ಪ್ರಮುಖ ಸುದ್ದಿ

ಪದವಿ ಕಾಲೇಜು ಆವರಣದಲ್ಲಿ ಟೌನ್ ಹಾಲ್ – ಕಕಸೇನೆ ಪ್ರತಿಭಟನೆ

ಪ್ರಥಮ ದರ್ಜೆ ಕಾಲೇಜಿಗೆ ಬಂದ ಅನುದಾನ ತನಿಖೆಗೆ ಆಗ್ರಹ

ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಕಟ್ಟಡ ಬದಲಾವಣೆ ವಿದ್ಯಾರ್ಥಿಗಳ ಆಕ್ರೋಶ

ಶಹಾಪುರಃ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮತ್ತು ಪದವಿ ಕಾಲೇಜು ಆವರಣದಲ್ಲಿ ಟೌನ್ ಹಾಲ್ ನಿರ್ಮಾಣ ವಿರೋಧಿಸಿ ಇಲ್ಲಿನ ಕಲ್ಯಾಣ ಕರ್ನಾಟಕ ಯುವ ಸೇನೆ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸೇನೆಯ ತಾಲೂಕು ಅಧ್ಯಕ್ಷ ಭೀಮಾಶಂಕರ ಕಟ್ಟಿಮನಿ, ಪದವಿ ಕಾಲೇಜು ಅಭಿವೃದ್ಧಿಗೆ ಮತ್ತು ವಿವಿಧ ಕ್ರೀಡಾ ಸಾಮಾಗ್ರಿ ಖರೀದಿಗೆ ಸಾಕಷ್ಟು ಅನುದಾನ ಬಂದಿದ್ದು, ಅದನ್ನು ಸಮರ್ಪಕವಾಗಿ ಬಳಕೆ ಮಾಡದೆ ಕಾಲೇಜು ಪ್ರಾಂಶುಪಾಲರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ಕಾಲೇಜು ಆವರಣದಲ್ಲಿ ನೆಮ್ಮದಿ ಊರು ಯೋಜನೆಯಡಿ ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಪೂರಕ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಅದರಲ್ಲಿ ಅಡಿಟೋರಿಯಂ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಉದ್ಯಾನವನ ಮತ್ತು ಕ್ರೀಡಾ ಒಳಾಂಗಣ ಸೇರಿದಂತೆ ವಿವಿಧ ಸೌಲಭ್ಯ ಹೊಂದಿದ ಬೃಹತ್ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎನ್ನಲಾಗಿತ್ತು.

ಆದರೆ ಸದರಿ ಕಟ್ಟಡವನ್ನು ಟೌನ್ ಹಾಲ್ ಎಂದು ನಾಮಕರಣ ಮಾಡಲಾಗಿದ್ದು, ನೆಮ್ಮದಿ ಊರು ಯೋಜನೆ ಅನುದಾನ ಬದಲಾಯಿಸಲಾಗಿದೆ ಎಂಬ ಸಂಶಯ ಮೂಡಿದ್ದು, ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ಯೋಜನೆ ಅನುದಾನ ಕುರಿತು ಸ್ಪಷ್ಟಣೆ ನೀಡಬೇಕು. ಕಾಲೇಜು ಪ್ರಾಂಶುಪಾಲರಿಗೆ ಕೇಳಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಟೌನ್ ಹಾಲ್ ಸಾರ್ವಜನಿಕರ ಉಪಯೋಗಕ್ಕೆ ಬರುವಂತಹದ್ದು, ಕಾಲೇಜು ಆವರಣದಲ್ಲಿ ಟೌನ್ ಹಾಲ್ ಮಾಡಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ. ಕಾರಣ ಅಡಿಟೋರಿಯಂ ನಿರ್ಮಾಣ, ಡಿಜಿಟಲ್ ಗ್ರಂಥಾಲಯ ಸೇರಿದಂತೆ ಶೈಕ್ಷಣಿಕವಾಗಿ ಬೇಕಾಗುವ ಎಲ್ಲಾ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಕಾಲೇಜು ಆವರಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳ ಒದಗಿಸಲಾಗಿದ್ದು, ಕಳಪೆ ಕಾಮಗಾರಿಯಿಂದ ಕೂಡಿದೆ. ಅದನ್ನು ತನಿಖೆ ನಡೆಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೆ ಪದವಿ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಬೇಕಿದ್ದ ಲ್ಯಾಪ್ ಟಾಪ್ ವಿತರಣೆಯಲ್ಲಿ ಅವ್ಯವಹಾರ ನಡೆದಿದೆ. ಇನ್ನೂ ನೂರಾರು ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡದೆ ವಂಚನೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ವರ್ಷ ಕಾಲೇಜು ಅಭಿವೃದ್ಧಿ ಮತ್ತು ಎನ್ನೆಸ್ಸೆಸ್ ವಿಭಾಗಕ್ಕೆ ಸಾಕಷ್ಟು ಅನುದಾನ ಬರುತ್ತದೆ. ಸಮರ್ಪವಾಗಿ ಬಳಕೆ ಮಾಡದೆ ಹಣವನ್ನು ಸ್ವತಃ ಸಂಬಂಧಿಸಿದ ಕಾಲೇಜು ಮುಖ್ಯಸ್ಥರು ಇತರರು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ಜಗನ್ನಾಥರಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಮಾನಪ್ಪ ಪಾಳೇದ್, ವಿಶ್ವನಾಥ, ಬಲಭೀಂ ಬೇವಿನಳ್ಳಿ, ರಡ್ಡಿ ಗುತ್ತಿಪೇಠ, ಜಗಧೀಶ ಅನವಾರ, ಪ್ರಕಾಶ ಎ.ಕಟ್ಟಿಮನಿ, ಹೊನ್ನಪ್ಪ ಹೋತಪೇಟ, ನಾಗಪ್ಪ, ಭೀಮು ಕನ್ಯಾಕೋಳೂರ, ಪ್ರೇಮಾ ಗುತ್ತಿಪೇಟ, ಕೃಷ್ಣಾ ಮದ್ರಿಕಿ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button