ಆಯುಷ್ಮಾನ್ ಕಾರ್ಡ್ ಮಾಡಿಸಿ-ಬಿರಾದಾರ ಶಂಕರ
ಯಾದಗಿರಿಃ ಆಯುಷ್ಮಾನ್ ಭಾರತ- ಮತ್ತು ಆರೋಗ್ಯ ಕರ್ನಾಟಕವು ರಾಜ್ಯದ ಎಲ್ಲಾ ನಿವಾಸಿಗಳಿಗೆ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಕುಟುಂಬಗಳಿಗೆ 1 ವರ್ಷಕ್ಕೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ ಲಭ್ಯ ಇದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದಾರ ಶಂಕರ ಹೇಳಿದರು.
ಸುರಪೂರ ತಾಲ್ಲೂಕಿನ ಸೂಗೂರ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎ.ಪಿ.ಎಲ್ ಕುಟುಂಬದವರಿಗೆ ಸರ್ಕಾರಿ ಪ್ಯಾಕೇಜ್ ದರದ ಶೇ.30ರಷ್ಟು ವೆಚ್ಚ ಲಭ್ಯವಿದ್ದು, ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.50 ಲಕ್ಷ ರೂ. ಇರುತ್ತದೆ. ಈ ಕಾರ್ಡನ್ನು ನಿಗದಿತ ದಿನಾಂಕಗಳಂದು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಿತರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಕರ್ನಾಟಕ ಒನ್ ಹಾಗೂ ಸೇವಾ ಸಿಂಧು ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‍ಗಳನ್ನು ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದರು.
ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಅವರು ಮಾತನಾಡಿ, ಆಯುಷ್ಮಾನ್ ಭಾರತ- ಆರೋಗ್ಯ ಕರ್ನಾಟಕ ಯೋಜನೆಯಡಿ 1650 ಚಿಕಿತ್ಸಾ ವಿಧಾನಗಳಿಗೆ ಚಿಕಿತ್ಸೆ ಲಭ್ಯವಿದೆ. ಸಾರ್ವಜನಿಕರು ತಪ್ಪದೇ ತಮ್ಮ ಆಧಾರ್ ಕಾರ್ಡ್, ಪಡಿತರ ಚೀಟಿಗಳನ್ನು ಹಾಜರುಪಡಿಸಿ, ಆರೋಗ್ಯ ಕಾರ್ಡ್ ಪಡೆದುಕೊಳ್ಳಬೇಕೆಂದು ಹೇಳಿದರು.
ವಿಶೇಷ ಶಾಲಾ ಲಸಿಕಾ ಅಭಿಯಾನವು ಡಿಸೆಂಬರ್ 11ರಿಂದ 31ರ ವರೆಗೆ ಜಿಲ್ಲೆಯಾದ್ಯಂತ ನಡೆಯುತ್ತಿದೆ. ಗಂಟಲು ಮಾರಿ, ನಾಯಿಕೆಮ್ಮು, ಧನುರ್ವಾಯು ತಡೆಗಟ್ಟಲು ಈ ಲಸಿಕೆಯು ಎಲ್ಲಾ ಶಾಲೆಗಳಲ್ಲಿ ನೀಡಲಾಗುತ್ತದೆ. ಆದ್ದರಿಂದ ಪೋಷಕರು ತಮ್ಮ ಮಗುವಿಗೆ ತಪ್ಪದೇ ಲಸಿಕೆ ಕೊಡಿಸುವುದು ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಸೂಗೂರ ಗ್ರಾಮ ಪಂಚಾಯತಿಯಲ್ಲಿ ಒಟ್ಟು 100 ಕಾರ್ಡ್‍ಗಳನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಭಯ್ಯ ಸ್ವಾಮಿ, ಶಿವಣ್ಣ, ಶರಣಪ್ಪ, ಚಾಂದಸಾಬ, ಆಶಾ ಕಾರ್ಯಕರ್ತೆ ದೇವಮ್ಮ, ಗಣಕಯಂತ್ರದ ಸಹಾಯಕರಾದ ಶರಬಣ್ಣ ಹಾಗೂ ಗ್ರಾಮಸ್ಥರು ಹಾಜರಿದ್ದರು.