ಕಲಬುರಗಿ: ಪಿಎಸ್ ಐ ಆಗುವ ಕನಸು ಕಂಡಿದ್ದ ವಿದ್ಯಾರ್ಥಿ ಶವವಾಗಿ ಪತ್ತೆ!
ಕಲಬುರಗಿ: ನಗರದ ಅಗ್ರಿಕಲ್ಚರ್ ಕಾಲೇಜು ಹಿಂಬದಿಯಲ್ಲಿ ದಾನಪ್ಪ (24) ಎಂಬ ವಿದ್ಯಾರ್ಥಿಯ ಶವ ಪತ್ತೆಯಾಗಿದೆ. ಆಳಂದ ತಾಲೂಕಿನ ಯಳಸಂಗಿ ಗ್ರಾಮದ ನಿವಾಸಿಯಾಗಿದ್ದ ದಾನಪ್ಪ ಪದವೀಧರನಾಗಿದ್ದ. ಇತ್ತೀಚೆಗಷ್ಟೇ ಪದವಿ ಮುಗಿಸಿದ್ದ ದಾನಪ್ಪ ಪಿಎಸ್ಐ ಆಗುವ ಕನಸಿನೊಂದಿಗೆ ಹೆಚ್ಚಿನ ವಿದ್ಯಭ್ಯಾಸದಲ್ಲಿ ತೊಡಗಿದ್ದ. ಇತ್ತೀಚೆಗಷ್ಟೇ ಸ್ಪರ್ಧಾತ್ಮಕ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ ಪಿಎಸ್ ಐ ಆಗುತ್ತೇನೆಂದು ಭರವಸೆಯಲ್ಲಿದ್ದನೆಂದು ತಿಳಿದು ಬಂದಿದೆ.
ನಗರದ ರಾಜ್ ಕೋಚಿಂಗ್ ಸೆಂಟರ್ ನಲ್ಲಿ ಕೋಚಿಂಗ್ ಪಡೆಯುತ್ತಿದ್ದ ದಾನಪ್ಪ ಶಹಬಜಾರ್ ಬಡಾವಣೆಯಲ್ಲಿ ವಾಸವಾಗಿದ್ದ. ಆದರೆ, ಕಳೆದ ನಾಲ್ಕು ದಿನಗಳ ಹಿಂದಷ್ಟೇ ಶಹಬಜಾರ್ ಬಡಾವಣೆಯಿಂದ ನಾಪತ್ತೆಯಾಗಿದ್ದ. ಇಂದು ನಗರದ ಅಗ್ರಿಕಲ್ಚರ್ ಕಾಲೇಜು ಹಿಂಭಾಗದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಬಗ್ಗೆ ಪೊಲೀಸರಿಂದ ಶಂಕೆ ವ್ಯಕ್ತವಾಗಿದೆ. ಆದರೆ, ಯಾವ ಕಾರಣಕ್ಕೆ ಕೊಲೆ ನಡೆದಿದೆ ಮತ್ತು ಯಾರು ಕೊಲೆ ಮಾಡಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ. ಕಲಬುರಗಿ ಗ್ರಾಮಾಂತರ ಠಾಣೆ ಪೊಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.