ಶೈಕ್ಷಣಿಕ ಅರ್ಹತೆ ಮೊದಲು ಗಳಿಸಿ ಸಮುದಾಯದ ಜನರಿಗೆ ಸಚಿವ ತಿಮ್ಮಾಪುರ ಸಲಹೆ
ಶಹಾಪುರಃ ಮಾದಿಗರ ಜನ ಜಾಗೃತಿ ಕಾರ್ಯಕ್ರಮ
ಯಾದಗಿರಿಃ ಮಾದಿಗ ಸಮುದಾಯ ಮೊದಲು ಶೈಕ್ಷಣಿಕವಾಗಿ ಅರ್ಹತೆ ಪಡೆಯಬೇಕು. ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು. ಅಂದಾಗ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಸನ್ಮಾನ ಸ್ವೀಕರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿಲ್ಲೆಯ ಶಹಾಪುರ ನಗರದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾದಿಗ ದಂಡೋರ ಸಮಿತಿ ಆಯೋಜಿಸಿದ್ದ ಮಾದಿಗರ ಜನ ಜಾಗೃತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮುದಾಯದ ಬೆಳವಣಿಗೆಗೆ ಮುಖಂಡರ ಒಗ್ಗಟ್ಟು ಅಗತ್ಯವಿದೆ. ಸಮಾಜದಲ್ಲಿಯೇ ಎರಡು ಮೂರು ಗುಂಪುಗಳನ್ನು ಕಟ್ಟಿಕೊಂಡು ಸಂಘಟನೆ ಮಾಡಿದಲ್ಲಿ, ಸಮುದಾಯ ಅಭಿವೃದ್ಧಿ ಹೇಗೆ ಸಾಧ್ಯ. ಹೀಗಾಗಿ ಪ್ರಾಮಾಣಿಕವಾಗಿ ಸಮುದಾಯದ ಬೆಳವಣಿಗೆ ಕುರಿತು ಚಿಂತಿಸುವ ಪ್ರಮುಖರೊಡನೆ ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು.
ಅಲ್ಲದೆ ಸಮಾಜದಲ್ಲಿ ದುಡಿಯುವವರು ಯಾವುದೇ ಪಕ್ಷಬೇಧ ಮರೆತು ಕೆಲಸ ಮಾಡಬೇಕು. ಸಮಾಜದಲ್ಲಿ ರಾಜಕೀಯ ಬೆರೆಯಬಾರದು. ಸಮಾಜದ ಯಾವುದೇ ವ್ಯಕ್ತಿ ರಾಜಕೀಯದಲ್ಲಿ ಮುಂದಿದ್ದರೆ, ಅಂತವರಿಗೆ ಪ್ರೋತ್ಸಾಹ ನೀಡಿ, ಗೌರವ ನೀಡಿ ಆದರೆ ರಾಜಕೀಯ ಮಾಡಬೇಡಿ ಎಂದು ಸಲಹೆ ನೀಡಿದರು.
ಅಲ್ಲದೆ ಸಮಾಜ ಹಿತಾಸಕ್ತಿ ಬಹು ಮುಖ್ಯವಾಗಿದೆ. ಸರ್ವ ಜನಾಂಗದೊಂದಿಗೆ ಉತ್ತಮ ಬಾಂಧ್ಯವ್ಯ ಹೊಂದಿರಬೇಕು. ಕಾನೂನಿನ ಬಲವಿದೆ ಅಟ್ರಾಸಿಟಿ ಮಾಡುತ್ತೇನೆ ಎಂದು ನಾಗರಿಕರಲ್ಲಿ ಭಯ ಉಂಟುಮಾಡಿದ್ದಲ್ಲಿ, ಯಾರು ನಿಮ್ಮನ್ನು ಹತ್ತಿರ ಕರೆದುಕೊಳ್ಳವದಿಲ್ಲ. ಇದನ್ನು ಮೊದಲು ಅರಿತು ನಡೆಯಿರಿ.
ಅನ್ಯಾಯವಾದಲ್ಲಿ ಅದಕ್ಕೆ ಕಾನೂನಾತ್ಮಕ ಹೋರಾಟ ನಡೆಸಿ ನ್ಯಾಯ ಪಡೆಯೋಣ. ಸುಖಾಸುಮ್ಮನೆ ಎಲ್ಲದಕ್ಕೂ ಅಟ್ರಾಸಿಟಿ ಎಂದು ಸಮಾಜದ ಮರ್ಯಾದೆ ಕಳೆಯಬೇಡಿ ಎಂದು ಕಿವಿ ಮಾತು ಹೇಳಿದರು. ಆದಾಗ್ಯು ಶಹಾಪುರದ ನಮ್ಮ ಸಮಾಜದ ಜನ ಅಂತಹ ಕೆಸಲ ಮಾಡುವದಿಲ್ಲ ಉತ್ತಮರಿದ್ದಾರೆ ಎಂದು ತಿಳಿದಿದ್ದೇನೆ.
ರಾಜಕೀಯದಲ್ಲಿ ಬೆಳೆಯಬೇಕಾದಲ್ಲಿ ಎಲ್ಲ ಸಮುದಾಯದ ಪ್ರೀತಿ ವಿಶ್ವಾಸ ಗಳಿಸಿಕೊಳ್ಳಬೇಕಿರುವುದು ಮುಖ್ಯವಿದೆ. ಸಮಾಜಿಕ ನ್ಯಾಯದಡಿ ಬದುಕು ನಡೆಸಿ, ದಬ್ಬಾಳಿಕೆ ಕಾನೂನಿನ ಅಸ್ತ್ರ ಬಳಸಿ ಆಮೇಲೆ ಪಶ್ಚಾತಾಪ ಪಡಬೇಡಿ ಎಂದರು.
ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿದರು. ದಂಡೋರ ಸಮಿತಿ ರಾಜ್ಯಧ್ಯಕ್ಷ ಎಂ.ಶಂಕರಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಆರಬೋಳ, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಮಲ್ಲಣ್ಣಗೌಡ ಉಕ್ಕಿನಾಳ, ಸಫಾಯಿ ಕರ್ಮಚಾರಿ ಮಂಡಳಿ ಅಧ್ಯಕ್ಷ ಎಸ್.ಮರೆಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು. ಸಮಿತಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಗೋಗಿ ಅಧ್ಯಕ್ಷತೆವಹಿಸಿದ್ದರು.
ಸ್ಥಳೀಯ ಮುಖಂಡರಾದ ವೆಂಕಟೇಶ ಆಲೂರ, ರುದ್ರಪ್ಪ ಹುಲಿಮನಿ, ಶಾಂತಪ್ಪ ಕಟ್ಟಿಮನಿ, ವಾಸುದೇವ ಕಟ್ಟಮನಿ, ಭೀಮರಾಯ ಕಾಂಗ್ರೆಸ್, ಸೋಮಶೇಖರ ಗುತ್ತಿಪೇಠ, ಮಹಾದೇವಪ್ಪ ಸಾಲಿಮನಿ ಸೇರಿದಂತೆ ಇತರರು ಭಾಗವಹಿಸಿದ್ದರು. ಉಪನ್ಯಾಸಕ ಧರ್ಮಣ್ಣ ಬಡಿಗೇರ ನಿರೂಪಿಸಿ. ಮಲ್ಲಿಕಾರ್ಜುನ ಉಮ್ರದೊಡ್ಡಿ ವಂದಿಸಿದರು.