ನಿರುದ್ಯೋಗ ಎಂಬ ಪೆಡಂಭೂತಕ್ಕೆ ಇನ್ನೆಷ್ಟು ಬಲಿಬೇಕು ಸ್ವಾಮಿ?
ದಾವಣಗೆರೆ: ನಿರುದ್ಯೋಗ ಸಮಸ್ಯೆಯಿಂದಾಗಿ ತಾಲೂಕಿನ ಹೊಸನಗರ ಗ್ರಾಮದ ಬಳಿಯ ಜಮೀನಿನಲ್ಲಿ ಯುವಕ ಅನಿಲ್(22) ನೇಣಿಗೆ ಶರಣಾದ ಘಟನೆ ನಡೆದಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಎಮ್.ಎ ಓದುತ್ತಿದ್ದ ಅನಿಲ್ ಐಎಎಸ್ ಕೋಚಿಂಗ್ ಪಡೆಯುವ ಆಶಯ ಹೊಂದಿದ್ದರು. ಅನಿಲ್ ತಾಯಿ ಮಗನಿಗೆ ಕೋಚಿಂಗ್ ಕಳುಹಿಸಲೆಂದು ಸಾಲ ಪಡೆಯಲು ಮುಂದಾಗಿದ್ದರು.
ಸಹೋದರ ಕೂಲಿ ಕೆಲಸ ಮಾಡುತ್ತಿರುವುದು ಹಾಗೂ ವಿದ್ಯಭ್ಯಾಸಕ್ಕಾಗಿ ಸಾಲ ಕೇಳುವ ಪರಿಸ್ಥಿತಿ ಬಂದೊದಗಿದ್ದರಿಂದಾಗಿ ಅನಿಲ್ ನೊಂದಿದ್ದರು. ಉದ್ಯೋಗಕ್ಕಾಗಿ ಪ್ರಯತ್ನಿಸಿ ನೊಂದಿದ್ದ ಅನಿಲ್ ಬಡವರಿಗೆ ಉತ್ತಮ ವಿದ್ಯಭ್ಯಾಸ ಮಾಡುವುದು ಅಸಾಧ್ಯ. ವಿದ್ಯಭ್ಯಾಸ ಮಾಡಿದರೂ ಉದ್ಯೋಗ ಸಿಗುವುದು ದುಸ್ತರವಾಗಿದೆ ಎಂದು ನೊಂದು ನೇಣಿಗೆ ಶರಣಾಗಿದ್ದಾರೆ.
ನೇಣಿಗೆ ಶರಣಾಗುವ ಮುನ್ನ ತನ್ನ ಮೊಬೈಲ್ ನಲ್ಲಿ ವಿಡಿಯೋ ಸಂದೇಶ ರೆಕಾರ್ಡ್ ಮಾಡಿರುವ ಅನಿಲ್ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ನಿರುದ್ಯೋಗ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದ್ದಾರೆ. ಸಿಎಂಗೆ ಬಡವರ ಬಗ್ಗೆ ಕಾಳಜಿ ಇದೆ, ನಿರುದ್ಯೋಗ ಸಮಸ್ಯೆಯ ಅರಿವಿದೆ ಎಂದು ಭಾವಿಸಿದ್ದೇನೆ. ದಯಮಾಡಿ ನನ್ನಂಥವರ ಸಮಸ್ಯೆ ಅರಿತುಕೊಂಡು ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡಿ ಎಂದು ಅನಿಲ್ ಹೇಳಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.