ಬಿಜೆಪಿ ಟಿಕೆಟ್ ನನ್ನ ಕೈಯಲಿ ಇಲ್ಲ -ಬಿ.ಎಸ್.ಯಡಿಯೂರಪ್ಪ
ವಿಜಯಪುರ: 2018ರ ವಿಧಾನಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ನೀಡುವುದು ನನ್ನ ಕೈಯಲ್ಲಿ ಇಲ್ಲ. ಬೆಂಗಳೂರಲ್ಲಿ ಕುಳಿತು ನಾನು ಬಿಜೆಪಿ ಅಬ್ಯರ್ಥಿಗಳ ಆಯ್ಕೆ ಮಾಡೋದಿಲ್ಲ. ದೆಹಲಿಯಲ್ಲಿ ಕುಳಿತು ಅಮಿತ್ ಷಾ ಅವರೂ ಫೈನಲ್ ಮಾಡೋದಿಲ್ಲ. ಬದಲಾಗಿ 224 ಕ್ಷೇತ್ರಗಳಲ್ಲೂ ಎರಡು ಬಾರಿ ಸರ್ವೇ ಮಾಡಿಸಲಾಗುವುದು. ಆ ಬಳಿಕವಷ್ಟೇ ಕಾರ್ಯಕರ್ತರು, ಮತದಾರರ ಅಭಿಪ್ರಾಯದ ಆಧಾರದ ಮೇಲೆ ಗೆಲ್ಲುವ ಅಬ್ಯರ್ಥಿಗೆ ಟಿಕೆಟ್ ನೀಡಲಾಗುವುದು ಎಂದು ಮುದ್ದೇಬಿಹಾಳದಲ್ಲಿ ಮಾಜಿ ಸಿಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಮುದ್ದೇಬಿಹಾಳದಲ್ಲಿ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಅವರು ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ನಿಮ್ಮ ಸರ್ಕಾರ ಆಗಲೇ ದಿವಾಳಿ ಆಗಿದೆ. ಆದರೂ ಚುನಾವಣೆ ಬಂದಿದೆ ಎಂದು ಬಾಯಿಗೆ ಬಂದಂತೆ ಯೋಜನೆಗಳನ್ನು ಘೋಷಣೆ ಮಾಡಿ ಜನರ ದಿಕ್ಕು ತಪ್ಪಿಸುವ ವ್ಯರ್ಥ ಯತ್ನ ನಡೆಸಿದ್ದೀರಿ. ಆದರೆ, ಜನ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ನಾನು ಜನರಿಗೆ ಎಂದೂ ದ್ರೋಹ ಬಗೆಯಲ್ಲ ಎಂದರು.