ಅಲೆಮಾರಿ ಸಮುದಾಯದವರಿಗೆ ನಿವೇಶನ ನೀಡಲು ಆಗ್ರಹ
ಯಾದಗಿರಿ, ಶಹಾಪುರಃ ಗ್ರಾಮೀಣ ಪ್ರದೇಶಗಳಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಮತ್ತು ಬುಡಕಟ್ಟು ಸಮುದಾಯದ ಜನರಿಗೆ ನಿವೇಶನಗಳನ್ನು ನೀಡುವಂತೆ ಆಗ್ರಹಿಸಿ ಜಿಲ್ಲಾ ಯುವ ಜನ ಸಮಿತಿ ಇಲ್ಲಿನ ತಾಪಂ ಕಚೇರಿಗೆ ತೆರಳಿ ಕಾರ್ಯನಿರ್ವಾಹಣ ಅಧಿಕಾರಿ ಡಾ.ಎಸ್.ಕೆ.ಟಕ್ಕಳಕಿ ಅವರಿಗೆ ಮನವಿ ಸಲ್ಲಿಸಿತು.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯತ್‍ನಲ್ಲಿ ಸರ್ಕಾರ ಅಲೆಮಾರಿ ಮತ್ತು ಬುಡಕಟ್ಟು ಜನಾಂಗದ ಜನರಿಗೆ ಉಚಿತ ನಿವೇಶನ ಸೇರಿದಂತೆ ಇತರೆ ಸೌಲಭ್ಯ ಕಲ್ಪಿಸಲು ವಿಶೇಷ ಯೋಜನೆ ರೂಪಿಸಿದೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಆಡಳಿತ ಮಂಡಳಿಯ ನಿರ್ಲಕ್ಷದಿಂದ ಅಲೆಮಾರಿ ಸಮುದಾಯ ಸೂರಿಲ್ಲದೆ ಬಡತನದ ಬೇಗೆಯಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ಆರೋಪಿಸಿದರು. ಹಲವು ಗ್ರಾಪಂಗಳಲ್ಲಿ ನಿವೇಶನ ರಹಿತ ದೃಢಿಕರಣ ಪತ್ರ ನೀಡಿದರೂ ನಿವೇಶನ ಒದಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ ಆಯಾ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ತಾಪಂ ಇಓಗಳಾದ ನೀವುಗಳು ಕೂಡಲೇ ಅರ್ಹ ಅಲೆಮಾರಿ ಸಮುದಾಯದವರಿಗೆ ನಿವೇಶನ ನೀಡಲು ಸೂಚನೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವ ಜನ ಸಮಿತಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮಾನ್ಪಡೆ, ಭಾಗೇಶ ರಸ್ತಾಪುರ, ಹಣಮಂತ ಶಿರವಾಳ, ಶಾಂತಪ್ಪ ಮದರ್ಕಿ, ಭೀಮರಾಯ ಸಗರ, ಬಸವರಾಜ ಗಂಗನಾಳ, ಹುಲಗಪ್ಪ ಚಟನಳ್ಳಿ, ಸಾಯಬಣ್ಣ ಗುಂಡಳ್ಳಿ, ಮಹಾಂತೇಶ ಹೋತಪೇಟ, ಸಂತೋಷ ಮದ್ರಿಕಿ, ಮಾನಪ್ಪ ಮದ್ರಿಕಿ, ಮಲ್ಲಪ್ಪ ಬಾಬು ಸೇರಿದಂತೆ ಇತರರಿದ್ದರು.