ಪ್ರಮುಖ ಸುದ್ದಿ
ಯಾದಗಿರಿ ಜಿಲ್ಲಾಡಳಿತ ಕನ್ನಡಮಯವಾಗಿರಲಿ ಡಿಸಿ ಸೂಚನೆ
ಜಿಲ್ಲಾಧಿಕಾರಿಗಳಿಂದ ತಾಯಿ ಭುವನೇಶ್ವರಿ ಪೂಜೆ
ಯಾದಗಿರಿಃ ಕನ್ನಡ ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳಾದ ಎಂ.ಕೂರ್ಮಾ ರಾವ್ ಅವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲಾ ಅಧಿಕಾರಿಗಳು ಕಡತ ಮಂಡಿಸುವಾಗ, ಟಿಪ್ಪಣಿ ಬರೆಯುವಾಗ, ಪತ್ರ ವ್ಯವಹಾರ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಆಡಳಿತವನ್ನು ಕನ್ನಡಮಯವಾಗಿಸಬೇಕು. ಅರ್ಜಿ ವಿಲೇವಾರಿಯಲ್ಲಿ ವಿಳಂಬ ನೀತಿ ಅನುಸರಿಸಬಾರದು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್, ಸಹಾಯಕ ಆಯುಕ್ತರಾದ ಶಂಕರಗೌಡ ಎಸ್.ಸೋಮನಾಳ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.