ಪ್ರಮುಖ ಸುದ್ದಿ

ವರ್ಷದಲ್ಲಿ ಒಂದು ಬಾರಿ ತಪ್ಪದೆ ಈ ಮಾತ್ರೆ ಸೇವಿಸಿ -ಶಂಕರ ಬಿರಾದರ

ಜಿಲ್ಲಾದ್ಯಂತ ಸಾಮೂಹಿಕ ಔಷಧಿ ಸೇವನೆ ಕಾರ್ಯಕ್ರಮ

ಯಾದಗಿರಿಃ  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸುರಪುರ ತಾಲ್ಲೂಕಿನ ಕೃಷ್ಣಾಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಜರುಗಿತು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿರಾದರ ಶಂಕರ ಮಾತನಾಡಿ, ಸಾಮೂಹಿಕ ಔಷಧ ನುಂಗಿಸುವ (ಎಂ.ಡಿ.ಎ ಮತ್ತು ಏ.ಡಿ.ಎ) ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯುತ್ತಿದ್ದು, ವರ್ಷದಲ್ಲಿ 1 ಬಾರಿ ತಪ್ಪದೇ ಈ ಮಾತ್ರೆಗಳನ್ನು ಸೇವಿಸಬೇಕು. ಮನೆ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕು. ಸೊಳ್ಳೆಯಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ (ಎ.ಸಿ.ಎಫ್) ಹಾಗೂ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ (ಎಲ್.ಸಿ.ಡಿ.ಸಿ) ನವೆಂಬರ್ 25ರಿಂದ ಡಿಸೆಂಬರ್ 10ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದ್ದು, ಇದಕ್ಕಾಗಿ ಶಾಲಾ ವತಿಯಿಂದ ಜಾಗೃತಿ ಜಾಥಾ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ತಿಳಿಸಿದರು.

ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ನಂದಣ್ಣ ಪಾಟೀಲ್ ಅವರು ಮಾತನಾಡಿ, ತೀವ್ರತರ ಮಿಷನ್ ಇಂದ್ರಧನುಷ್ ಲಸಿಕಾ ಕಾರ್ಯಕ್ರಮವು ಡಿಸೆಂಬರ್ 11ರಿಂದ 31ರವರೆಗೆ ನಡೆಯಲಿದೆ. 1ನೇ ತರಗತಿಯ ಮಕ್ಕಳಿಗೆ ಡಿ.ಪಿ.ಟಿ ಲಸಿಕೆ ಮಾರಕ ಖಾಯಿಲೆಯಾದ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು ಆಗದಂತೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ಲಸಿಕೆ ನೀಡಲಾಗುವುದು. 2ರಿಂದ 10ನೇ ತರಗತಿಯ ಮಕ್ಕಳಿಗೆ ಸಹ ಮಾರಕ ರೋಗಗಳನ್ನು ತಡೆಗಟ್ಟಲು ತಪ್ಪದೇ ಟಿ.ಡಿ. ಲಸಿಕೆ ಹಾಕಿಸಲು ತಿಳಿಸಿದರು.

ಎಲ್ಲರೂ ಕೈಜೋಡಿಸಿ ಯಾದಗಿರಿ ಜಿಲ್ಲೆಯನ್ನು ಡಿಪ್ತೀರಿಯಾ ರೋಗಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು. ಸಂಪೂರ್ಣ ಲಸಿಕೆ ಪಡೆಯುವುದು ಪ್ರತಿಯೊಬ್ಬ ಮಗುವಿನ ಜನ್ಮಸಿದ್ದ ಹಕ್ಕು ಹಾಗೂ ಲಸಿಕೆಗಳನ್ನು ಕೊಡುವುದು ಪ್ರತಿಯೊಬ್ಬ ಪೋಷಕರ ಕರ್ತವ್ಯ ಎಂಬ ಘೋಷಣೆಯೊಂದಿಗೆ ತಿಳಿಸಿಕೊಟ್ಟರು.

ಶಾಲೆಯ ಮುಖ್ಯಗುರುಗಳಾದ ದೇವಿಂದ್ರಮ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಸಿಬ್ಬಂದಿಗಳಾದ ರಾಘುಬಾಯಿ ಕುಲಕರ್ಣಿ, ಸುಮಲತಾ, ಪ್ರೇಮಾ, ರಾಜಶ್ರೀ, ವೀರೇಶ, ರಜನಿ, ಭೀಮಬಾಯಿ, ರೇಣುಕಾ, ಲಕ್ಷ್ಮೀ, ಇಮಾಮ್‍ಬಿ, ಶಿವುಕುಮಾರ, ಆಶಾ ಕಾರ್ಯಕರ್ತೆ ಪಾರ್ವತಿ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಬಿಮುಲ್ಲ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button