ಪ್ರಮುಖ ಸುದ್ದಿ

ಶಾಸಕ ದರ್ಶನಾಪುರ ಅನುದಾನ ತಾರತಮ್ಯ ಹೇಳಿಕೆಗೆ ಮಾಜಿ ಶಾಸಕ ಶಿರವಾಳ ಪ್ರತಿಕ್ರಿಯೆ

ಬಿಎಸ್‍ವೈ ಇಡಿ ಕರ್ನಾಟಕದ ಸಿಎಂ, ಎಲ್ಲಾ ಕ್ಷೇತ್ರ ಅಭಿವೃದ್ಧಿ ಬಯಸುವ ನಾಯಕಃ ಶಿರವಾಳ

yadgiri, ಶಹಾಪುರಃ ರಾಜ್ಯ ಬಿಜೆಪಿ ಆಡಳಿತದ ಸಿಎಂ ಯಡಿಯೂರಪ್ಪನವರು ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಅನುದಾನ ಕಲ್ಪಿಸಿದ್ದು, ಕಾಂಗ್ರೆಸ್ ಪಕ್ಷದ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎಂದು ಇಲ್ಲಿನ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಹೇಳಿಕೆಗೆ, ಪ್ರತಿಕ್ರಿಯಿಸಿದ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ, ಯಡಿಯೂರಪ್ಪನವರು ಇಡಿ ಕರ್ನಾಟಕದ ಮುಖ್ಯಮಂತ್ರಿ, ಕರ್ನಾಟಕದ ಎಲ್ಲಾ ಜನರ ಯೋಗ ಕ್ಷೇಮ ನೋಡುವದು ನಿಭಾಯಿಸುವದು ಅವರ ಕರ್ತವ್ಯವಾಗಿದೆ. ಅದು ಬಿಟ್ಟು ಬಿಜೆಪಿ ಕ್ಷೇತ್ರಗಳಿಗೆ ಮಾತ್ರ ಅನುದಾನ ಒದಗಿಸಿದ್ದು, ಕಾಂಗ್ರೆಸ್ ಪಕ್ಷದ ಕ್ಷೇತ್ರಗಳಿಗೆ ಯಾವುದೇ ಬಿಡಿಕಾಸು ನೀಡಿಲ್ಲ ಎಂದು ಶಾಸಕ ದರ್ಶನಾಪುರ ಮಾಡಿರುವ ಆರೋಪ ಸತ್ಯಕ್ಕೆ ದೂರವಿದೆ ಎಂದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಹಾಪುರ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ ಬಾರಿ ನಾನು ಶಾಸಕನಾಗಿದ್ದಾಗ, ಆರಂಭಿಸಲಾಗಿದ್ದ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅವುಗಳನ್ನು‌ ಮುಂದುವರೆಸಿ ಪೂರ್ಣ ಗೊಳಿಸಬೇಕಿತ್ತು ಎಂದ ಅವರು, 2017-18 ರಲ್ಲಿ ಗ್ರಾಮ ವಿಕಾಸ ಯೋಜನೆಯಡಿ ಕ್ಷೇತ್ರದ ನಾಲ್ಕು ಗ್ರಾಮಗಳು ಆಯ್ದುಕೊಂಡಿದ್ದು, ಮುಡಬೂಳ, ಗೋಗಿ(ಪಿ), ಮದ್ರಿಕಿ ಮತ್ತು ಹದನೂರ ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ತಲಾ ಒಂದು ಗ್ರಾಮಕ್ಕೆ 1 ಕೋಟಿ ರೂಪಾಯಿ ಅನುದಾನ ನೀಡಲಾಗಿತ್ತು. ಅದನ್ನು ಗ್ರಾಮ ವಿಕಾಸದಡಿ ಹತ್ತು ಹಲವು ಕಾಮಗಾರಿಗೆ ಚಾಲನೆ ನೀಡಬೇಕಿತ್ತು.‌ ಅಷ್ಟರಲ್ಲಿ ಚುನಾವಣೆ ನೀತಿ ಜಾರಿಯಾದ ಪರಿಣಾಮ ಆಗ‌ ಕ್ಷೇತ್ರದ ಹಲವು‌ ಕಾಮಗಾರಿ ಹಾಗೇ ಉಳಿದಿದ್ದವು, ಅಂತಹ ಕಾಮಗಾರಿಗಳಿಗೆ ಒತ್ತು ನೀಡಿ ಮುಗಿಸಿದ್ದಲ್ಲಿ ಜನರಿಗೆ ಅನುಕೂಲವಾಗುತಿತ್ತು ಎಂದರು.

ಅಲ್ಲದೆ ಮುಖ್ಯವಾಗಿ ವಿಶ್ವವ್ಯಾಪ್ತಿ ಹರಡಿಕೊಂಡ ಕೋವಿಡ್-19 ಸೋಂಕು ನಿರ್ವಹಣೆಗಾಗಿ ಸಾಕಷ್ಟು ಅನುದಾನ‌ ನೀಡಲಾಗಿದ್ದು, ಯಾವದಕ್ಕೂ  ಕಡಿಮೆ ಬೀಳದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುದಾನ ನೀಡಿದ್ದು, ಸಮರ್ಪಕವಾಗಿ ಸಮರ್ಥವಾಗಿ ನಿಭಾಯಿಸಲಾಗುತ್ತಿದೆ.

ಕ್ಷೇತ್ರದ ಕೆಂಭಾವಿ ಪುರಸಭೆ ವ್ಯಾಪ್ತಿಯಡಿ ನಗರದಲ್ಲಿ 137ಎಲ್‍ಪಿಸಿಡಿ  ನೀರು ಸರಬರಾಜು ಕಾಮಗಾರಿ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲಾಗಿತ್ತು, ಅದು ಪೂರ್ಣ ಗೊಳಿಸಲಾಗಿಲ್ಲ. ಅಲ್ಲದೆ ನಗರೋತ್ಥಾನ ಯೋಜನೆಯಡಿ ಎರಡನೇಯ ಹಂತದ 10 ಕೋಟಿ ಅನುದಾನದಲ್ಲಿ ಕರೆಯಲಾಗಿದ್ದ ಟೆಂಡರ್ ಪ್ರಕ್ರಿಯೇ ನನ್ನ ಅಧಿಕಾರವಧಿಯಲ್ಲಿ ಮುಗಿದಿದ್ದರೂ ಇದುವರೆಗೂ ಕಾಮಗಾರಿ ಮಾತ್ರ ಆರಂಭಗೊಂಡಿರುವದಿಲ್ಲ.

ಮತ್ತು ಶಹಾಪುರ ನಗರಸಭೆಯಲ್ಲಿ ನಗರೋತ್ಥಾನದಡಿ 100 ಕೋಟಿ ಅನುದಾನ ತಂದಿದ್ದು, ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಅದರಲ್ಲಿ ಇನ್ನೂ ಸಾಕಷ್ಟು ಕಾಮಗಾರಿಗಳು ಕೈಗೊಳ್ಳದೆ ಹಾಗೇ ಉಳಿದಿವೆ. ಕ್ಷೇತ್ರದ ಅಭಿವೃದ್ಧಿ ನನ್ನ ಅಧಿಕಾರವಧಿಯಲ್ಲಿ ಪ್ರತಿ ಹಳ್ಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಮತ್ತು ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿ ಕೆಲಸ ಮಾಡಿದ್ದೇನೆ. ಸಾಕಷ್ಟು ಗ್ರಾಮಗಳಲ್ಲಿ ಕೆಲಸ ಮುಗಿದಿವೆ. ಕೆಲವು ಹಳ್ಳಿಗಳಲ್ಲಿ ಮಾತ್ರ ಬಾಕಿ ಇರಬಹುದು. ಅಲ್ಲಿಯೂ ಟೆಂಡರ್ ಪ್ರಕ್ರಿಯೆ ಮುಗಿಸಲಾಗಿತ್ತು. ಅವುಗಳನ್ನು ಮುಂದುವರೆಸುವ ಕಾರ್ಯ ಮಾಡಬೇಕಿತ್ತು. ಅದು ಇದುವರೆಗೂ ನಡೆದಿಲ್ಲ ಎಂದು ಆರೋಪಿಸಿದರು.

ಅಲ್ಲದೆ ನಗರದ ಡಿಗ್ರಿ ಕಾಲೇಜು ಆವರಣದಲ್ಲಿ ಟೌನ್ ಹಾಲ್ ಭವ್ಯ ಕಟ್ಟಡ ತಲೆ ಎತ್ತಿರುವದು ನನ್ನ ಅವಧಿಯಲ್ಲಿ ಅದಕ್ಕೆ ಚಾಲನೆ ನೀಡಲಾಗಿತ್ತು. ಕಟ್ಟಡ ಕಾಮಗಾರಿ ಮುಗಿದಿದ್ದು, ಇದುವರೆಗೂ ಲೋಕಾರ್ಪಣೆಗೊಂಡಿರುವದಿಲ್ಲ. ಇನ್ನೂ ಹೊಸ ಅನುದಾನ ಯಾವಾಗ ಖರ್ಚು ಮಾಡುತ್ತಾರೆ ಎಂದು ಶಿರವಾಳ ಪ್ರಶ್ನಿಸಿದರು.

Related Articles

Leave a Reply

Your email address will not be published. Required fields are marked *

Back to top button