ಬನವಾಸಿಯಲ್ಲಿ ನಿತ್ಯೋತ್ಸವ ಕವಿ ನಿಸಾರ್ ಅಹ್ಮದ್ ಅವರಿಗೆ ಪಂಪ ಪ್ರಶಸ್ತಿ ಪ್ರಧಾನ
ಉತ್ತರಕನ್ನಡ: ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಶ್ರೇಷ್ಠ ಕವಿ ನಿಸಾರ್ ಅಹಮದ್ ಭಾಜರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಆಯೋಜಿಸಲಾಗಿರುವ ಕದಂಬೋತ್ಸವದ ಮಯೂರ ವರ್ಮ ವೇದಿಕೆಯಲ್ಲಿ ಕವಿ ನಿಸಾರ್ ಅಹಮದ್ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಸಚಿವ ದೇಶಪಾಂಡೆ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
2017ನೇ ಸಾಲಿನ ಪಂಪ ಪ್ರಶಸ್ತಿ 3 ಲಕ್ಷ ರೂ. ನಗದು, ಸ್ಮರಣಿಕೆ ಹಾಗೂ ಫಲಕವನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಅನನ್ಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಕವಿ ಕೆ.ಎಸ್.ನಿಸಾರ್ ಅಹಮದ್ ಅವರು ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ 5, 1936ರಲ್ಲಿ ಜನಿಸಿದರು. ಇದುವರೆಗೆ 14 ಕವನ ಸಂಕಲನ, 10 ಗದ್ಯ ಕೃತಿಗಳು, 5 ಮಕ್ಕಳ ಸಾಹಿತ್ಯ ಪುಸ್ತಕಗಳು, 5 ಅನುವಾದ ಗ್ರಂಥಗಳನ್ನು ಒಳಗೊಂಡಂತೆ ಹಲವು ಕೃತಿಗಳನ್ನು ಹೊರ ತಂದಿದ್ದಾರೆ.
ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದ ನಿಸಾರ್ ಅಹಮದ್ ಅವರು 1984-87ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿದ್ದರು. ನಾಡೋಜ ಪುರಸ್ಕಾರ, ಮಂಜೇಶ್ವರ ಗೋವಿಂದ ಪೈ ಪ್ರಶಸ್ತಿ, ಭಾರತ ಸರ್ಕಾರದ ಪ್ರತಿಷ್ಟಿತ ಪದ್ಮಶ್ರೀ, ಕುವೆಂಪು ಹೆಸರಿನ ವಿಶ್ವ ಮಾನವ ಪ್ರಶಸ್ತಿ, ವಿ.ಕೃ.ಗೋಕಾಖ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರನ್ನರಸಿ ಬಂದಿವೆ. ಶಿವಮೊಗ್ಗದಲ್ಲಿ ನಡೆದ 73ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದರು. ಕಳೆದ ವರ್ಷ ಮೈಸೂರು ದಸರಾ ಉದ್ಘಾಟನೆಯನ್ನು ಸಹ ನೆರವೇರಿಸಿದ್ದನ್ನು ಸ್ಮರಿಸಬಹುದಾಗಿದೆ.