ಸಂಭ್ರಮ ಸಡಗರದಿಂದ ನಾಗ ಪಂಚಮಿ ಆಚರಣೆ
ನಾಗದೇವತೆಗೆ ಹಾಲೆರದು ಸಂಭ್ರಮಿಸಿದ ಮಹಿಳೆಯರು
ಯಾದಗಿರಿ, ಶಹಾಪುರಃ ಸಾಂಪ್ರದಾಯಿಕ ಹಬ್ಬವಾದ ನಾಗರ ಪಂಚಮಿ ದಿನವಾದ ಸೋಮವಾರದಂದು ಮಹಿಳೆಯರು ಮಕ್ಕಳು ನಗರದ ನಾಗರ ಕೆರೆ ದಡದ ನಾಗದೇವತೆ ಕಟ್ಟೆ ಮತ್ತು ಬೆಟ್ಟದ ಶೀಲವಂತೇಶ್ವರ ದೇವಸ್ಥಾನ ಪ್ರದೇಶದಲ್ಲಿರುವ ನಾಗದೇವತೆ ಕಟ್ಟೆಗೆ ತೆರಳಿ ಕೊಬ್ಬರಿಯ ಬಟ್ಟಲಿನಲ್ಲಿ ಹಾಲೇರೆದು ನೈವೇದ್ಯ ಸಮರ್ಪಿಸಿ ದರ್ಶನ ಪಡೆದು ಸಂಭ್ರಮಿಸಿದರು.
ನಾಗ ಪಂಚಮಿ ಹಬ್ಬ ಅಂಗವಾಗಿ ಮಹಿಳೆಯರು ವಾರ ಮೊದಲೇ ವಿವಿಧ ಖಾದ್ಯ ಪದಾರ್ಥ ಸಿಹಿ ತಿನಿಸುಗಳನ್ನು ತಯ್ಯಾರಿ ಮಾಡಿಕೊಂಡು, ರವಿವಾರ ಬೆಲ್ಲದ ಹಾಲೆರೆದು ಸೋಮವಾರ ಬಿಳಿ ಹಾಲೆರೆಯುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.
ಪಂಚಮಿ ಹಬ್ಬವೆಂದರೆ ಮಹಿಳೆಯರಲ್ಲಿ ಎಲ್ಲಿಲ್ಲದ ಸಡಗರ ಸಂಭ್ರಮ. ಮಕ್ಕಳಿಗೂ ಅಷ್ಟೆ ಮನೆಯಲ್ಲಿ ತಯಾರಿಸಿದ ವಿವಿಧ ಬಗೆ ಬಗೆಯ ತಿಂಡಿ ತಿನಿಸು ತಿನ್ನುವದರೊಂದಿಗೆ ಉಯ್ಯಾಲೆ ಆಡುವ ಮೂಲಕ ಮಕ್ಕಳು, ಯುವತಿಯರು, ಮಹಿಳೆಯರು ಸಂಭ್ರಮಿಸುತ್ತಿರುವದು ಕಂಡು ಬಂದಿತು.
ಬೆಳಗ್ಗೆಯಿಂದಲೇ ಮಹಿಳೆಯರು ನಗರದ ಆಯಾ ಬಡಾವಣೆ ಸಮೀಪದಲ್ಲಿರುವ ನಾಗ ದೇವತೆ ಕಟ್ಟೆ, ಗುಡಿಗಳಿಗೆ ತೆರಳಿ ನೈವೇದ್ಯ ಅರ್ಪಿಸಿ, ಹಾಲೆರೆಯವುದು ಕಂಡು ಬಂದಿತು. ಸಂಜೆ ನೆರೆ ಹೊರೆಯವರಿಗೆ ರವೆ ಉಚಿಡಿ, ಕರ್ಚಿಕಾಯಿ, ಶಂಕರ ಪಾಳ್ಯ, ಚಕಲಿ, ಮಂಡಕ್ಕಿ ಚುಡುವಾ ಇತರೆ ತಿಂಡಿ ತಿನಿಸುಗಳನ್ನು ಪರಸ್ಪರ ಹಂಚುವ ಮೂಲಕ ಯುವತಿಯರು, ಮಕ್ಕಳು ಹೊಸ ಬಟ್ಟೆ, ಹೊಸ ಹೊಸ ಸೀರೆಗಳನ್ನು ತೊಟ್ಟು ಒಡವೆಗಳನ್ನು ಧರಿಸಿ ಸಿಂಗರಿಸಿಕೊಂಡು ಪರಸ್ಪರ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.
ನಾಗರ ಪಂಚಮಿ ಮಹಿಳೆಯರಲ್ಲಿ ಖುಷಿ ತರುವ ಹಬ್ಬ
ಪ್ರತಿ ವರ್ಷ ಸಾಂಪ್ರಾದಾಯಿಕವಾಗಿ ನಾಗರ ಪಂಚಮಿ ಆಚರಿಸುತ್ತೇವೆ. ಪಂಚಮಿ ಹಬ್ಬ ಎಂದರೆ, ಮಹಿಳೆಯರಿಗೆ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಮನೆಯಲ್ಲಿ ಬಗೆ ಬಗೆಯ ಸಿಹಿ ತಿಂಡಿ ತಯಾರಿಸುತ್ತೇವೆ. ಶ್ರದ್ಧಾ ಭಕ್ತಿಯಿಂದ ನಾಗ ದೇವತೆಗೆ ಪೂಜೆ ಸಲ್ಲಿಸುತ್ತೇವೆ. ಈ ಹಬ್ಬಕ್ಕೆ ವಾರಗಟ್ಟಲೆ ಸಿಹಿ, ಖಾದ್ಯ ಪದಾರ್ಥ ತಯಾರಿ ನಡೆಸುತ್ತೇವೆ. ಜೋಕಾಲಿ ಆಡುವ ಮೂಲಕ ಸಂಭ್ರಮಿಸುವ ಹಬ್ಬ ನಾಗ ಪಂಚಮಿ.
ಇಡಿ ಕುಟುಂಬ ಸಮೇತ ಪಂಚಮಿ ನಂತರದ ದಿನಗಳಲ್ಲಿ ಮನೆಯಲ್ಲಿ ತಯಾರಿಸಿದ ಖಾದ್ಯ ಪದಾರ್ಥ, ತಿಂಡಿಗಳನ್ನು ಕಟ್ಟಿಕೊಂಡು ಒಂದು ದಿನ ಪಿಕ್‍ನಿಕ್ ತೆರಳುವ ವಾಡಿಕೆ. ಅಲ್ಲೆಲ್ಲ ಸಾಕಷ್ಟು ಗಿಡಮರಗಳು ಇರುವ ಸ್ಥಳವೇ ಆಯ್ಕೆ ಮಾಡಲಾಗುತಿತ್ತು. ಅಲ್ಲಿಯೇ ಎಲ್ಲಾ ಮಹಿಳೆಯರು ಮಕ್ಕಳು ಜೊತೆಗೂಡಿ ಉಯ್ಯಾಲೆ ಹಾಡುತ್ತಿದ್ದೇವೆ. ಪ್ರಸ್ತುತ ಉಯ್ಯಾಲೆ ಆಟ ಕಡಿಮೆಯಾಗಿದೆ.
-ಶೀವಲೀಲಾ ಬಿ. ಹೂಗಾರ.