈತನ್ಯಪೂರ್ವಕವಾಗಿ ನಡೆಸಬಹುದು ಎಂದು ದೈಹಿಕ ಶಿಕ್ಷಕ ಹಾಗೂ ಪ್ರಭಾರಿ ತಾಲೂಕು ಪರಿವೀಕ್ಷಣಾಧಿಕಾರಿ ಚಂದ್ರಶೇಖರ ವೈದ್ಯ ಹೇಳಿದರು.
ನಗರದ ಸೇಂಟ್ ಪೀಟರ್ ಶಾಲೆ ಆವರಣದಲ್ಲಿ ನಡೆದ ವಿಶ್ವ ಯೋಗ ದಿನಾಚರಣೆ ಹಾಗೂ ಯೋಗ ತರಬೇತಿ ಆರಂಭ ಮತ್ತು ಶಾಲಾ ವಿವಿಧ ಸಾಂಸ್ಕೃತಿಕ ಸಮಿತಿಗಳ ರಚನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಸ್ತುತ ಬದುಕಿನಲ್ಲಿ ನಾಗರಿಕರು ಒತ್ತಡದ ಜೀವನ ನಡೆಸುತ್ತಿದ್ದಾರೆ. ಒತ್ತಡವನ್ನು ಕಳೆದುಕೊಂಡು ನೆಮ್ಮದಿ ಕಾಣಬೇಕೆಂದರೆ ನಿತ್ಯ ಯೋಗ ಅಭ್ಯಾಸ ಮಾಡಬೇಕು. ಯೋಗ ಅಭ್ಯಾಸಿದಂದ ಎಲ್ಲಾ ರೋಗಗಳು ದೂರ ಓಡಲಿವೆ. ಮನಸ್ಸಿಗೆ ನೆಮ್ಮದಿ, ಶಾಂತಿ ಲಭಿಸಲಿದೆ.
ಮಕ್ಕಳು ನಿತ್ಯ ಯೋಗ ಮಾಡಿದ್ದಲ್ಲಿ ಮನಸ್ಸಿನ ಏಕಾಗ್ರತೆ ಹೆಚ್ಚಿಸಿಕೊಂಡು ಚಂಚಲತೆ ನಿವಾರಿಸಿಕೊಳ್ಳಬಹುದು. ಜ್ಞಾಪಕ ಶಕ್ತಿಯು ಹೆಚ್ಚಲಿದೆ. ಸದಾ ಮನಸ್ಸು ಪ್ರಫುಲ್ಲತೆಯಿಂದ ಕೂಡಿರಲಿದೆ.
ಕಾರಣ ಎಲ್ಲರೂ ಬೆಳಗಿನಜಾವ ನಿತ್ಯ ಯೋಗ ಅಭ್ಯಾಸ ಮಾಡುವದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ದೈಹಿಕ ಶಿಕ್ಷಕ ಸುಧಾಕರ ಗುಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಲಾ ವಿವಿಧ ಸಾಂಸ್ಕøತಿಕ ಸಮಿತಿಗಳಿಗೆ ನೇಮಕಗೊಂಡ ವಿದ್ಯಾರ್ಥಿಗಳಿಗೆ ಸಸಿ ನೀಡುವ ಮೂಲಕ ಜವಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವಂತೆ ಸಲಹೆ ನೀಡಲಾಯಿತು.
ಅಲ್ಲದೆ ಇಂದಿನಿಂದ ಶಾಲೆಯಲ್ಲಿ ಯೋಗ ಅಭ್ಯಾಸ ತರಬೇತಿ ನಡೆಯಲಿದೆ. ವಿದ್ಯಾರ್ಥಿಗಳು ಯೋಗ ಕ್ಲಾಸ್‍ನಲ್ಲಿ ಆಭಗವಹಿಸುವ ಮೂಲಕ ಯೋಗ ಅಭ್ಯಾಸ ಮಾಡಬೇಕೆಂದು ತಿಳಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಫಾದರ್ ಫೆಡ್ರಿಕ್ ಡಿಸೋಜಾ, ಶಾಲಾ ಮುಖ್ಯಗುರು ಸಿಸ್ಟರ್ ರೀನಾ ಡಿಸೋಜಾ ಸೇರಿದಂತೆ ಉಪಸ್ಥಿತರಿದ್ದರು. ಶಿಕ್ಷಕಿ ಸುಧಾ ಮತ್ತು ಪ್ರೀತಾ ನಿರೂಪಿಸಿದರು. ಸುನೀತಾ ವಂದಿಸಿದರು. ಶಾಲಾ ಶಿಕ್ಷಕ ವೃಂದ ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯೋಗಪಟುಗಳಿಂದ ಯೋಗ ಪ್ರದರ್ಶನ ಜರುಗಿತು.