ಜೀವನ ಎಂದರೇನು.? ನೋಡುವ ದೃಷ್ಠಿಕೋನ ಬದಲಾಗಲಿ.!
ಸಮೃದ್ಧ ಸಮಾಜ ನಿರ್ಮಾಣಕ್ಕೆ ಸಹನೆ ಅಗತ್ಯ
-ಜಯಶ್ರೀ. ಅಬ್ಬಿಗೇರಿ.
ಜೀವನವೆಂದರೇನು? ಎಂಬ ಪ್ರಶ್ನೆಗೆ ನಮ್ಮಲ್ಲಿ ಅನೇಕರ ಉತ್ತರ. ಜೀವನವೆಂದರೆ ಸಂಘರ್ಷಮಯವಾದುದು ಎನ್ನುವದೇ ಆಗಿದೆ. ಈ ಉತ್ತರ ನಮ್ಮ ಮನಃಸ್ಥಿತಿಗೆ ಹಿಡಿದ ಕನ್ನಡಿ. ಜೀವನ ಆಯ್ಕೆಗಳ ಸರಣಿಯೂ ಹೌದು. ಆಯ್ಕೆ ಮಾಡಿಕೊಂಡಿದ್ದನ್ನು ನಿರಂತರ ಹೋರಾಟದ ಮೂಲಕ ಸಾಧಿಸುವದರಿಂದ ಜೀವನ ಪಾವನವಾಗುತ್ತದೆ.
ಈ ಹೋರಾಟದಲ್ಲಿ ಒಮ್ಮೆ ಜಯ ಇನ್ನೂ ಕೆಲವೊಮ್ಮೆ ಅಪಜಯಗಳು ಸರ್ವೆಸಾಮಾನ್ಯ.. ಗೆಲುವು ಉಂಟಾದಾಗ ಹಿಗ್ಗುವುದು ಸೋಲು ಉಂಟಾದಾಗ ಕುಗ್ಗುವುದು ಸಾಮಾನ್ಯರ ಪಾಡು.ನಮ್ಮಲ್ಲಿ ಸಮಗ್ರತೆಯ ಭಾವವೇ ಇಲ್ಲವೆಂದಾಗ ಸಮನ್ವಯತೆಯನ್ನು ಕಾಣುವದು ದುರ್ಲಭ. ಇದು ಮಾನವ ಮನಸ್ಸಿನ ತೀರ ಸಾದಾರಣ ಸ್ಥಿತಿ. ಇಂಥ ಮನಸ್ಸನ್ನು ಅಸಾಧಾರಣ ಸ್ಥಿತಿಗೆ ಏರಿಸುವದು ಹೇಗೆ?
ಅಶಕ್ತವಾದ ಮನಸ್ಸನ್ನು ಶಕ್ತಿಶಾಲಿಯನ್ನಾಗಿಸುವದು ಹೇಗೆ? ಎಂಬ ಪ್ರಶ್ನೆ ಯಶ ಸಾದಿಸಬೇಕೆನ್ನುವರನ್ನು ಕಾಡುತ್ತಿರುತ್ತದೆ. ಇದಕ್ಕೆ ಉತ್ತರವೆಂದರೆ, ಸಹನೆಯೆಂಬ ತಪಸ್ಸನ್ನಾಚರಿಸುವದು ಎಂದು ಹೇಳಬಹುದು.
ತಾಳ್ಮೆ ಒಂದು ತಪಸ್ಸು ಇದ್ದಂತೆ.ಸಹನೆ ಎಂಬುದು ಸಾಮಾನ್ಯವಾದುದಲ್ಲ.
ಈ ತಪಸ್ಸೇ ನಮ್ಮಲ್ಲಿರುವ ಸಕಲ ದೌರ್ಬಲ್ಯಗಳನ್ನು ದಹಿಸಿ, ದೈನ್ಯಾವಸ್ಥೆಯನ್ನು ದೂರಗೊಳಿಸಿ, ನಮ್ಮನ್ನು ಯಸಸ್ಸಿನ ತುತ್ತ ತುದಿಯ ಮೇಲೆ ಕರೆದೊಯ್ಯುತ್ತದೆ. ಆಧುನಿಕ ಒತ್ತಡದ ಜೀವನದಲ್ಲಿ ನಾವು ಮೇಲಿಂದ ಮೇಲೆ ಕೋಪಗೊಳ್ಳುತ್ತಿದ್ದೇವೆ.. ಕೋಪ ಮನಸ್ಸಿನ ದೌರ್ಬಲ್ಯದ ಸಂಕೇತವಾಗಿದೆ. ತಾಳ್ಮೆ ಸಫಲತೆಯ ಸಂಕೇತ ಎಂಬುದನ್ನು ಅರಿಯಬೇಕಾಗಿದೆ. “ತಾಳಿದವನು ಬಾಳಿಯಾನು” ಎಂಬ ಗಾದೆ ಮಾತನ್ನು ಕೇಳಿದರೆ, ದೀರ್ಘವಾದ ಸುಖಕರ ಬಾಳಿಗೆ ತಾಳ್ಮೆ ಅತ್ಯಗತ್ಯ ಎಂಬುದು ತಿಳಿಯುವದು.
ನಮ್ಮಲ್ಲಿ ಬಹಳ ಜನ ತಾಳ್ಮೆ ಎನ್ನುವದು ಕೇವಲ ಸಾಧಕರಿಗೆ ಮೀಸಲಾಗಿರುತ್ತದೆ ಎಂದು ಹೇಳುತ್ತಿರುತ್ತಾರೆ. ಅವರು ಸಹನೆ ಮಾನವನ ಅಮೂಲ್ಯವಾದ ಗುಣ ಎಂಬುದನ್ನು ಮರೆತಿರುತ್ತಾರೆ. ಸಾಮಾನ್ಯರೂ ಸಹ ಸಹನೆಯನ್ನು ಸಾಧಿಸಬಹುದು. ಸಮಾಜದಲ್ಲಿ ಹೆಚ್ಚುತ್ತಿರುವ ಅವಘಡಗಳನ್ನು ತಪ್ಪಿಸಲು ಸಹನೆಯಿಂದ ಮಾತ್ರ ಸಾಧ್ಯ. ಅನೇಕ ಅಪರಾಧಗಳಿಗೆ ಕಾರಣ ದ್ವೇಷ ಮತ್ತು ಅತಿಯಾದ ಕೋಪ, ಸಹನೆಯ ಕೊರತೆಯಿಂದಾಗಿ ಸಮೃದ್ಧ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ.
ಅನೇಕ ಮಹಾಪುರುಷರು ವೀರ ಮಹಿಳೆಯರು ಜೀವನದಲ್ಲಿ ಕಷ್ಟ ನಷ್ಟಗಳನ್ನು ಅನುಭವಿಸಿದರೂ, ತಾಳ್ಮೆಗೆಡದೆ, ತಮ್ಮ ಗುರಿಯನ್ನು ಸಾಧಿಸಿದರು. ಅಂಬೇಡ್ಕರ್ ತಮ್ಮ ಜೀವನದಲ್ಲಿ ಅನೇಕ ಕಹಿ ಯಾತನೆಗಳನ್ನು ಅನುಭವಿಸಿ, ಬಡತನದಲ್ಲಿ ಬೆಂದರೂ, ಸಹನೆ ಕಳೆದುಕೊಳ್ಳದೇ ಇದ್ದುದಕ್ಕಾಗಿ ಬೃಹತ್ ರಾಷ್ಟ್ರಕ್ಕೆ ‘ಸಂವಿಧಾನ ಶಿಲ್ಪಿ ಎನಿಸಿಕೊಂಡರು.ಗಾಂಧಿಜಿಯವರ ಶಾಂತಿ ಅಹಿಂಸೆಯ ತತ್ವದಿಂದ ನಾವಿಂದು ಸ್ವತಂತ್ರ ಭಾರತದ ಪ್ರಜೆಗಳಾಗಿದ್ದೇವೆ.
ಸಹನೆಯ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಅಷ್ಟೇನೂ ಸುಲಭದ ಕೆಲಸವಲ್ಲವಾದರೂ ಅಸಾಧ್ಯವೇನಲ್ಲ. “ತಾಳ್ಮೆ ಕಹಿಯಾದರೂ ಅದರ ಫಲ ಸಿಹಿ” ಎನ್ನುವದನ್ನು ತಿಳಿಯಬೇಕು. ಕೆಲವು ಸಂದರ್ಭಗಳಲ್ಲಿ ಧರ್ಮ ಸಂಕಟದ ಪರಿಸ್ಥಿತಿ ಹುಟ್ಟಿಕೊಂಡಿರುತ್ತದೆ. ಆಗ ತಾಳ್ಮೆಯಿಂದಿರಬೇಕೆ? ಅಥವಾ ಪ್ರತಿಕ್ರಿಯೆ ತೋರಬೇಕೆ? ಎಂಬ ಸಮಸ್ಯೆ ತಲೆದೋರುತ್ತದೆ. ಅಂಥ ಸ್ಥಿತಿಯಲ್ಲಿ ಅನುಭವಿಗಳ ಸಲಹೆ ಪಡೆಯಬಹುದು. ಒಂದು ವೇಳೆ ಸೂಕ್ತ ಸಲಹೆ ಸಿಗದಿದ್ದರೆ, ಇಕ್ಕಟ್ಟಿಗೆ ಸಿಲುಕಿದಾಗ ಪ್ರತಿಕ್ರಿಯೆ ತೋರಿಸುವದೇ ಒಳಿತು. ಏಕೆಂದರೆ, ಸಹನೆಯ ಹೆಸರಿನಲ್ಲಿ ದುರ್ಬಲರಾಗಬಾರದು. ಅದರೆ, ಸಂದರ್ಭಗಳ ಯುಕ್ತಾಯುಕ್ತತೆಯನ್ನು ತಿಳಿದು ಕೆಲವೆಡೆ ತಾಳ್ನೆ ತೆಗೆದುಕೊಳ್ಳಬೇಕು. ಇನ್ನು ಕೆಲವು ಕಡೆ ಪ್ರತಿಕ್ರಿಯೆ ತೋರಬೇಕು.
ನಾವು ಯೋಚಿಸಿದಂತೆ ಇತರರು ನಡೆದುಕೊಳ್ಳಬೇಕು ಎಂದು ನಿರೀಕ್ಷಿಸಿದರೆ ತಾಳ್ಮೆ ಕಳೆದುಕೊಳ್ಳುವದು ಖಂಡಿತ. ಬೇರೆಯವರ ಕುರಿತು ಪ್ರೀತಿಯ ಭಾವ,ಕ್ಷಮೆ ಬೆಳೆಸಿಕೊಂಡು ನಮ್ಮಂತೆ ಪರರು ಎಂದು ಭಾವಿಸಿ ಅವರೆಡೆಗೆ ದಯೆಯ ದೃಷ್ಟಿ ಬೀರದರೆ ಸಹನೆ ನಮ್ಮ ಸೊತ್ತಾಗುವದು.ಜೀವನದ ನಿಜವಾದ ಸೌಂದರ್ಯ ಅಡಗಿರುವದೇ ಸಹನೆಯಲ್ಲಿ.
ತಪ್ಪುಗಳನ್ನು ಯಾರೂ ಉದ್ದೇಶಪೂಗರ್ವಕವಾಗಿ ಮಾಡುವದಿಲ್ಲ. ತಪ್ಪುಗಳ ಹಿಂದಿನ ಕಾರಣ ಹುಡುಕಲು ಪ್ರಯತ್ನಿಸಬೇಕು.ಅಪರಾಧಗಳನ್ನು ಧ್ವೇಷಿಸಬೇಕೆ ಹೊರತು ಅಪರಾಧಿಯನ್ನಲ್ಲ.ಎಂಬುದನ್ನು ಅನುಸರಿಸಿದರೆÀÉ ಮಾನವ ಸಂಬಂಧಗಳ ಮೌಲ್ಯ ವರ್ಧಿಸುವದರೊಂದಿಗೆ ಸಹನೆಯೂ ನಮ್ಮದಾಗುತ್ತದೆ.
ಕನಸಿಲ್ಲದ ಜೀವನ ಹೇಗಿಲ್ಲವೋ ಹಾಗಯೇ ಸಹನೆಯಿಲ್ಲದ ಸುಂದರ ಜೀವನವೂ ಇಲ್ಲ. ನಮ್ಮ ಬೆನ್ನ ಹಿಂದೆ ಮಾತನಾಡುವವರ ಬಗ್ಗೆ ತಲೆ ಕೆಸಿಸಿಕೊಂಡು ತಾಳ್ಮೆ ಕಳೆದುಕೊಳ್ಳಬಾರದು. ಸಹನೆಯಿಂದ ನಾವು ಗೆಲುವು ಸಾಧಿಸಿದಾಗ ನಿಂದಿಸುವವರೆ ನಮ್ಮ ಮುಖಸ್ತುತಿ ಮಾಡುವರು.ಪ್ರತಿಯೊಂದರಲ್ಲೂ ಪ್ರತಿಯೊಬ್ಬರಲ್ಲೂ ಉತ್ತಮವಾದುದನ್ನು ಹುಡುಕುವದು ಸಹನೆಗೆ ಪೂರಕವಾದುದು.ಜೀವನದಲ್ಲಿ ಕಷ್ಟಗಳು ಸಹಜ ಅವುಗಳನ್ನು ಸಹನೆಯಂಬ ಶಕ್ತಿಯಿಂದ ಗೆದ್ದು ನಿಲ್ಲುವವನೇ ಮನುಜ.
ಸಮಾಜದಲ್ಲಿ ಅನಾರೋಗ್ಯಕರ ಹಾಗೂ ಅಸುಖಕರ ವಾತಾವರಣವು ದಿನೇ ದಿನೇ ಹೆಚ್ಚುತ್ತಿದೆ.ಇದಕ್ಕೆ ಕಾರಣ ನಮ್ಮಲ್ಲಿ ಸಹನೆ ಮತ್ತು ಸಂಯಮಗಳ ತೀವ್ರ ಅಭಾವವೇ ಆಗಿದೆ.ಆದ್ದರಿಂದ ನಾವೆಲ್ಲರೂ ಸಹನೆಯನ್ನು ಸಹನೆಯ ಅರ್ಥವನ್ನು ತಿಳಿದುಕೊಂಡು ರೂಢಿಸಿಕೊಳ್ಳುವದು ಅತ್ಯವಶ್ಯಗಳಲ್ಲಿ ಒಂದಾಗಿದೆ. ಸಹನೆ ರೂಢಿಸಿಕೊಡಾಗ ಮಾತ್ರ ಸುಖೀ ಜೀವನವನ್ನು ಪಡೆದು ಸಮೃದ್ಧ ಸಮಾಜವನ್ನು ಕಟ್ಟಲು ಸಾಧ್ಯ. ತಾಳ್ಮೆಯನ್ನು ನಾವು ರೂಢಿಸಿಕೊಂಡರೆ ಭುವಿಯೇ ಸ್ವರ್ಗವಾಗಿ ಗೋಚರಿಸುವದು ಖಚಿತ. ಒಮ್ಮೆ ನಾವು ಜಗವನ್ನು ಜನರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಂಡರೆ ಸಾಕು ಸಹನಾಮಯಿಗಳು ನಾವಾಗುತ್ತೇವೆ.
ಲೇಖಕಿ-ಜಯಶ್ರೀ ಅಬ್ಬಿಗೇರಿ.
.