ದೀಪಾವಳಿ ಹಬ್ಬ ಆಚರಣೆ ಹೇಗೆ ಬಂತು ಗೊತ್ತಾ..? ಹಬ್ಬದ ಇತಿಹಾಸ ತಿಳಿದಿರಲಿ.!
ಐತಿಹಾಸಿಕ ಪರಂಪರೆಯ ಹಿರಿಯ ಹಬ್ಬ ದೀಪಾವಳಿ
ಬಾಗಿಲು ತೆಗೆರೆಮ್ಮ
ಭಾಗ್ಯದ ಲಕ್ಷ್ಮಮ್ಮ
ತಂದೀವಿ ಜ್ಯೋತ್ಸಮ್ಮ ಕರಕೊಳ್ಳಿ
ಬಾಗಿಲು ತೆರೆದ ಕೈಗೆ
ಭಾಗ್ಯದ ಮಳಿಬಂದು
ದೀಪ ಕೊಡುವವರಿಗೆ ದೊರೆ ಪದವಿ ದೊರೆಯಲಿ
ದೀಪ ದೇವರ ಕರುಣಿಸಲಿ ಎಮಗೆಲ್ಲಾ…..
ಜ್ಞಾನ,ಸುಖ, ಸಂತೋಷಗಳ ಸಂಕೇತವಾಗಿರುವ ದೀಪಾವಳಿ ಹಬ್ಬ ಸರ್ವರಿಗೂ ಶುಭವಾಗಲಿ ಎಂದು ಜನಪದ ಕವಿಯೊಬ್ಬ ಹೀಗೆ ಹಾಡಿದ್ದಾನೆ. ದೀಪಾವಲಿ ಕೇವಲ ಭರತಖಂಡಕ್ಕೆ ಮತ್ರ ಸೀಮಿತವಲ್ಲ. ದೀಪಾವಳಿ ಹೋಲುವ ಹಬ್ಬಗಳನ್ನು ಪ್ರಪಂಚದಲ್ಲೆಲ್ಲಾ ಆಚರಿಸುತ್ತಾರೆ. ವಿವಧ ಧರ್ಮೀಯರು ಕೂಡ ಭಾಗವಹಿಸುತ್ತಾರೆ. ಈ ಹಬ್ಬಕ್ಕೆ ಪುರಾಣ ಕಾಲದಿಂದಲೂ ವಿಶೇಷ ಮಹತ್ವವಿದೆ.
ಸರ್ವ ಧರ್ಮೀಯರ ಹಬ್ಬ:
ಹಿಂದುಗಳು ಮಾತ್ರವಲ್ಲ ಮುಸ್ಲಿಮರು ಕೂಡ ದೀಪಗಳಿಗೆ ಪ್ರಾಶಸ್ತ್ಯ ನೀಡಿದ್ದು ಇತಿಹಾಸದಿಂದ ತಿಳಿದುಬರುತ್ತದೆ. ಅಕ್ಬರನ ಆಸ್ಥಾನದಲ್ಲಿದ್ದ ಲೇಖಕ ಅಬ್ದುಲ್ ಫಜರ್ ತನ್ನ ಐನ್-ಅ-ಅಕ್ಬರಿ ಎಂಬ ಗ್ರಂಥದಲ್ಲಿ ಅಕ್ಬರನ ಆಸ್ಥಾನದಲ್ಲಿ ಆಚರಿಸಲಾಗುತ್ತಿದ್ದ ದೀಪಗಳ ಹಬ್ಬವನ್ನು ವರ್ಣಿಸಿದ್ದಾನೆ. ಲಖ್ನೋದ ನವಾಬ್ ವಜೀದ್ ಆಲಿಶಾ ಕೂಡ ಅವನ ಕಾಲದಲ್ಲಿ ಉಪಯೋಗಿಸುತ್ತಿದ್ದ ದೀಪಗಳನ್ನು ಈಗಲೂ ಬಡೋದೆಯ ವಸ್ತು ಸಂಗ್ರಹಾಲಯದಲ್ಲಿ ನೋಡಬಹುದು.
ಧನ ತ್ರಯೋದರ್ಶಿಯಂದು ಲಕ್ಷ್ಮೀ ಪೂಜೆಯೊಂದಿಗೆ ಆರಂಭವಾಗಿ ಪ್ರತಿದಿನವು ವಿಶೇಷ ಪ್ರಾಶಸ್ತ್ಯ ಕಾಣುತ್ತೇವೆ. ದೇವಲೋಕದ ಬಡಿಗನೆನಿಸಿದ ವಿಶ್ವಕರ್ಮನ ಮಗಳನ್ನು ನರಕಾಸುರನು ಕದ್ದೊಯ್ದನು. ಅವಳನ್ನು ಶ್ರೀಕ್ರಷ್ಣನು ಹೋರಾಡಿ ರಕ್ಷಿಸಿದನು. ವಿಜಯೋತ್ಸವವಾಗಿ ಈ ದಿನ ಬೆಳಗಿನ ಜಾವವೇ ಆರತಿ ಮಾಡಿ, ಪಟಾಕಿಗಳನ್ನು ಹಾರಿಸುವರು ಅಲ್ಲದೇ ಶ್ರೀಕೃಷ್ಣನು 16000 ಸುರಸುಂದರಿಯರನ್ನು ಬಂಧನದಿಂದ ವಿಮೋಚನೆಗೊಳಿಸಿದ ಪ್ರಸಂಗವು ಈ ಸಂದರ್ಭದಲ್ಲಿಯೇ ನಡೆದಿದೆ.
ಯಮನಿಗೆ ಸಹೋದರಿಯ ಆತಿಥ್ಯ:
ದೀಪಾವಳಿ 5ನೇ ದಿನ ಯಮ ದ್ವಿತೀಯ, ಇಲ್ಲವೇ ಭಾವ ಬಿದಿದೆ ಎಂದು ಲೋಕಪ್ರಿಯ ಕಲ್ಪನೆ. ಅಂದರೆ ಯಮನು ಅಂದು ತನ್ನ ಸಹೋದರಿಯ ಮನೆಗೆ ಬಂದನಂತೆ. ಅವನಿಗೆ ತನ್ನ ಸಹೋದರಿಯ ಮನೆಯಲ್ಲಿ ಅಪ್ರತಿಮ ಅತಿಥ್ಯ ದೊರೆಯಿತು. ಈ ಹಿನ್ನಲೆಯಲ್ಲಿ ಭೂಲೋಕದಲ್ಲೂ ತಮ್ಮ ಸಹೋದರಿಯರಲ್ಲಿ ಆತಿಥ್ಯ ಪಡೆಯುವ ಪರಂಪರೆ ಪ್ರಾರಂಭವಯಿತು. ಅನೇಕ ನಿರ್ದೆಶನಗಳ ಮೂಲಕ ಈ ಹಬ್ಬವು ಮಾನವ ಸಮುದಾಯದಲ್ಲಿ ಒಳ್ಳೆಯ ಮೌಲ್ಯಗಳನ್ನು, ಸಂಸ್ಕಾರಗಳನ್ನು ಬೆಳೆಸುತ್ತದೆ ಎಂದು ಹೆಳಬಹುದು.
ಶುಭ-ಲಾಭ:
4ನೇ ಶತಮಾನದಲ್ಲಿ ರಾಜ ವಿಕ್ರಮಾದಿತ್ಯ ಈ ಹಬ್ಬದ ದಿನದಂದು ಸಿಂಹಾಸನಾರೂಢನಾಗಿದ್ದನು. ನವ ದೇಹಲಿಯಲ್ಲಿರುವ ಕುತುಬ್ ಮಿನಾರ್ ಹತ್ತಿರ ಲೋಹ ಸ್ತಂಭವನ್ನು ನಿರ್ಮಾಣ ಮಾಡಿದ್ದ. ಅದೇ ವಿಕ್ರಮಾದಿತ್ಯ ಸಿಂಹಾಸನಾರೂಢನಾಗಿ ಒಂದು ಶಕೆ ಪ್ರಾರಂಭ ಮಾಡಿದ್ದನು. ವ್ಯಾಪಾರಿಗಳು ಇಂದಿಗೂ ಈ ಶಕೆಯನ್ನು ಮಾನ್ಯ ಎಂದು ಪರಿಗಣಿಸಿ ತಮ್ಮ ಹೊಸ ವರ್ಷ ಪ್ರಾರಂಭ ಮಾಡುತ್ತಾರೆ. ತಮ್ಮ ಖಜಾನೆಯ ಮೇಲೆ ಶುಭ-ಲಾಭ ಎಂದು ಬರೆದು ಹೊಸ ಖಾತೆಯನ್ನು ಆರಂಭಿಸುತ್ತಾರೆ.
ಘಜನಿ ಮಹ್ಮದನ (977-1030) ಆಸ್ಥಾನ ಕವಿ ಅಲ್ಬೂರ್ನಿ ತನ್ನ ಗ್ರಂಥದಲ್ಲಿ ಕಾರ್ತಿಕ ಶುದ್ಧ ಪ್ರತಿಪದೆ ಎಂದು ಸೂರ್ಯ ತುಲಾ ರಾಶಿಯಲ್ಲಿ ಪ್ರವೇಶಿಸುತ್ತಾನೆ. ಆಗಲೇ ಹಿಂದುಗಳು ದೀಪಾವಳಿ ಹಬ್ಬವೆಂದು, ಆ ದಿನವನ್ನು ಬಲಿಪಾಡ್ಯ ಎಂದು ಆಚರಿಸುತ್ತಾರೆ. ಏಕೆಂದರೆ ರಾಜ ಬಲಿ ಚಕ್ರವರ್ತಿ ಪಾತಾಳಲೋಕದಿಂದ ಪೃಥ್ವಿಗೆ ಆಗಮಿಸಿ, ತನ್ನ ಭಕ್ತರ ಇಚ್ಚೇಯನ್ನು ನೆರವೇರಿಸುತ್ತಾನೆ ಎಂಬ ನಂಬಿಕೆ ಹಿಂದುಗಳಲ್ಲಿದೆ ಎಂದು ಬರೆದಿದ್ದಾನೆ. 12ನೇ ಶತಮಾನದಲ್ಲಿ ಮಾಳವ ದೇಶದ ರಾಜಭೋಜನು ತನ್ನ ರಾಜ ಮಾರ್ಥಂಡ ಎಂಬ ಗ್ರಂಥದಲ್ಲಿ ದೀಪಾವಳಿಯನ್ನು ಸುಖರತ್ರಿಎಂದು ಕರೆದಿದ್ದಾನೆ. ಜಹಾಂಗೀರನು (1605-1627) ಸಿಖ್ಕರ ಆರನೇ ಗುರು ಹರಿಗೋವಿಂದ ಸಿಂಗ್ ಮತ್ತು ಅವರ ಅನುಯಾಯಿ 52 ಸಮರ್ಥ ರಾಜರುಗಳೊಂದಿಗೆ ಗ್ವಾಲಿಯರ್‍ನ ಕೋಟೆಯೋಳಗೆ ಬಂಧನಕ್ಕೊಳಗಾಗಿದ್ದರು. ಕೊನೆಗೆ ಗುರುವಿನ ಬುದ್ದಿವಂತಿಕೆಯಿಂದ ಬಂಧನದಿಂದ ವಿಮುಕ್ತರಾದ ದಿನದಂದು ಹಿಂದುಗಳು ದೀಪಾವಳಿ ಆಚರಿಸುತ್ತಿದ್ದರು. ಸಿಖ್ಖರು ತಮ್ಮ ವಿಮೋಚನೆಯನ್ನು ದಿನವನ್ನು ಮುಕ್ತಿ ದಿವಸವೆಂದು ದೀಪಾವಳಿ ಆಚರಿಸುತ್ತಾರೆ.
ಆರ್ಯ ಸಮಾಜ;
ಇವರು ದೀಪಾವಳಿಯನ್ನು ಜ್ಯೋತಿ ದಿವಸದ ರೂಪದಲ್ಲಿ ಆಚರಿಸುತ್ತಾರೆ.30ನೇ ಅಕ್ಟೋಬರ್ 1833 ರಂದು ಆರ್ಯ ಸಮಾಜದ ಸಂಸ್ಥಾಪಕ ಸ್ವಾಮಿ ದಯಾನಂದ ಸರಸ್ವತಿ ಅವರಿಗೆ ತಮ್ಮ ಅಚಿತಿಮ ದಿನ ಸಮೀಪಿಸುತ್ತಿದೆ. ಎಂದು ತಿಳಿಯಿತು.ಆ ದಿನ ದೀಪಾವಳಿಯಾಗಿತ್ತು.ತಮ್ಮ ಶಿಷ್ಯರನ್ನು ಕರೆದು ಬಾಗಿಲು,ಕಿಟಕಿ ತೆರೆದು ದೀಪಗಳನ್ನು ಹಚ್ಚಿಸಿ ಬೆಳಗಿಸುವಂತೆ ಹೆಳಿದರು ಅನಂತರ ಗಾಯತ್ರಿ ಮಂತ್ರ ಪಠಣ ಮಾಡುತ್ತಾ ತಮ್ಮ ಅಚಿತಿಮಾ ಶ್ವಾಸವೆಲೆದು ಸಮಾಧಿಯಲ್ಲಿ ಲೀನರಾದರು.
ತ್ರೇತಾಯುಗದಲ್ಲಿ ಶ್ರೀರಾಮನು ಲಂಕಾಧಿಪತಿಯ ವಿರುದ್ಧ ವಿಜಯಗಳಿಸಿ 14 ವರ್ಷಗಳ ವನವಾಸದ ನಂತರ ಆಯೋಧ್ಯೆಗೆ ಹಿಂದಿರುಗಿದನು ಅಂದಿನಿಂದ ದೀಪಾವಳಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ ಪ್ರತೀಕವಾಗಿ ಆಚರಿಸುವ ಹಬ್ಬವಾಯಿತು.
ಲಂಬಾಣಿ ಬುಡಕಟ್ಟಿನಲ್ಲಿ ದೀಪಾವಳಿ :
ಲಂಬಾಣಿ ಬುಡಕಟ್ಟು ಸಮುದಾಯದಲ್ಲಿ ದೀಪಾವಳಿಯ ಅಮವಾಸ್ಯೆಯ ದಿನ ಲಕ್ಷ್ಮೀ ಪೂಜೆಯ ಮೊದಲು “ಹನುಮಾನೇರ ರೋಟ್ (ಗೋ ಪೂಜೆ) ಮಾಡುತ್ತಾರೆ. ಅಂದು ರಾತ್ರಿ ಯುವತಿಯರು ಶೃಂಗರಿಸಿಕೊಂಡು ಹರಳೆಣ್ಣೆ ದೀಪದ ಆರತಿಗಳನ್ನು ಹಚ್ಚಿಕೊಂಡು, ತಾಂಡಾದ ನಾಯಕನ ಮನೆಗೆ ಹೋಗಿ ಆರತಿ ಬೆಳಗಿ ಅವರಿಂದ ಅಪ್ಪಣೆ ಪಡೆದು ನಂತರ ತಾಂಡಾದ ಎಲ್ಲಾ ಮನೆಗಳಿಗೆ ಹೋಗಿ ಆರತಿ ಬೆಳಗುತ್ತಾರೆ. ಪ್ರತಿಯೊಂದು ಮನೆಯವರು ಯುವತಿಯರು ಹಿಡಿದಿರುವ ಢಾಕಣಿ (ದೀಪ) ದಲ್ಲಿ ನಾಲ್ಕಾಣಿ, ಎಂಟ್ಟಾಣೆ ಹಾಕಿ ಆಶಿರ್ವಾದಿಸುತ್ತಾರೆ.
ಮಾರನೆ ದಿನ ಲಂಬಾಣಿಗರು ತಮ್ಮ ಜನಾಂಗದ ಪೂರ್ವಜ್ಜರಿಗೆ ಸಿಹಿ ಅಡುಗೆ ಮಾಡಿ ಹೋಮ ಮಾಡಿಸುತ್ತಾರೆ. ಹೋಮ ಹಾಕುವಾಗ ಮನೆಯಲ್ಲಿಯ ಜನರು ಪ್ರತಿಯೊಬ್ಬರ ಹೆಸರು ಹೇಳಿ ಅವರಿಗೆ ಆಯುರಾರೋಗ್ಯ ಹಾಗೂ ಸಂಪತ್ತನ್ನು ದಯಪಾಲಿಸುವಂತೆ ಪೂರ್ವಜ್ಜರಲ್ಲಿ ಪ್ರಾರ್ಥಿಸುತ್ತಾರೆ. ಮದುವೆ ವಯಸ್ಸಿಗೆ ಬಂದ ಯುವತಿಯರು ಗೋವುಗಳ ಹೆಸರಿನಲ್ಲಿ ಈ ಹಬ್ಬದಲ್ಲಿ ಉಪವಾಸ ವೃತವನ್ನು ಕೈಗೊಳ್ಳುತ್ತಾರೆ. ಗೋ ಪೂಜೆ ಮಾಡಿದ ನಂತರ ಯುವತಿಯರು ಉಪವಾಸ ವೃತವನ್ನು ಬಿಡುತ್ತಾರೆ. ಗೋ ಪೂಜೆ ತಾಂಡಾ ಸಂಸ್ಕೃತಿ ಪ್ರಮುಖ ಸಂಪ್ರದಾಯವಾಗಿದೆ. (ತಾಂಡಾ ಸಂಸ್ಕೃತಿ ಡಾ. ಪಿ.ಕೆ. ಖಂಡೋಬಾ ಪ್ರಸಾರಂಗ ಗು.ವಿ.ಗು 1990) ಹೀಗೆ ದೀಪಾವಳಿ ಹಬ್ಬವನ್ನು ವಿವಿಧ ಧರ್ಮಿಯರಲ್ಲಿ, ಜನಾಂಗಗಳಲ್ಲಿ ವೈವಿಧ್ಯಮಯವಾಗಿ ಅಚರಿಸುತ್ತಾರೆ. ಸರ್ವರಿಗೂ ಬೆಳಕಿನ ಹಬ್ಬದ ಹಾರ್ಧಿಕ ಶುಭಾಶಯಗಳು.
-ರಾಘವೇಂದ್ರ ಹಾರಣಗೇರಾ.
ಸಮಾಜಶಾಸ್ತ್ರ ಉಪನ್ಯಾಸಕರು.
ಶಹಾಪುರ ಮೊ. 9901559873.





