ಜಿಲ್ಲಾದ್ಯಂತ ಮಕ್ಕಳ ಚಿತ್ರೋತ್ಸವ ಚಿತ್ರ ಮಂದಿರದ ಮಾಲೀಕರಿಗೆ ಡಿಸಿ ಅವರಿಂದ ಕಟ್ಟುನಿಟ್ಟಿನ ಸೂಚನೆ
ಯಾದಗಿರಿ: ಜಿಲ್ಲಾಡಳಿತ ಹಾಗೂ ಚಿಕ್ಕಬಳ್ಳಾಪುರದ ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕøತಿಕ ಮಕ್ಕಳ ಚಿತ್ರ ಸಂಸ್ಥೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಮುಂಬರುವ ಜನೇವರಿ 5 ರಿಂದ 11 ವರೆಗೆ ರವಿವಾರ ಹೊರತುಪಡಿಸಿ 7 ದಿನಗಳ ಕಾಲ ಜಿಲ್ಲೆಯ ಚಿತ್ರಮಂದಿರಗಳಲ್ಲಿ ಮಕ್ಕಳ ಚಲನ ಚಿತ್ರೋತ್ಸವ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ ಅವರು ತಿಳಿಸಿದರು.
ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಯಾದಗಿರಿ ನಗರದ ಭಾಗ್ಯಲಕ್ಷ್ಮಿ, ಸ್ವಪ್ನ ಚಿತ್ರಮಂದಿರ, ಶಹಾಪೂರದ ಭವಾನಿ ಹಾಗೂ ಜಯಶ್ರೀ ಚಿತ್ರಮಂದಿರ, ಹುಣಸಗಿಯ ತ್ರಿಶೂಲ್ ಚಿತ್ರಮಂದಿರಗಳಲ್ಲಿ ಪ್ರತಿದಿನ ಬೆಳಿಗ್ಗೆ 8 ರಿಂದ 10 ಗಂಟೆವರೆಗೆ ಚಿತ್ರಮಂದಿರಗಳಲ್ಲಿ “ಕಂಸಾಳೆ-ಕೈಸಾಳೆ, 106-ಕನಸು, ಚಿಲಿಪಿಲಿ ಹಕ್ಕಿಗಳು, ಕು-ಕು, ಮಾನಿತ, ಬಾಲ್‍ಪೆನ್ ಹಾಗೂ ಅರಿವು” ಎಂಬ ಮಕ್ಕಳ ಚಲನ ಚಿತ್ರಗಳು ಯುಎಫ್‍ಒ ಮೂಲಕ ಪ್ರದರ್ಶಿಸಲಾಗುತ್ತಿದ್ದು ಪ್ರತಿ ವಿದ್ಯಾರ್ಥಿಗೆ ರೂ.15 ಪ್ರವೇಶದರ ನಿಗಧಿಪಡಿಸಲಾಗಿದೆ.
ಆಸನ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿಗಳನ್ನು ಕರೆತರಬೇಕು ಹಾಗೂ ವಿದ್ಯಾರ್ಥಿಗಳಿಗೆ ಚಿತ್ರಮಂದಿರ ತಲುಪಲು ಬಸ್ ಸೌಲಭ್ಯ ಕಲ್ಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಚಿತ್ರ ವೀಕ್ಷಿಸುವ ಚಿತ್ರಮಂದಿರಗಳಲ್ಲಿ ಸಕಲ ಮೂಲಭೂತ ಸೌಕರ್ಯ ಕಲ್ಪಿಸಬೇಕು, ಶೌಚಾಲಯ, ಆಸನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ದೀಪ, ಅಗ್ನಿ ಅನಾಹುತ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಅಗ್ನಿ ನಂದಕಗಳನ್ನು ಅಳವಡಿಸಬೇಕೆಂದು ಚಿತ್ರಮಂದಿರದ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಆಸನ ವ್ಯವಸ್ಥೆ ಮಾಡಬೇಕೆಂದು ಜಿಲ್ಲೆಯ ಎಲ್ಲಾ ಚಿತ್ರಮಂದಿರದ ಮಾಲೀಕರಿಗೆ ಸೂಚಿಸಲಾಗಿದೆ. ಚಿತ್ರೋತ್ಸವ ನಡೆಯುವ ಆರಂಭದ ದಿನದಿಂದ ಕೊನೆಯ ದಿನದವರೆಗೂ ಪೊಲೀಸ್ ಭದ್ರತೆ ಕಲ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ ನಾಯ್ಕ, ಯಾದಗಿರಿ ನಗರಸಭೆ ಪೌರಾಯುಕ್ತ ಸಂಗಪ್ಪ ಉಪಾಸೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಕರ್ನಾಟಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಮಕ್ಕಳ ಚಿತ್ರ ಸಂಸ್ಥೆಯ ವ್ಯವಸ್ಥಾಪಕರು ಹಾಗೂ ಜಿಲ್ಲೆಯ ವಿವಿಧ ಚಿತ್ರಮಂದಿರದ ಮಾಲೀಕರು ಭಾಗವಹಿಸಿದ್ದರು.