ಮೂವರು ಗೆಳೆಯರು ಕಾಲುವೆಗಿಳಿದರು, ಉಳಿದವರು ಮಾತ್ರ ಇಬ್ಬರು!
ಗೋಗಿ ಬಳಿ ಈಜಾಡಲು ಕಾಲುವೆಗೆ ಇಳಿದ ಯುವಕ ಸಾವು
ಶಹಾಪುರ: ಗೋಗಿಯ ಚಂದಾಹುಸೇನಿ ದರ್ಗಾದ ದರ್ಶನ ಪಡೆಯಲೆಂದು ಹೊರಟ ಮೂವರು ಸ್ನೇಹಿತರು ತಾಲೂಕಿನ ಗೋಗಿ ಗ್ರಾಮದ ಬಳಿ ದೊಡ್ಡ ಕಾಲುವೆಯಲ್ಲಿ ಈಜಾಡಲು ಇಳಿದಾಗ ನೀರಿನ ಸೆಳೆತಕ್ಕೆ ಓರ್ವ ಹರಿದು ಹೋದ ಘಟನೆ ಸೋಮವಾರ ನಡೆದಿದೆ.
ಯಾದಗಿರಿ ಮೂಲದ ಆಟೋ ಚಾಲಕ ಉಮರ್ ಅಬ್ದುಲ್ ಗಫೂರ(35) ಕಾಲುವೆಯ ನೀರಿನ ರಭಸಕ್ಕೆ ಹರಿದುಕೊಂಡು ಹೋಗಿ ಮೃತಪಟ್ಟ ದುರ್ದೈವಿ. ಈತನ ಜೊತೆ ಮಲ್ಲಿಕಾರ್ಜುನ ಹಾಗೂ ಅನಿಲಕುಮಾರ ಎಂಬ ಸ್ನೇಹಿತರಿಬ್ಬರು ಇದ್ದರು. ಅವರು ಸಾಕಷ್ಟು ಪ್ರಯತ್ನಪಟ್ಟರೂ ಆತನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಮೂವರು ಸ್ನೇಹಿತರು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಶಹಾಪುರ ನ್ಯಾಯಾಲಯಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ನ್ಯಾಯಾಲಯದಿಂದ ಹಿಂದಿರುಗುವ ವೇಳೆ ಘಟನೆ ನಡೆದಿದೆ.
ಭೀಮರಾಯನ ಗುಡಿ ಬಳಿಯ ಕೃಷ್ಣಾ ಕಾಲುವೆಯ ಬೋರುಕಾ ಪವರ್ ಕಾರ್ಪೋರೇಷನ್ ಗೇಟ್ ಹತ್ತಿರ ಇಂದು ಮೃತನ ದೇಹ ಪತ್ತೆಯಾಗಿದೆ. ಸ್ಥಳಕ್ಕೆ ಗ್ರಾಮೀಣ ಸಿಪಿಐ ವೀರಣ್ಣ ದೊಡ್ಮನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.