ಕಥೆವಿನಯ ವಿಶೇಷ

ದೊಡ್ಡ ಗೌಡರ ಮನೆಯ ಕದನ ಕುತೂಹಲ….!

-ವಿನಯ ಮುದನೂರ್

ಅದು ಆಯ್ತ್ವಾರದ ಅಮಾವಾಸ್ಯೆ ದಿನ. ಶಾಂತಿಪುರ ಗ್ರಾಮದಲ್ಲಿ ಅಂದು ಹೊತ್ತು ಮುಳುಗುವ ವೇಳೆಗಾಗಲೇ ಎಲ್ಲೆಲ್ಲೂ ಕಾರ್ಗತ್ತಲು ಆವರಿಸಿತ್ತು. ಬೆಂಕಿಯಂತ ಚಳಿ, ಮನುಷ್ಯನನ್ನೇ ಗಾಳಿಪಠವನ್ನಾಗಿಸುವಷ್ಟು ಜೋರಾದ ಬಿರುಗಾಳಿ. ತುಂಬಿ ಹರಿಯುತ್ತಿದ್ದ ಭೀಮೆಗೆ ಭರ್ತಿ ಸೆಳವು. ಪಟ್ಟಣಕ್ಕೆ ಹೋದವರು ಭೀಮಾ ಬ್ರಿಡ್ಜ್ ದಾಟಿ ಊರಿಗೆ ಬರುವುದು ಅಸಾಧ್ಯವಾಗಿತ್ತು. ಭಜನಾ ಮಂಡಳಿಯವರೂ ಸಹ ತಾಸು ಮೊದಲೇ ಬಸವೇಶ್ವರ ದೇಗುಲದಲ್ಲಿ ಭಜನೆ ಮುಗಿಸಿದ್ದರು. ಬೀದಿ ನಾಯಿಗಳೂ ಮೌನಕ್ಕೆ ಜಾರಿದ್ದವು, ಹಸು-ಕರುಗಳು ಉಪವಾಸ ಮಲಗಿದ್ದವು!

ಎಲೆ ಅಡಿಕೆ ತಿನ್ನುತ್ತ ದೇಶದ ಸುದ್ದಿ ಮಾತಾಡುತ್ತಿದ್ದ ಮುದುಕರು ಮಾತ್ರ ಅಲ್ಲಲ್ಲಿ ಕಂಬಳಿ ಹೊದ್ದು ಮುನುಗುತ್ತ ಮನೆ ಕಟ್ಟೆಗೆ ಕುಳಿತಿದ್ದರು. ಆದರೆ, ಊರಗೌಡ ದೊಡ್ಡಪ್ಪಗೌಡರ ಮನೆಯಿಂದ ಮಾತ್ರ ಅಕ್ಷರಶ: ರಣರಂಗದ ದನಿ ಮೊಳಗುತ್ತಿತ್ತು. ಕೆಲ ವಿದ್ಯಾವಂತರು ಪಬ್ಲಿಕ್ ಟೀವಿ ಡಿಬೆಟ್ ನ ಸೌಂಡೇ ಇರಬೇಕೆಂದು ಕನ್ ಫ್ಯೂಸ್ ಆಗ್ತಾರಾದ್ರೂ ಅಸಲಿಗೆ ಆಗ ವಿದ್ಯುತ್ ಕಡಿತಗೊಂಡಿರುತ್ತದೆ. ಕೂಗಾಟ, ಚೀರಾಟದ ದ್ವನಿ. ಮಕ್ಕಳ ಮನವಿ, ದೊಡ್ಡಗೌಡರ ತಿರಸ್ಕಾರ, ಬೈಗುಳ. ಒಮ್ಮೆ ದೊಡ್ಡ ಗೌಡರ ದನಿ, ಮೊತ್ತೊಮ್ಮೆ ಗೌಡರ ದೊಡ್ಡ ಮಗ ಚಂದ್ರೇಗೌಡ, ಇನ್ನೊಮ್ಮೆ ಕಿರಿಮಗ ಬಸನಗೌಡ, ಮಗದೊಮ್ಮೆ ನಡುಮಗ ರುದ್ರೇಗೌಡನ ದನಿ.

ಆಗಾಗ ಊರ ಮುಸಲ್ಮಾನ ಮೊಹಮ್ಮದ್ ಸಾಬ್ ನ ಉರ್ದು ಮಿಶ್ರಿತ ಕನ್ನಡ ಮಾತು. ಥೋಡಾ ಸಮಾಧಾನ ಥೋಡಾ ಸಮಾಧಾನ. ಎಲ್ಲರ ಮಾತಿಗೂ ಕಡಿವಾಣ ಹಾಕುತ್ತಿದ್ದ ದೊಡ್ಡಗೌಡರ ದೊಡ್ಡದನಿ. ಇದು ನನ್ನ ಸಾಮ್ರಾಜ್ಯ ಇಲ್ಲಿ ನಾನೇ ಅಧಿಪತಿ, ನಾನು ನುಡಿದದ್ದೇ ಆಗ್ನೆ ಅದನ್ನು ಪಾಲಿಸುವುದು ನಿಮ್ಮ ಧರ್ಮ-ಕರ್ಮ ಎಂಬಂತ ಆರ್ಭಟ. ಗೌಡರ ಪಡಸಾಲೆಯಲ್ಲಿ ನಡೆಯುತ್ತಿದ್ದ ಪಂಚಾಯತಿ ಊರ ಜನರಿಗೆಲ್ಲಾ ಕೇಳಿಸುತ್ತಿತ್ತು. ಇದು ಗೌಡರ ಮನೆ ಜಗಳ.

ಮುಸಲ್ಮಾನನೊಬ್ಬ ಸಮಾಧಾನ ಮಾಡಲು ಯತ್ನಿಸುತ್ತಿದ್ದಾನೆ ಆದರೆ ದೊಡ್ಡ ಗೌಡರು ಮತ್ತು ಮಕ್ಕಳು ಬಾಯಿ ಬಡಿಯುತ್ತಿದ್ದಾರೆ. ಇಬ್ಬರ ನಡುವೆ ಬಾಯಿ ಬಿಡಲಾಗದೆ ಮುಸಲ್ಮಾನ ಹೈರಾಣಾಗುತ್ತಿದ್ದಾನೆ. ಗ್ರಾಮದ ಮಕ್ಕಳಿಂದ ಹಿಡಿದು ಮುದುಕರವರೆಗೆ ಗೌಡರ ಮನೆಯಿಂದ ಹೊರಬೀಳುವ ದನಿಗೆ ಕಿವಿಯಾಗುತ್ತಾರೆ. ಆದರೆ, ಯಾರೊಬ್ಬರೂ ಗೌಡರ ಮನೆಯತ್ತ ದೃಷ್ಟಿ ಹಾಯಿಸುವ ಧೈರ್ಯ ಮಾಡುವುದಿಲ್ಲ. ಎದ್ದು ಹೋಗಿ ಏನಾಗಿದೆ, ಏನು ಕಥೆ ಎಂದು ಕೇಳಲು ಹಿಂಜರಿಯುತ್ತಾರೆ. ಗೌಡರ ಮನೆ ಅಂಗಳಕ್ಕೂ ಕಾಲಿಡುವ ಧೈರ್ಯ ತೋರುವುದಿಲ್ಲ.

ಮಕ್ಕಳು ವಿದ್ಯಾವಂತರಾಗಿದ್ದು ದೊಡ್ಡಗೌಡರ ಮನೆಗೆ ಮತ್ತಷ್ಟು ಕೀರ್ತಿ ತಂದಿದ್ದಾರೆ. ಎಷ್ಟೋ ಸಲ ಖುದ್ದು ಗೌಡರೇ ಈ ಬಗ್ಗೆ ಊರ ಜನರ ಮುಂದೆ ಭಾಷಣ ಬಿಗಿದಿದ್ದಾರೆ. ಮೂವರೂ ಮುತ್ತಿನಂಥ ಮಕ್ಕಳು, ಒಂದು ನಯಾ ಪೈಸೆಯೂ ನಮ್ಮ ಬಳಿ ಕೇಳಿಲ್ಲ. ತಾವಾಯ್ತು ತಮ್ಮ ಕೆಲಸವಾಯ್ತು ಅಂತ ಬದುಕ್ತಿದ್ದಾರೆ. ಊರಮಂದಿ ಅಣ್ತಮ್ಮಂದಿರಂದ್ರೆ ಹಿಂಗಿರಬೇಕು ಅಂತ ಮಾತನಾಡಿಕೊಳ್ತಾರೆ. ದೊಡ್ಡ ಮಗ ಇಂಜಿನೀಯರ್, ನಡುಮಗ ಸಮಾಜಮುಖಿ ವಕೀಲ, ಕಿರಿಮಗ ಶಿಕ್ಷಕ. ಮೂವರಿಗೂ ದುಶ್ಚಟಗಳಿಲ್ಲ, ಪಕ್ಕಾ ಅಪ್ಪನಂತೆಯೇ  ಮಕ್ಕಳು. ಉತ್ತಮ ಹೆಸರು ಗಳಿಸಿದ್ದಾರೆ, ಹೊಟ್ಟೆ ಬಟ್ಟೆಗೇನು ಕೊರತೆಯಿಲ್ಲ. ಹಣ, ಅಂತಸ್ತಿನ ಆಸೆಯಿಲ್ಲದ ಸರಳ ಜೀವಿಗಳು. ಗಳಿಸಬೇಕೆಂಬ  ಹಪಹಪಿಯೂ ಇಲ್ಲ ಮತ್ತು ಅದರ ಜರೂರತ್ತು ಅವರಿಗಿಲ್ಲ. ಅಪ್ಪ, ತಾತ ಗಳಿಸಿದ್ದೇ ಸಾಕು ಇನ್ನು ಮಕ್ಕಳಿಗೆ ವಿದ್ಯಭ್ಯಾಸ ಕೊಡಿಸುವುದೇ ದೊಡ್ಡ ಆಸ್ತಿ ಸಂಪಾದಿಸಿದಂತೆ ಎಂಬ ಇರಾದೆ ಉಳ್ಳವರು.

ಆದರೆ, ರಾತ್ರಿ ವೇಳೆ ತಮ್ಮ ಖಬರೇ ತಮಗಿಲ್ಲದೆ ದೊಡ್ಡಗೌಡರು ಹುಲಿಯಂತೆ ಆರ್ಭಟಿಸಿದ್ದೇಕೆ? ಗೌಡರ ಮನೆ ಜಗಳಕ್ಕೆ ಕಾರಣವೇನು, ಏನು ಕಥೆ. ಯಾಕೆ ದೊಡ್ಡಗೌಡರು ಮಕ್ಕಳ ಮೇಲೆ ವ್ಯಗ್ರರಾಗಿದ್ದಾರೆ. ವರ್ಷದ ಹಿಂದಷ್ಟೇ ದೇವರಂಥ ಗೌಡತಿ ಬೇರೆ ಕಾಲವಾಗಿದ್ದಾರೆ. ಪಾಪ, ತಾಯಿಯನ್ನು ಕಳೆದುಕೊಂಡ ಮಕ್ಕಳು ಸಿಟ್ಟಿನ ಅಪ್ಪನಿಗೆ ಸಮಾಧಾನಿಸಲಾಗದೆ ಸೈಲೆಂಟ್ ಆಗಿದ್ದಾರೆ. ಗೌಡತಿ ಅಗಲಿದ್ದಕ್ಕೇ ಗೌಡರಿಗೇನಾದರೂ ಹೀಗಾಯ್ತೋ ಏನು ಕಥೆಯೋ ಅಂದುಕೊಳ್ಳುತ್ತಲೇ ಗ್ರಾಮದ ಜನ ಬಲವಂತವಾಗಿ ಕಣ್ಮುಚ್ಚುತ್ತಾರೆ. ಗೌಡರ ಮನೆಗೆ ಕಿವಿಗೊಟ್ಟ ಯಾರೊಬ್ಬರಿಗೂ ಏನೊಂದು ಸ್ಪಷ್ಟವಾಗಿ ಗೊತ್ತಾಗುವುದೇ ಇಲ್ಲ. ಮದ್ಯರಾತ್ರಿವರೆಗೂ ಗೌಡರ ಮನೆ ಜಗಳ ಮುಗಿಯೋದೇ ಇಲ್ಲ. ತದನಂತರ ಕೂಗಾಟದ ದನಿ ಕ್ಷೀಣಿಸುತ್ತ ಅದ್ಯಾವಾಗ ಶಾಂತವಾಯಿತೋ ಯಾರಿಗೂ ಗೊತ್ತಾಗೋದಿಲ್ಲ. ಬೆಳ್ಳಂಬೆಳಗ್ಗೆ ಎದ್ದ ಜನ ಗೌಡರ ಮನೆ ಕದನ ತಿಳಿಯಲು ಕುತೂಹಲದಿಂದ ಕಾಯುತ್ತಾರೆ.

ಮನೆಯ ಅಂಗಳದಲ್ಲಿ ಕಸಗುಡಿಸುವುದು ಬಿಟ್ಟು ನಾಲ್ಕಾರು ಜನ ಮಹಿಳೆಯರು ಕೈಲಿ ಬಾರಿಗೆ ಹಿಡಿದುಕೊಂಡೇ ತಲೆಗೂಡಿಸಿ ಪಿಸುಗುಟ್ಟುತ್ತಿರುತ್ತಾರೆ.  ಹೊಲಕ್ಕೆ ಹೋಗಬೇಕಿದ್ದ ಜನ ಹೋಟೆಲ್ಲುಗಳ ಬಳಿ, ಗ್ರಾಮದ ಹರಟೆ ಕಟ್ಟೆ, ದೇಗುಲಗಳ ಬಳಿ ಸೇರಿ ಗುಸುಗುಸು ಮಾತನಾಡುತ್ತಿರುವುದು ಸಹಜವಾಗಿರುತ್ತದೆ. ಕೆಲವರು ಕೊಟ್ಟಿಗೆ ಸಗಣಿ ಬಾಚುವುದು, ಜಾನುವಾರುಗಳಿಗೆ ಮೇವು ನೀರು ನೀಡುವುದು ಮರೆತು ಕುಳಿತಿರುತ್ತಾರೆ. ಇನ್ನೂ ಕೆಲವ್ರು ಮಕ್ಕಳಿಗೆ ಪಟ್ಟಣದ ಶಾಲೆಗೆ ಬಿಡುವುದನ್ನು ಮರೆತು ಸ್ವಯಂ ರಜೆ ಘೋಷಿಸಿರುತ್ತಾರೆ. ಗೌಡರ ವಿರೋಧಿಗಳಂತೂ ದೊಡ್ಡಗೌಡರ ಮನೇಲಿ ಏನಾಯ್ತು, ಮನೆ ಹೊಡೆದು ಮೂರು ಹೋಳಾಯ್ತಾ. ದೊಡ್ಡ ಗೌಡರ ಕಥೆ ಇನ್ನು ಮುಗಿಯಿತಾ ಅಂಥಾ ಒಳಗೊಳಗೆ ಖುಷಿಯಿಂದ ಊರೆಲ್ಲಾ ನಾಗಸರ್ಪದಂತೆ ಓಡಾಡುತ್ತಿರುತ್ತಾರೆ. ಇಲ್ಲದ ಕಥೆ ಕಟ್ಟಿ ಚಾಡಿ ಹೇಳುತ್ತ ತಿರುಗುತ್ತಿರುತ್ತಾರೆ. ಆದ್ರೆ, ಯಾರೊಬ್ಬರಿಗೂ ಗೌಡರ ಮನೆಯ ಜಗಳಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗೋದೇ ಇಲ್ಲ.

ಒಂದು ಮನೆಯಿಂದ ಮತ್ತೊಂದು ಮನೆಯ ಅಂಗಳಕ್ಕೆ, ಹೋಟೆಲ್ ನಿಂದ ಹೋಟೆಲ್ ಗೆ ಜನ ಶಿಫ್ಟ್ ಆಗುತ್ತಲೇ ಇರುತ್ತಾರೆ. ನಿಮಗೊತ್ತಾ, ನಿಮಗೊತ್ತಾ? ನಮಗೆ ರಾತ್ರಿಯೆಲ್ಲಾ ನಿದ್ದೇನೆ ಇಲ್ಲ. ಗೌಡರ ಮನೇಲಿ ಜಗಳ ನಡೀತಿರೋದು ಕೇಳ್ತಾ ಕುಳಿತ್ವಿ. ಆದ್ರೆ, ಒಂದೂ ಅರ್ಥವಾಗಲೇ ಇಲ್ಲ. ದೊಡ್ಡ ಗೌಡರ ಮಾತು ಜೋರಾಗಿತ್ತು. ಮಕ್ಕಳಿಗೆ ವಾಚಾಮಗೋಚರ ಬೈಯುತ್ತಿರೋದು ಸ್ಪಷ್ಟವಾಗಿತ್ತು. ಗೌಡರ ಮನೆಯಂಗಳದಲ್ಲಿ ಎಂದೂ ಕೇಳದ ಪದಗಳವು. ಗೌಡರ ಮನೆ ಜಗಳದ ದನಿ ಹೊಸ್ತಿಲು ದಾಟಿದ್ದು ಇದೇ ಮೊದಲು. ಮೊದಲು ಮನೆ ಬಿಟ್ಟೋಗ್ರಿ ಅನ್ನೋದು ಮಾತ್ರ ಸ್ಪಷ್ಟವಾಗಿ ಕೇಳ್ತಿತ್ತು ಕಣ್ರೀ. ಏನು ಕಾರಣಕ್ಕೆ ಜಗಳ ಅಂತಾನೆ ಗೊತ್ತಾಗ್ಲಿಲ್ಲ ಅನ್ನೋದೇ ಎಲ್ಲರ ಮಾತಿನ ಸಾರ.

ಊರ ಜನರಿಗಂದು ಒಂದೇ ಟೆನ್ಷನ್ ಗೌಡರ ಮನೆ ಜಗಳದ ಗುಟ್ಟೇನು ತಿಳಿದು ಕೊಳ್ಳುವ ಇರಾದೆ. ಅಷ್ಟರಲ್ಲೇ ಎದ್ದು ಕಲಬರಗಿಗೆ ಹೊರಡಲು ಅಣಿಯಾದ ಮೊಹಮ್ಮದ್ ಸಾಬ್ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿರುತ್ತಾನೆ. ಏ ಮಹಮ್ಮದ್ ಸಾಬ್ ಬಾ ಇಲ್ಲಿ, ನಿನ್ನೆ ರಾತ್ರಿ ಗೌಡರ ಮನೆಯಲ್ಲಿ ನಿನ್ನ ದನಿಯೂ ಕೇಳಿ ಬರುತ್ತಿತ್ತಲ್ಲೋ ಮಾರಾಯ, ಏನಾಯ್ತು? ಅಂತ ಹಳ್ಳಿಕಟ್ಟೆ ಬಳಿ ನಿಂತಿದ್ದ ಗ್ರಾಮದ ಜನ ಕೇಳುತ್ತಾರೆ. ಅಯ್ಯೋ ನನಗೇನು ಕೇಳಬ್ಯಾಡ್ರಪ್ಪೋ ಮಾರಾಯ. ನನಗೂ ರಾತ್ರಿಯೆಲ್ಲಾ ನಿದ್ದೆಯಿಲ್ಲ. ಅಪ್ಪ ಮಕ್ಕಳ ಮದ್ಯೆ ಯಾವ ಕಾರಣಕ್ಕೆ ಜಗಳ ಬಂತೋ ಏನು ಕಥೆಯೋ ನನಗೂ ಗೊತ್ತಿಲ್ಲ. ಆದ್ರೆ, ಮೂವರು ಮಕ್ಕಳು ಒಂದು ಕಡೆಗೆ, ಅಪ್ಪ ಒಂದು ಕಡೆಗೆ. ಮೂವರು ಮಕ್ಕಳಲ್ಲಂತೂ ಬೇಧವಿಲ್ಲ ಇದು ಊರ ಮಂದಿಗೇ ಗೊತ್ತು. ಅದನ್ನು ದೊಡ್ಡ ಗೌಡರೇ ಸಾಕಷ್ಟು ಸಲ ನಿಮ್ಮ ಮುಂದೇ ಹೇಳಿದ್ದಾರಲ್ರಪ್ಪ. ಈಗ ಮಕ್ಕಳು ಸರಿಯಿಲ್ಲ ಎಲ್ರೂ ಮನೆ ಬಿಟ್ಟು ಹೋಗಲಿ ಅಂತ ಹೇಳ್ತಾರೆ. ಅಲ್ರೀ ಗೌಡರೇ ನಿಮ್ಮ ಮಕ್ಕಳೇನು ರೊಕ್ಕ ರುಪಾಯಿ, ಆಸ್ತಿ-ಪಾಸ್ತಿ ನಷ್ಟ ಮಾಡಿದ್ದಾರೆಯೇ, ಮನೆತನದ ಮರ್ಯಾದೆ ಕಳೆದಿದ್ದಾರೆಯೇ, ಅವರಲ್ಲೇನು ವೈಮನಸ್ಸಿಲ್ಲ, ಯಾರೂ ಪಾಲು-ಪಂಪು ಕೇಳಿಲ್ಲವಲ್ಲ. ಇನ್ನೂ ಅವರು ಒಟ್ಟಿಗೆಯೇ ಇರಲು ಬಯಸುತ್ತಾರಲ್ಲ ಎಂದು ನಾನು ಧೈರ್ಯಮಾಡಿ ಕೇಳಿದೆ. ನನಗೆ ದಿಟ್ಟಿಸಿ ನೋಡಿದ್ರು, ನಾನು ಸೈಲೆಂಟಾದೆ. ಅವರು ಹಿಡಿದದ್ದೇ ಹಠ. ದೊಡ್ಡ ಗೌಡರು ಯಾರ ಮಾತು ಕೇಳ್ತಾರೆ ಹೇಳಿ. ನನಗಂತೂ ಒಂದೂ ಅರ್ಥವಾಗಲೇ ಇಲ್ಲ. ಗೌಡರ ಮಕ್ಕಳೂ ತಲೆ ಕೆದರಿಕೊಳ್ಳುತ್ತಿದ್ದರು.  ಮದ್ಯ ರಾತ್ರಿ ಬಳಿಕ ಎಷ್ಟೊತ್ತಿಗೆ ಎದ್ದು ಹೋಗಿ ಮಲಗಿದೆವೋ ನನಗೇ ಗೊತ್ತಾಗಲಿಲ್ಲ. ನನಗೆ ಇಷ್ಟು ಮಾತ್ರ ಗೊತ್ತು ಎಂದು ಹೊರಡುತ್ತಾನೆ ಮೊಹಮ್ಮದ್ ಸಾಬ್.

ಈ ಮೊಹಮ್ಮದ್ ಸಾಬ್ ಗೌಡರಿಗೆ ಹೆದರಿ ಏನೋ ಮುಚ್ಚಿ ಇಡುತ್ತಿದ್ದಾನೆಂದು ಜನ ಮಾತನಾಡಿಕೊಳ್ಳುತ್ತಾರೆ. ಅಷ್ಟರಲ್ಲಿ ಗೌಡರ ಕಿರಿಮಗ ಹೊರ ಬಂದು ಕಾರಿನ ಬಳಿ ನಿಂತು ಫೋನಲ್ಲಿ ಮಾತನಾಡುತ್ತಿರುತ್ತಾನೆ. ಗೌಡರ ಮನೆ ಸೊಸೆಯಂದಿರು ಅಂದು ಅಂಗಳಕ್ಕೆ ರಂಗೋಲಿ ಹಾಕುವುದು ಮರೆತು ಸಪ್ಪಗೆ ಕುಳಿತಿರುತ್ತಾರೆ. ಮಕ್ಕಳು ಶಾಲೆ ಬಿಟ್ಟು ಮನೆಯಲ್ಲೇ ಉಳಿದಿರುತ್ತಾರೆ. ಗೌಡರ ಕಾರಿನ ಚಾಲಕ ಅರುಣ್ ಮನೆಗೆ ಬಂದಿರುತ್ತಾನಾದರೂ ಕಾರಿನ ಮೇಲಿನ ಹೊದಿಕೆ ತೆಗೆದು ಕಾರು ತೊಳೆದಿರುವುದಿಲ್ಲ. ದೊಡ್ಡ ಗೌಡರು ಮೂರನೇ ಮಹಡಿಯ ಕೋಣೆಯಲ್ಲಿರುತ್ತಾರಾದ್ರೂ ಕೆಳಗಿಳಿದು ಬಂದಿರುವುದಿಲ್ಲ. ನಡು ಮಗನ ಮುಖ ಕಪ್ಪಿಟ್ಟಿರುತ್ತದೆ. ಮನೆಮಾತು ಮನೆಯೊಳಗೇ ಇರಬೇಕು, ಹೊಸ್ತಿಲು ದಾಟಿ ಹೋಗಬಾರದು ಎಂದು ಹೇಳುತ್ತಿದ್ದ ಅಪ್ಪ ಈಗೇಕೆ ವಿನಾಕಾರಣ ಊರ  ಜನರಿಗೆ ಕೇಳುವಂತೆ ಕೂಗಾಡುತ್ತಿದ್ದಾರೆ ಎಂದು ಚಿಂತೆಗೀಡಾಗಿರುತ್ತಾನೆ. ದೊಡ್ಡಮಗ ಏನೊಂದು ತೋಚದಂತಾಗಿ ಆಗಿದ್ದಾಗಲಿ ಎಂದು ನಿರ್ಲಿಪ್ತನಾಗಿ ಮನೆಯ ಕಟ್ಟೆ ಮೇಲೆ ದೊಡ್ಡಗೌಡರು ಕೂಡುವ ಜಾಗದಲ್ಲಿ ಅದೇ ಸ್ಟೈಲಿನಲ್ಲೇ ಕುಳಿತಿರುತ್ತಾನೆ.

ಗೌಡರ ಕಾರು ಚಾಲಕ ಅರುಣ್ ಚಹಾ ಕುಡಿಯಲೆಂದು ಊರೊಳಗಿನ ಹೋಟೆಲ್ಲಿಗೆ ಹೋಗಿ ಕೂಡುತ್ತಾನೆ. ಕಾರು ಚಾಲಕನಿಗೆ ಮುಗಿಬಿದ್ದ ಜನ ಏನಾಯ್ತು ಗೌಡರ ಮನೆಯಲ್ಲಿ ರಾತ್ರಿಯೆಲ್ಲಾ ಕದನ ಎಂದು ಕುತೂಹಲದಿಂದ ಕೇಳುತ್ತಾರೆ. ಗೌಡರ ಮನೆ ಮಗನಿಗಿಂತಲೂ ಹೆಚ್ಚಾಗಿರುವ ಚಾಲಕನಿಗೆ ಎಲ್ಲಾ ಗೊತ್ತಿರುತ್ತದೆ. ನಮ್ಮ ಗೊಂದಲಕ್ಕಿನ್ನು ಮುಕ್ತಿ ಸಿಗುತ್ತದೆ. ಆಗಲೇ ಮದ್ಯಾಹ್ನ ಬಾರಾ ಆಗಿದೆ, ಇದೊಂದು ವಿಷಯ ತಿಳ್ಕೊಂಡು ಹೊಲಕ್ಕೆ ಹೊರಟರಾಯಿತು ಎಂದು ಮಾತನಾಡಿಕೊಳ್ಳುತ್ತಲೇ ಪೂಜಾರಿ ರಾಮಣ್ಣ, ಹೂಗಾರ ಶಾಮಣ್ಣ, ಶಾಣಪ್ಪ ಸಾಹುಕಾರ್,  ನಾಟೇಕಾರ ನರಸಪ್ಪ ಮತ್ತಿತರರ ಗುಂಪು ಚಾಲಕನ ಸುತ್ತ ಸೇರುತ್ತಾರೆ. ಆದರೆ, ಚಾಲಕನಿಗೋ ಆತಂಕ ಶುರುವಾಗುತ್ತದೆ. ನನ್ನ ಸುತ್ತ ಇಷ್ಟು ಜನ ಸೇರಿದ್ದು ದೊಡ್ಡ ಗೌಡರಿಗೆ ಗೊತ್ತಾದರೆ ನನ್ನ ಗತಿಯೇನು. ನನ್ನ ಕೆಲಸಕ್ಕೆ ಕುತ್ತು ಬರುವುದು ಒತ್ತಟ್ಟಿಗಿರಲಿ, ನನ್ನ ಮೇಲಿನ ನಂಬಿಕೆಗೆ ಪೆಟ್ಟಾಗುತ್ತದೆಂದು ಭೀತಿಗೊಳಗಾಗಿ ಹೋಟೆಲ್ ನವರಿಗೆ ಹಣ ಕೊಡುತ್ತಾನಾದ್ರೂ ಕೈಲಿಡಿದ ಚಹಾದ ಕಪ್ ಅರ್ಧಕ್ಕೆ ಬಿಟ್ಟು ಗೌಡರ ಮನೆಯತ್ತ ಓಡುತ್ತಾನೆ ಚಾಲಕ!

ಊರ ಜನರಿಗೆ ಮತ್ತಷ್ಟು ಕುತೂಹಲ ಹೆಚ್ಚುತ್ತ ಸಾಗುತ್ತದೆ. ಗೌಡರ ಸಹೋದರಿಯರು, ಹೆಣ್ಣು ಮಕ್ಕಳು, ಅಳಿಯಂದಿರು ಮನೆಯತ್ತ ಬಂದಿದ್ದು ಗ್ರಾಮದ ಜನರಲ್ಲಿ ಆತಂಕ ಹುಟ್ಟಿಸುತ್ತದೆ. ಊರ ಜನರಿಗೆ ಉಪಕಾರಿಯಾಗಿದ್ದ ಗೌಡರ ಮನೆಯಲ್ಲಿ ನಡೆಯಬಾರದ್ದೇನೋ ನಡೆದು ಹೋಗಿದೆ. ಪಾಪ ,  ಇಳಿ ವಯಸ್ಸಿನಲ್ಲಿರುವ ಗೌಡರಿಗೆ ಕೊನೆ ಗಳಿಗೆಯಲ್ಲಿ ಏನಾಯಿತು ಅಂತ ಇಡೀ ಗ್ರಾಮದ ಜನ ಚಿಂತೆಗೀಡಾಗುತ್ತಾರೆ. ಕೆಲವರು ನಮ್ಮ ಕಷ್ಟ ಸುಖಕ್ಕೆ ನೆರವಾಗಿರುವ ಗೌಡರ ಮನೇಲಿ ಏನಾಗಿದೆ ಕೇಳಿಯೇ ಬಿಡೋಣ ಬನ್ನಿ. ಬೈದರೆ ನಮಗೂ ನಾಲ್ಕು ಮಾತು ಬೈಯುತ್ತಾರೆ ಅಷ್ಟೇ. ಸಿಟ್ಟಿನ ಮನುಷ್ಯನೇ ಖರೇ. ಆ ಹಿರಿಜೀವಕ್ಕೆ ನಾವೂ ಮಕ್ಕಳಿದ್ದಂತೆ ಅಲ್ಲವೇ, ನಮಗೂ ಬೈದರೆ ಬೈಯಲ್ಲಿ ಎಂದು ಗಟ್ಟಿ ಧೈರ್ಯ ಮಾಡಿ ಗೌಡರ ಮನೆಯಂಗಳಕ್ಕೆ ಬಂದೇ ಬಿಡುತ್ತಾನೆ ಹಿರಿಮಗನ ವಾರಿಗೆಯ ತಳವಾರ ಸೀತಪ್ಪ. ಹಲವು ಹಿರಿಯರು ,  ಮಹಿಳೆಯರು ಜಾತಿ ಬೇಧ ಮರೆತು ಬಂದು ನಿಲ್ಲುತ್ತಾರೆ. ಕಿರಿ ಮಗ ಶಿಕ್ಷಕ ಬಸನಗೌಡ ಅಂಗಳಕ್ಕೆ ಬಂದು ಅಚ್ಚರಿಯಿಂದ ನೋಡುತ್ತಾನೆ. ಏನಾಯ್ತು ಎಂದು ದೊಡ್ಡಣ್ಣನ ಮುಖವನ್ನೊಮ್ಮೆ, ಜನರೆಡೆಗೊಮ್ಮ ದೃಷ್ಠಿ ಹಾಯಿಸುತ್ತಾನೆ. ನಡುಮಗ ರುದ್ರೇಗೌಡ ಶರ್ಟು ಧರಿಸಿಕೊಳ್ಳುತ್ತಲೇ ಅಂಗಳಕ್ಕೆ ಬಂದು ಯಾಕೆಲ್ರೂ ಬಂದ್ಬಿಟ್ರಿ ಏನು ಸಮಸ್ಯೆ ಆಯ್ತು  ಅಂತ ಕೇಳುತ್ತಾನೆ.

ಅರೇ ಇದೇನಿದು ನಾವೇ ಏನಾಗಿದೆ ಗೌಡರ ಮನೇಲಿ ಅಂತ ಕೇಳಲು ಬಂದಿದ್ದೇವೆ. ಸಣ್ಣ ಗೌಡರು ನೋಡಿದ್ರೆ ನಮಗೆ ಪ್ರಶ್ನೆ ಮಾಡುತ್ತಿದ್ದಾರಲ್ಲ ಎಂದುಕೊಂಡ ಜನ ಏನೊಂದು ತೋಚದೆ ಮೌನಕ್ಕೆ ಶರಣಾಗುತ್ತಾರೆ. ಯಾರು ಕೇಳುವುದು ಏನು ಕೇಳುವುದು ಎಂದು ತಿಳಿಯದೆ ಒಬ್ಬರ ಮುಖ ಒಬ್ಬರು ನೋಡುತ್ತಾರೆ. ಏನಾಯ್ತು, ಊರ ಜಾತ್ರೆ ವೇಳೆ ಗೌಡರು ಬರದಿದ್ದಕ್ಕೆ ಏನಾದರೂ ತೊಂದರೆ ಆಯಿತಾ. ಪೊಲೀಸರು, ತಹಸೀಲ್ದಾರು ಬಂದು ಏನಾದರೂ ಅದೂ ಇದು ಅಂತ ಹೇಳಿದ್ರಾ. ಈವತ್ತು ನಾವೆಲ್ಲಾ ದೇವಸ್ಥಾಕ್ಕೆ ಬರ್ತೀವಿ ಬಿಡಿ ಅಂತಾ ಹೇಳಲೆತ್ನಿಸುತ್ತಾರೆ ಚಿಕ್ಕಗೌಡರು. ಅದಲ್ಲಾ ಚಿಕ್ಕಗೌಡ್ರೆ, ಅದೂ ನಿನ್ನೆ … ನಿನ್ನೆ ರಾತ್ರಿ ನಮ್ಗೆಲ್ಲಾ ನಿದ್ದೇನೆ ಇಲ್ಲ.. ದೊಡ್ಡಗೌಡರ ಜೋರು ದನಿ… ಅನ್ನುತ್ತಿದ್ದಂತೆ ಅದಾ ವಿಷಯ ಅಂತ ದೊಡ್ಡಣ್ಣ ಮತ್ತು ತಮ್ಮನ ಮುಖ ನೋಡುತ್ತಾನೆ. ಆಗ ದೊಡ್ಡ ಗೌಡರ ಕಿರಿಮಗ ಅಣ್ಣ ನೀವು ಅಪ್ಪನಿಗೆ ತಿಂಡಿ ಕೊಡಿ ಹೋಗ್ರಣ್ಣ ಅಂತ ಅಣ್ಣಂದಿರಿಗೆ ಒಳಗೆ ಕಳಿಸುತ್ತಾನೆ. ಗೌಡ್ರೆ, ಕೇಳಿದ್ದು ತಪ್ಪಾಯ್ತು ಬಿಡಿ ಗೌಡ್ರೆ ನಿಮ್ಮನೆ ವಿಷಯ ಕೇಳೋಕೆ ನಮ್ಗೆನು ಹಕ್ಕು ಇದೆ . ಕೇಳಲ್ಲ ಬಿಡಿ ಗೌಡ್ರೆ ಬೇಜಾರು ಆಗ್ಬೇಡ್ರಿ. ದೊಡ್ಡ ಗೌಡ್ರು, ನೀವೆಲ್ಲಾ ನಮ್ಗೆ ಕಷ್ಟ ಸುಖ ಅಂದ್ರೆ ನಡುರಾತ್ರೀಲಿ ಬರ್ತೀರಿ. ಆಸ್ಪತ್ರೆ, ಹಬ್ಬ, ಮದುವೆ-ಮುಂಜಿಗೆ ಕೇಳೋಕು ಮುಂಚೆನೆ ಹೆಲ್ಪ್ ಮಾಡ್ತೀರಿ ಅದ್ಕೆ ಬಂದ್ವಿ ಸ್ವಾಮಿ . ನಾವು ಹಳ್ಳಿ ಜನ, ತಪ್ಪಾಗಿದ್ರೆ ಕ್ಷಮಿಸಿಬಿಡಿ ಅಂತ ಗೌಡರ ಮನೆಯತ್ತ ಬೆನ್ನು ಮಾಡುತ್ತಾರೆ.

ನೀವು ಕೇಳೋದರಲ್ಲಿ ತಪ್ಪೇನಿಲ್ಲ ಬಿಡಿ. ಇದು ನಿಮ್ಮ ಮನೆಯೇ, ನಿಮ್ಮ ದೊಡ್ಡ ಗೌಡರ ಮನೆಯೇ, ಕೇಳುವ ಹಕ್ಕು ನಿಮಗಿದೆ. ನಿಮ್ಮ ದೊಡ್ಡ ಗೌಡ್ರು ಕೋಪದಲ್ಲಿದ್ದಾರೆ. ಈ ಮನೆಯಲ್ಲಿ ನಾವು ಮೂವರು ಅಣ್ತಮ್ಮಂದಿರು ಇರುವಂತಿಲ್ಲ ಎಲ್ರೂ ಮನೆಬಿಟ್ಟು ಹೋಗ್ಬೇಕು ಅಂತ ಆಗ್ನೆ ಮಾಡ್ತಿದ್ದಾರೆ ಅದ್ಕೆ ಸ್ವಲ್ಪ ಚರ್ಚೆ ಅಷ್ಟೇ… ಸರಿ ಸ್ವಾಮಿ, ಆದ್ರೆ ಅದ್ಕೆ ಕಾರಣ ಬೇಕಲ್ರಿ. ನೀವು ಗೌಡರಿಗೆ ಕೀರ್ತಿ ತರುವ ಮಕ್ಕಳು ಅಂತ ನಮ್ಗೆಲ್ಲಾ ಗೊತ್ತದೆ ಸ್ವಾಮಿ ಅಂತಾನೆ ಸೀತಣ್ಣ. ಕಾರಣ… ನಮಗೂ ಗೊತ್ತಿಲ್ಲ. ಆದ್ರೆ, ಒಂದು ನೈಜ ಕಥೆ ಹೇಳ್ತೀನಿ ಕೇಳಿ. ಉತ್ತರ ನೀವೇ ಕಂಡುಕೊಳ್ತೀರಾ ಅಂತಾರೆ ಚಿಕ್ಕಗೌಡ್ರು. ಹೇಳಿ ಸ್ವಾಮಿ, ಹೇಳಿ ಸ್ವಾಮಿ. ದೊಡ್ಡ ಗೌಡರು ನಮ್ಮೂರ ಜನ್ರಿಗೆ ಕಥೆ ಹೇಳಿ ತುಂಬಾ ದಿನ ಆಯ್ತು. ಈಗ ಚಿಕ್ಕಗೌಡ್ರು ಹೇಳಿದ್ರೆ ಇನ್ನೂ ಚಂದ.

ನನಗಾಗ ಏಳೆಂಟು ವರ್ಷ ಇರಬೇಕಷ್ಟೇ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನ ಮಂತ್ರಿ ಆಗಿದ್ರು. ಆ ಮಹಾಪುರಷನ ಬಗ್ಗೆ ಪುಸ್ತಕ, ಪತ್ರಿಕೆಗಳಲ್ಲಿ ಓದಿಕೊಂಡಿದ್ದ ಅಪ್ಪ ಆಗಾಗ ಹೇಳುತ್ತಿದ್ದ ಕಥೆ, ಪ್ರಸಂಗಗಳು ನನ್ನ ಮೇಲೆ ಪರಿಣಾಮ ಬೀರಿದ್ದವು. ಇದು 20 ವರ್ಷದಷ್ಟು ಹಿಂದಿನ ಮಾತು. ಅಸಲಿಗೆ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಾರು, ಅವರ ಅಧಿಕಾರ ಎಂಥದ್ದು ಅನ್ನೋದರ ಬಗ್ಗೆ ಅರಿವಿಲ್ಲದ ವಯಸ್ಸು. ಆದರೆ, ಅಂದು ಸಂಜೆ ಪಟ್ಟಣದ ಸರ್ಕಾರಿ ಶಾಲೆಯ ಆವರಣದಲ್ಲಿನ ಇಂದಿರಾಗಾಂದಿ ಕಟ್ಟೆಗೆ ವಾಜಪೇಯಿ ಭಾಷಣಕ್ಕೆ ಬರುವವರಿದ್ದರು. ಆ ವಿಷಯವನ್ನು ಖುದ್ದು ಅಪ್ಪನೇ ಬೆಳಗ್ಗೆ ಪತ್ರಿಕೆಯಲ್ಲಿ ಓದಿದ್ದರು. ಅದನ್ನು ಕೇಳಿಸಿಕೊಂಡ ನಾನು ಅಂದು ಬೆಳಗ್ಗೆಯಿಂದಲೇ ಅಪ್ಪನಿಗೆ ಹೆಗಲಾದೆ. ಅಸಲಿಗೆ ಅಪ್ಪ ಜನತಾದಳದಲ್ಲಿ ಗುರುತಿಸಿಕೊಂಡಿದ್ದರು. ಪರಿಣಾಮ ಬಿಜೆಪಿ ಸಮಾವೇಶಕ್ಕೆ ಅಪ್ಪ ಹೋಗುವುದು ಕಷ್ಟಸಾಧ್ಯವಾಗಿತ್ತು. ನಾನು ಮಾತ್ರ ಅದ್ಯಾವ ಮಾತಿಗೂ ಕ್ಯಾರೆ ಅನ್ನಲಿಲ್ಲ. ಅಪ್ಪ ಆವತ್ತು ನೂರು ಸಲ ನನ್ನ ಮನಸ್ಸು ಬದಲಿಸಲು ಯತ್ನಿಸಿದರು. ಸಂತೆಗೆ ಕರೆದುಕೊಂಡು ಹೋಗ್ತೀನಿ, ಸಿನೆಮಾಕ್ಕೆ ಹೋಗೋಣ, ಅತ್ತೆ ಊರಿಗೆ ಹೊಗೋಣ, ಮೇಲುಗಿರಿಗೆ ಹೋಗೋಣ, ಈವತ್ತು ಶಾಲೆಗೆ ಹೋಗೋದು ಬೇಡ ಬಿಡು ಅಂತ ಏನೆಲ್ಲಾ ಹೇಳಿದರು. ನಾನು ಮಾತ್ರ ಅಪ್ಪನ ಯಾವೊಂದು ಮಾತಿಗೂ ಕಿವಿಗೊಡಲೇ ಇಲ್ಲ. ಆದ್ರೆ, ಅಪ್ಪ ಆವತ್ತು ನನ್ನ ಮೇಲೆ ಕಿಂಚಿತ್ತು ಸಿಟ್ಟಾಗಲೇ ಇಲ್ಲ. ಒಂದು ಮಾತು ಬೈಯಲಿಲ್ಲ, ಒಂದೇಟೂ ಹೊಡೆಯಲಿಲ್ಲ. ಬದಲಾಗಿ ನನ್ನ ಮನಸ್ಸು ಬದಲಿಸಲು ಶತ ಪ್ರಯತ್ನ ನಡೆಸಿ ವಿಫರಾದರು.

ಕೊನೆಗೆ ಅಪ್ಪ ನನಗೆ ಬುಲೆಟ್ ಗಾಡಿಯಲ್ಲಿ ವಾಜಪೇಯಿ ಭಾಷಣ ಕೇಳಲು ಪಟ್ಟಣಕ್ಕೆ ಕರೆದೊಯ್ದರು. ಆದ್ರೆ, ದೊರದಲ್ಲೆಲ್ಲೋ ನಿಂತರೆ ನಾನು ಕೇಳಬೇಕಲ್ಲ. ವೇದಿಕೆ ಹತ್ತಿರಕ್ಕೆ ಹೋಗಿ ವಾಜಪೇಯಿ ಅವರನ್ನು ನೋಡಲೇಬೇಕು. ನಾನು ಹಿಡಿದದ್ದೇ ಹಠ. ಕೊನೆಗೂ ಅಪ್ಪ, ತನ್ನ ಮುಖ ಕಾಣದಂತ ಟವಲನ್ನು ಹಾಕಿಕೊಂಡು ಹೆಗಲಮೇಲೆ ನನ್ನನ್ನು ಕೂಡಿಸಿಕೊಂಡು ಇಂದಿರಾಗಾಂಧಿ ಕಟ್ಟೆ ಬಳಿಗೆ ನುಗ್ಗಿದ್ದರು. ಕೇವಲ 20 ಅಡಿ ದೂರದಿಂದ ನನಗೆ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತೋರಿಸಿ, ಭಾಷಣ ಕೇಳಿಸಿ ಕರೆದುಕೊಂಡು ಬಂದರು. ಈಗ ಅಪ್ಪನಿಗೆ 80 ವರ್ಷ!

Related Articles

Leave a Reply

Your email address will not be published. Required fields are marked *

Back to top button