ಪ್ರಮುಖ ಸುದ್ದಿ
ಮಹಾಮಾರಿ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ.!
ಸುರಪುರಃ ಶಂಕಿತ ಡೆಂಗ್ಯು ಜ್ವರಕ್ಕೆ ಬಾಲಕ ಬಲಿ
ಯಾದಗಿರಿಃ ಮಹಾಮಾರಿ ಡೆಂಗ್ಯು ಜ್ವರದಿಂದ ಬಳಲುತ್ತಿದ್ದ ನಾಲ್ಕು ವರ್ಷದ ಬಾಲಕ ಅಸುನೀಗಿದ ಘಟನೆ ಯಾದಗಿರಿ ಜಿಲ್ಲೆಯ ಸುರುಪುರ ತಾಲೂಕಿನ ರಾಜನಕೋಳೂರ ಮೇಲಿನ ತಾಂಡಾದಲ್ಲಿ ನಡೆದಿದೆ.
ಸಂದೀಪ್ ಪವಾರ (4) ಎಂಬ ಮಗುವೇ ಡೆಂಗ್ಯು ಜ್ವರಕ್ಕೆ ಬಲಿಯಾದ ದುರ್ದೈವಿ. ಹಲವು ದಿನಗಳಿಂದ ಡೆಂಗ್ಯು ರೋಗದಿಂದ ಬಳಲುತ್ತಿದ್ದ ಮಗುವನ್ನು ಚಿಕಿತ್ಸೆಗಾಗಿ ಕಳೆದ ಎರಡು ದಿನಗಳ ಹಿಂದೆ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂದೀಪ್ ಕೊನೆಯುಸಿರೆಳೆದಿದ್ದಾನೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಮಗು ಡೆಂಗ್ಯು ಜ್ವರಕ್ಕೆ ಬಲಿಯಾಗಿರುವುದನ್ನು ತಿಳಿದ ಮೇಲಿನ ತಾಂಡದಲ್ಲಿ ನೀರವ ಮೌನ ಆವರಿಸಿದೆ. ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಉಂಡು ಮನೆಯಲ್ಲಿ ಓಡಾಡುತಿದ್ದ ಬಾಲಕ ಹಠಾತ್ತನೆ ಜ್ವರದಿಂದ ಬಳಲಿ, ಒಂದು ವಾರದಲ್ಲಿ ಸಾವನ್ನಪ್ಪಿದ್ದಾನೆ ಎಂದರೆ, ಕನಸೋ ನನಸೋ ತಿಳಿಯುತ್ತಿಲ್ಲ ಎಂದು ಮಹಿಳೆಯರು ಕಂಬನಿ ಮಿಡಿದಿದ್ದಾರೆ.