ಪ್ರಮುಖ ಸುದ್ದಿ
ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಯ ನಿಗೂಢ ಸಾವು!
ಸುರಪುರ ಮೂಲದ ವಿದ್ಯಾರ್ಥಿ ವಿಜಯಪುರದಲ್ಲಿ ಸಾವು
ವಿಜಯಪುರ: ನಗರದ ಹೊರವಲಯದಲ್ಲಿರುವ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಯೊಬ್ಬ ನಿಗೂಢ ಸಾವಿಗೀಡಾದ ಘಟನೆ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಂದಾಪುರ ಗ್ರಾಮದ ಶಂಕರ್ ತಿಪ್ಪಣ್ಣ ರಾಠೋಡ(19) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಸುರಪುರದಲ್ಲಿ ಡಿಇಡಿ ಓದುತ್ತಿದ್ದ ಶಂಕರ್ ಎರಡು ದಿನಗಳ ಹಿಂದೆ ಸ್ನೇಹಿತರ ಭೇಟಿಗೆ ಬಂದಿದ್ದ. ಹಾಸ್ಟೆಲ್ ನಲ್ಲಿ ಸ್ನೇಹಿತರೊಂದಿಗೆ ಉಳಿದುಕೊಂಡಿದ್ದ. ಆದರೆ, ಇಂದು ಬೆಳಗಾಗೋದರೊಳಗೆ ಶಂಕರ್ ಕೊನೆಯುಸಿರೆಳೆದಿದ್ದಾನೆ.
ವಿದ್ಯಾರ್ಥಿಗಳು ಶಂಕರ್ ದೇಹವನ್ನು ಜಿಲ್ಲಾಸ್ಪತ್ರೆಗೆ ತಂದಿದ್ದಾರಾದರೂ ಅಷ್ಟರಲ್ಲೇ ಶಂಕರ್ ಅಸುನಿಗಿದ್ದನೆಂದು ವೈದ್ಯರು ತಿಳಿಸಿದ್ದಾರೆ. ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಸಾವಿನ ಕಾರಣ ತಿಳಿದುಬರಬೇಕಿದೆ.