ಪ್ರಶ್ನೆ ಪತ್ರಿಕೆ ಲೀಕ್ ಮಾಡಿದ ಪರಿ ಕಂಡು ಅಧಿಕಾರಿಗಳಿಗೆ ಶಾಕ್ : ವಿದ್ಯಾರ್ಥಿ ಡಿಬಾರ್
ಕಲಬುರಗಿ : ಜಿಲ್ಲೆಯ ಅಫಜಲಪುರ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಾರ್ಥಿಯಾಗಿದ್ದ ಖಾಸಗಿ ಶಾಲಾ ವಿದ್ಯಾರ್ಥಿ ಅಬ್ಬಾಸ್ ಅಲಿಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಡಿಬಾರ್ ಗೊಳಿಸಿದ್ದಾರೆ. ಕಾರಣ ಪರೀಕ್ಷೆ ಆರಂಭವಾಗಿ ಅರ್ಧ ಗಂಟೆಯಲ್ಲೇ ಅಬ್ಬಾಸ್ ಕಿಟಕಿ ಮೂಲಕ ಹೊರಗಿದ್ದವರಿಗೆ ಪ್ರಶ್ನೆ ಪತ್ರಿಕೆಯನ್ನು ತೋರಿಸಿದ್ದ. ಆ ಮೂಲಕ ಮೊಬೈಕ್ ಕ್ಯಾಮರಾದಲ್ಲಿ ಫೋಟೊ ಕ್ಲಿಕ್ಕಿಸಿ ಪ್ರಶ್ನೆ ಪತ್ರಿಕೆ ಲೀಕ್ ಮಾಡುವ ಸಂಚಿನಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.
ಈ ಬಗ್ಗೆ ಗಮನಹರಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕಿ ವಿದ್ಯಾರ್ಥಿ ಅಬ್ಬಾಸ್ ನನ್ನು ಡಿಬಾರ್ ಮಾಡಿದ್ದಾರೆ. ಅಫಜಲಪುರ ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ನಡೆಯದಂತೆ ನಿಗಾವಹಿಸಲಾಗುವುದು. ಹೀಗಾಗಿ, ಪ್ರತಿಭಾವಂತ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.