ಕುರಿಗಾಯಿಗಳ ರಕ್ಷಣೆಗೆ ಬಂದಿದೆ ಹೈದ್ರಾಬಾದ್ ತಂಡ.!
ಮೂವರು ಕುರಿಗಾಯಿಗಳು ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿರುವ ಪ್ರಕರಣ
ಕಾರ್ಯಚರಣೆಗೆ ಹೈದ್ರಾಬಾದ್ ತಂಡ.!
ಯಾದಗಿರಿ: ಕೃಷ್ಣಾ ನದಿಯ ನಡುಗಡ್ಡೆಯೊಂದರಲ್ಲಿ ಮೂರು ದಿನಗಳಿಂದ ಸಿಲುಕಿಕೊಂಡಿರುವ ಮೂವರು ಕುರಿಗಾಯಿಗಳ ರಕ್ಷಣೆಗೆ ಹೈದ್ರಾಬಾದ್ ಮೂಲದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ನಾರಾಯಣಪುರಕ್ಕೆ ಆಗಮಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ(NDRF)
ಬಿಹಾರಸಿಂಗ್ ಹಾಗೂ ಸುರಪುರ ತಹಸೀಲ್ದಾರ ಸುರೇಶ ಅಂಕಲಗಿ ಅವರ ನೇತೃತ್ವದಲ್ಲಿ ಮೇಲಿನಗಡ್ಡಿ ಗ್ರಾಮದ ಬಳಿಯ ಕೃಷ್ಣಾ ನದಿ ತೀರಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು ಬೆಳಗ್ಗೆಯಿಂದಲೇ ಕಾರ್ಯಚರಣೆ ಆರಂಭವಾಗಿದೆ.
ಮೂರುದಿನಗಳಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಮೇಲಿನಗಡ್ಡಿ ಗ್ರಾಮದ ಕುರಿಗಾಯಿಗಳಾದ ಸೋಮಣ್ಣಗೌಡ, ಶೇಖರಪ್ಪ ಹಾಗೂ ಗದ್ದೆಪ್ಪ ಅವರು ತಮ್ಮ ಹಸಿವು ನೀಗಿಸಿ ಕೊಳ್ಳಲು ಜೊತೆಗಿದ್ದ ಕುರಿಗಳ ಹಾಲು ಸೇವನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇದೇ ಸೋಮವಾರ ಅವರು 80 ಕುರಿಗಳೊಂದಿಗೆ ಕೋಟಿಹಾಳ ನಡುಗಡ್ಡೆಗೆ ಕುರಿ ಮೇಯಿಸಲು ಹೋಗಿದ್ದರು. ಬಸವಸಾಗರ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಹಿನ್ನಲೆ ಮೂರು ದಿನಗಳಿಂದ ನದಿಯ ನಡುಗಡ್ಡೆಯಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ. ಜೀವಭಯದಲ್ಲಿರುವ ಮೂವರು ಮೂರುದಿನದಿಂದ ಆಹಾರವಿಲ್ಲದೆ ನರಳುತ್ತಿದ್ದಾರೆ. ಅವರ ಆಕ್ರಂದನ ಕೇಳುತ್ತಿದೆ ಎಂದು ನಿನ್ನೆ ಗ್ರಾಮಸ್ಥರು ಅಧಿಕಾರಿಗಳಿಗೆ ತಿಳಿಸಿದ್ದರು.
ನಿನ್ನೆ ಸಂಜೆ ವೇಳೆಗೆ ಮೂವರು ನದಿಯ ನಡುಗಡ್ಡೆಯಲ್ಲಿ ಸಿಲುಕಿರುವ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ತಕ್ಷಣ ರಕ್ಷಣೆಗೆ ಸಿದ್ದತೆ ನಡೆಸಿರುವ ಜಿಲ್ಲಾಡಳಿತ ಕುರಿಗಳ ಸಮೇತ ಕುರಿಗಾಯಿಗಳ ಜೀವ ಉಳಿಸಲು ಮುಂದಾಗಿದೆ. ರಕ್ಷಣಾ ತಂಡವನ್ನು ಕರೆಸಿಕೊಂಡು ಕಾರ್ಯಚರಣೆ ಆರಂಭಿಸಿದೆ. ರಕ್ಷಣಾ ಕಾರ್ಯ ಯಶಸ್ವಿಯಾಗಲಿ, ಮೂವರು ಪ್ರಾಣಾಪಾಯದಿಂದ ಪಾರಾಗಿ ಬರಲಿ ಎಂಬುದು “ವಿನಯವಾಣಿ” ಆಶಯ.