ಪ್ರಮುಖ ಸುದ್ದಿ

ಪಿಎಂ ಸ್ವನಿಧಿ ಯೋಜನೆ ಬೀದಿ ಬದಿ ವ್ಯಾಪಾರಿಗಳಿಗೆ ಆಶಾಕಿರಣ – ಡಾ.ರಾಗಪ್ರಿಯಾ

ಯಾದಗಿರಿ– ಕೋವಿಡ್-19  ಲಾಕ್ ಡೌನ್ ಅವಧಿಯಲ್ಲಿ ಬೀದಿ ಬದಿ ವ್ಯಾಪಾರಸ್ಥರ ಜೀವನೋಪಾಯದ ಮೇಲೆ ಪರಿಣಾಮ ಬೀರಿದ್ದು, ಬೀದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಹಾಗೂ ಅವರ ವ್ಯವಹಾರವನ್ನು ಪುನರ್ ಪ್ರಾರಂಭಿಸಲು ಪಿ.ಎಂ ಸ್ವನಿಧಿ ಯೋಜನೆ ಅತ್ಯಂತ ಮಹತ್ವದ ಆಶಾಕಿರಣವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಅಭಿಪ್ರಾಯಪಟ್ಟರು.

ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ, ನಗರಸಭೆ, ಯಾದಗಿರಿ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಇವರ ಸಂಯುಕ್ತಾಶ್ರದಲ್ಲಿ ನಡೆದ ಪ್ರಧಾನಮಂತ್ರಿ ಬೀದಿ ವ್ಯಾಪಾರಿಗಳ ಆತ್ಮ ನಿರ್ಭರ್ ನಿಧಿ (ಪಿ.ಎಂ.ಸ್ವನಿಧಿ) ಡಿಜಿಟಲ್ ವಹಿವಾಟಿನ ತರಬೇತಿ ವಿಶೇಷ ಅಭಿಯಾನ ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಿಜಿಟಲ್ ಯುಗದಲ್ಲಿ ಬೀದಿ ಬದಿ ವ್ಯಾಪಾರಿಗಳು ಸಹ ಕ್ಯಾಶ್ ಬ್ಯಾಕ್ ವಿಧಾನವನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಈ ಯೋಜನೆಯ ವಿಧಾನದ ಬಗ್ಗೆ ಬೀದಿ ಬದಿ ವ್ಯಾಪಾರಿಗಳಿಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಈ ಯೋಜನೆಯ ಲಾಭ ಪಡೆಯುವದಕ್ಕಾಗಿ ಆಧಾರ ಕಾರ್ಡ್, ಬೀದಿ ಬದಿ ವ್ಯಾಪಾರಿ ಎಂಬ ಸರ್ಟಿಫಿಕೇಟ್ ಸೇರಿದಂತೆ ಇತರ ದಾಖಲಾತಿಗಳನ್ನು ನೀಡಿ ಸಾಲದ ಸೌಲಭ್ಯವನ್ನು ಪಡೆಯಬಹುದು. ಜಿಲ್ಲೆಯಲ್ಲಿ ಹೀಗಾಗಲ್ಲೇ ಪಿ.ಎಂ. ಸ್ವನಿಧಿ ಯೋಜನೆಯಡಿಯಲ್ಲಿ 2500 ಅರ್ಜಿಗಳು ಬಂದಿದ್ದು, ಅವುಗಳಲ್ಲಿ ಸುಮಾರು 1500 ಅರ್ಜಿಗಳಿಗೆ ಸಾಲದ ಸೌಲಭ್ಯವನ್ನು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಜಿಗಳಿಗೂ ಸಾಲ ನೀಡುವ ವ್ಯವಸ್ಥೆ ಮಾಡಲಾಗುತ್ತದೆಂದು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಮ್ಯಾಗೇರಿ ಅವರು ಮಾತನಾಡಿ, ಪಿ.ಎಂ ಸ್ವನಿಧಿ ಯೋಜನೆಯಲ್ಲಿ ಅತಿ ಕಡಿಮೆ ಬಂಡವಾಳ ಹೂಡಿ ವ್ಯಾಪಾರ ಮಾಡಬಹುದಾಗಿದೆ. ಹೀಗಾಗಿ ಎಲ್ಲ ಬೀದಿ ಬದಿ ವ್ಯಾಪಾರಿಗಳು ಈ ಯೋಜನೆಯ ಲಾಭವನ್ನು ಪಡೆಯಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷರಾದ ವಿಲಾಸಗೌಡ ಬಿ.ಪಾಟೀಲ್ ಅವರು ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಬೀದಿ ಬದಿ ವ್ಯಾಪಾರಿಗಳು ತುತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಅದಕ್ಕಾಗಿಯೇ ಪ್ರಧಾನಮಂತ್ರಿಯವರು ಈ ಸ್ವನಿಧಿಯನ್ನು ಜಾರಿಗೊಳಿಸಿದ್ದಾರೆ. ಅರ್ಹ ವ್ಯಾಪಾರಿಗಳೆಲ್ಲರೂ ಈ ನಿಧಿಯನ್ನು ಪೂರ್ಣಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಬೇಕೆಂದರು.

ಇದೇ ಸಂದರ್ಭದಲ್ಲಿ ನಗರಸಭೆಯ ಉಪಾಧ್ಯಕ್ಷೆ ಪ್ರಭಾವತಿ ಎಂ.ಕಲಾಲ, ನಗರಸಭೆಯ ಪೌರಾಯುಕ್ತ ಭೀಮಣ್ಣ ಟಿ.ನಾಯಕ, ಲೀಡ್ ಬ್ಯಾಂಕ್ ಮ್ಯಾನೇಜರ್ ಭೀಮರಾವ್ ಪಾಂಚಾಳ, ಕರ್ನಾಟಕ ಗ್ರಾಮೀಣ ಬ್ಯಾಂಕ್ ವಿಭಾಗೀಯ ವ್ಯವಸ್ಥಾಪಕ ಹನುಮಂತಪ್ಪ, ಡಿ.ಎಸ್.ಹೆಚ್, ಎಸ್.ಬಿ.ಐ ಮುಖ್ಯ ವ್ಯವಸ್ಥಾಪಕರಾದ ಶ್ರೀನಿವಾಸ್, ನಗರ ಅಭಿಯಾನ ವ್ಯವಸ್ಥಾಪಕರಾದ ವಿಠೋಬ ಬಿ, ವಿಜಯಕುಮರ್ ಪಾಟೀಲ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button