‘ಹಾಯ್ ಬೆಂಗಳೂರ್’ ಕಚೇರಿಯಲ್ಲಿ 1ವರ್ಷ ಕೆಲಸ ಮಾಡಿದ್ದನಂತೆ ಭೀಮಾತೀರದ ಹಂತಕ!
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಭಂಧಿಸಿದಂತೆ ಭೀಮಾ ತೀರದ ಹಂತಕ ಶಶಿಧರನನ್ನು ಎಸ್ ಐ ಟಿ ತಂಡ ವಿಚಾರಣೆಗೊಳಪಡಿಸಿದಾಗ ಪತ್ರಕರ್ತನ ಕೊಲೆಗೆ ಸುಪಾರಿ ನೀಡಿದ್ದ ಪ್ರಕರಣ ಬಯಲಾಗಿದೆ. ಹಾಯ್ ಬೆಂಗಳೂರ್ ಪತ್ರಿಕೆಯ ಗೌರವ ಸಂಪಾದಕ ರವಿಬೆಳಗೆರೆ ತಮ್ಮದೇ ಪತ್ರಿಕೆಯಲ್ಲಿ ವರದಿಗಾರನಾಗಿದ್ದ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದರೆಂದು ಹಂತಕ ಶಶಿಧರ್ ಬಾಯಿಬಿಟ್ಟಿದ್ದಾನೆ. ಹೀಗಾಗಿ, ಪೊಲೀಸರು ಪತ್ರಕರ್ತ ರವಿ ಬೆಳಗೆರೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ನಾನು ಹಾಯ್ ಬೆಂಗಳೂರ್ ಪತ್ರಿಕೆಯಲ್ಲಿ 14ವರ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಏನು ಕಾರಣವೋ ಗೊತ್ತಿಲ್ಲ 2014ರಲ್ಲಿ ನನ್ನ ಮೇಲೆ ಸಂಶಯ ವ್ಯಕ್ತಪಡಿಸಲು ಶುರು ಮಾಡಿದ್ದರು. ಹಾಗಾಗಿ, ಅಲ್ಲಿ ಕೆಲಸವನ್ನು ಬಿಟ್ಟು ಬಂದೆ. ಆದ್ರೆ, ಪೊಲೀಸರು ಇಂದು ನನಗೆ ವಿಷಯ ತಿಳಿಸಿದ ಬಳಿಕವಷ್ಟೇ ರವಿ ಬೆಳಗೆರೆ ನನ್ನ ಹತ್ಯೆಗೆ ಸಂಚು ನಡೆಸಿದ್ದರು ಎಂಬುದು ರಿಕಾಲ್ ಆಗ್ತಿದೆ ಎಂದಿದ್ದಾರೆ.
ಒಂದ್ಸಲ್ ಹೊಸ ಚಾನಲ್ ರೂಪಿಸಲು ಇನ್ವೆಸ್ಟರ್ಸ್ ಬಂದಿದ್ದಾರೆ ಬಾ ಎಂದು ನನ್ನನ್ನು ಆಫೀಸಿಗೆ ಕಳಿಸಿದ್ದರು. ಆಗ ನಾನು ಹೋದರೆ ಕಚೇರಿ ಬಳಿ ಕೆಲವು ಕ್ರಿಮಿನಲ್ಸ್ ಇದ್ದರು. ಮೇಲಿನ ಕಚೇರಿಗೆ ಹೋದರೆ ಯಾರೂ ಇರಲಿಲ್ಲ. ಕೇಳಿದಾಗ ಬೆಳಗೆರೆ ಅವರೂ ಏನೂ ಮಾತನಾಡಲಿಲ್ಲ. ಆಮೇಲೆ ನಾನು ನನ್ನ ಪರಿಚಿತ ಪೊಲೀಸ್ ಅಧಿಕಾರಿಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದೆ. ಅವರು ಅಲ್ಲಿಂದ ನೀವು ಹೊರಡಿ ಸಸ್ಪೆಕ್ಟ್ ಇದೆ ಎಂದು ಹೇಳಿದಾಕ್ಷಣ ಅಲ್ಲಿಂದ ಹೊರಟೆ. ಮತ್ತೊಂದು ಸಲ ನನ್ನ ವಿಳಾಸ ಪತ್ತೆ ಹಚ್ಚಲು ಪುಸ್ತಕಗಳನ್ನು ಕೋರಿಯರ್ ಮಾಡಲಾಗಿತ್ತು.
ಅದೇ ಸಂದರ್ಭದಲ್ಲಿ ಭೀಮಾತೀರದ ಹಂತಕ, ವಿಜಯಪುರ ಮೂಲದ ಶಶಿಧರ್ ನಾನಿರುವ ಮನೆಗಳ ಆಸುಪಾಸಿನಲ್ಲಿ ಓಡಾಡಿಕೊಂಡಿದ್ದ. ನಾನು ಹಂತಕ ಶಶಿಧರನನ್ನು ಗುರುತಿಸಿದೆ. ಹೇಗೆಂದರೆ, ಹಾಯ್ ಬೆಂಗಳೂರು ಕಚೇರಿಯಲ್ಲಿ ಶಶಿಧರ್ ಒಂದು ವರ್ಷ ಸೆಕುರಿಟಿ ಸುಪ್ರವೇಸರ್ ಆಗಿ ಕೆಲಸ ಮಾಡಿದ್ದು ನನಗೂ ಪರಿಚಿತನಾಗಿದ್ದನು ಎಂದು ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.
ನನ್ನ ಕೊಲೆಗೆ ಸುಪಾರಿ ಕೊಡುವ ಮೂಲಕ ರವಿ ಬೆಳಗೆರೆ ಹೇಡಿ ಕೆಲಸ ಮಾಡಿದ್ದಾರೆ. ಇದು ಆ ಮನುಷ್ಯನ ವ್ಯಕ್ತಿತ್ವವನ್ನು ಅದು ತೋರಿಸುತ್ತದೆ. ಮೊದಲೇ ನನ್ನ ಕೊಲೆಗೆ ಸಂಚು ರೂಪಿಸಿರುವ ಬಗ್ಗೆ ಗೊತ್ತಿದ್ದರೆ ಅಂದೇ ಜೈಲಿಗೆ ಹೋಗುತ್ತಿದ್ದರು ಎಂದು ಸುನೀಲ್ ಹೆಗ್ಗರವಳ್ಳಿ ಹೇಳಿದ್ದಾರೆ.