ವಿಶ್ವಕರ್ಮ ಸಮಾಜಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿಃ ರಾಜೂ ಪತ್ತಾರ
ವಿಶ್ವಕರ್ಮ ಸಮಾಜಕ್ಕೆ ಪ್ರತ್ಯೇಕ ಪ್ಯಾಕೇಜ್ ಘೋಷಿಸಿಃ ರಾಜೂ ಪತ್ತಾರ
ಶಹಾಪುರಃ ಕೊರೊನಾ ಹಾವಳಿಯಿಂದ ದೇಶದಾದ್ಯಂತ ಲಾಕ್ ಡೌನ್ ಜಾರಿಯಾಗಿ ವಿಶ್ವಕರ್ಮ ಸಮಾಜ ಬಂಧುಗಳು ತೀವ್ರ ನಷ್ಟ ಅನುಭವಿಸುತ್ತಿದ್ದು, ವಿಶೇಷ ಪ್ಯಾಕೇಜ್ ಮೂಲಕ ಸಹಾಯಧನ ನೀಡುವ ಅಗತ್ಯವಿದೆ ಎಂದು ತಾಲೂಕಾ ವಿಶ್ವಕರ್ಮ ಸಮಾಜದ ಮಾಜಿ ಅಧ್ಯಕ್ಷ ರಾಜೂ ಪತ್ತಾರ ಬೊಮ್ಮನಹಳ್ಳಿ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದ್ದಾರೆ.
ವಿಶ್ವಕರ್ಮ ಸಮಾಜದ ಪಂಚ ಕಸುಬಗಳಾದ ಬಡಿಗತನ, ಕಮ್ಮಾರ, ಶಿಲ್ಪಿ ಕೆತ್ತನೆ, ಕಂಚಗಾರ, ಅಕ್ಕಸಾಲಿಗ ಕಾಯಕವನ್ನೆ ನಂಬಿ ಬದುಕುತ್ತಿರುವ ಅಪಾರ ಜನ ಸಂಖ್ಯೆಯ ಬಂಧುಗಳು ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೆ ಕಳೆದ ಎರಡು ತಿಂಗಳಿಂದ ಊಟಕ್ಕೂ ಪರದಾಡುವ ಸ್ಥಿತಿ ಎದುರಿಸುತ್ತಿದ್ದಾರೆ.
ಕೆಲವರು ಕಾಯಕ ನಡೆಸಲು ಪಡೆದಿದ್ದ ಅಂಗಡಿ ಬಾಡಿಗೆ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಕುಟಬದ ನಿರ್ವಹಣೆ ಮಾಡಲು ಅಂಗಲಾಚುವ ಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನಲ್ಲಿಯೇ ನೂರಾರು ಕುಟುಂಬಗಳ ಸದ್ಯದ ಸ್ಥಿತಿ ದಯನೀಯವಾಗಿದೆ.
ಕಾರಣ ಸಿಎಂ ಯಡಿಯೂರಪ್ಪನವರು ಕೂಡಲೇ ವಿಶ್ವಕರ್ಮ ಸಮಾಜದ ಬಂಧುಗಳಿಗೆ ಪ್ರತ್ಯೇಕ ಪ್ಯಾಕೇಜ್ ನೀಡುವ ಮೂಲಕ ಸಹಾಯ ಹಸ್ತಚಾಚಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಸಮಾಜದ ಜನರು ಸಿಎಂ ಯಡಿಯೂರಪ್ಪಾಜೀ ಮೇಲೆ ಅಪಾರ ನಂಬಿಕೆ ಹೊಂದಿದ‌್ದು, ಶೀಘ್ರದಲ್ಲಿ ಸಮಾಜವನ್ನು ಕಡೆಗಣಿಸದೆ ಸೂಕ್ತ ಸಹಾಯಧನ ನೀಡುವ ಮೂಲಕ ಸಮಾಜದ ಕಾಯಕ ವೃತ್ತಿ ಪುನರ್ಜೀವನಕ್ಕೆ ಪ್ರೋತ್ಸಾಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕನಿಷ್ಠ ಕುಟುಂಬಕ್ಕೆ 10 ಸಾವಿರ ಧನಸಹಾಯ ಮತ್ತು ವೃತ್ತಿನಿರತ ವಿಶ್ವಕರ್ಮರಿಗೆ ಪ್ರೋತ್ಸಾಹ ಧನ ಅಥವಾ ಬಡ್ಡಿ ಇಲ್ಲದ ಸಾಲ ಸೌಲಭ್ಯ ಒದಗಿಸುವ ಕಾರ್ಯಮಾಡುವ ಜೊತೆಗೆ ಸಮಾಜದ ನಂಬಿಕೆಗೆಗೆ ಸಮರ್ಥನೀಯ ಕಾಳಜಿ ತೋರಬೇಕೆಂದು ಅವರು ಆಗ್ರಹಿಸಿದ್ದಾರೆ.