ವಿವೇಕಾನಂದರ ಚಿಕ್ಯಾಗೋ ಭಾಷಣ ನೆನಪಿಗಾಗಿ ಪುಸ್ತಕ ಅಭಿಯಾನ
500 ಮನೆಗಳ ಸಂಪರ್ಕ, ವಿವೇಕರ ಸಂದೇಶ ಪ್ರಚಾರ, ವೀರಕೇಸರಿ ಪುಸ್ತಕ ವಿತರಣೆ
yadgiri, ಶಹಾಪುರಃ ಸ್ವರಾಜ್ಯಕ್ಕೆ ಮುಕ್ಕಾಲ್ನೂರು ಸಂಭ್ರಮದ ಆಚರಣೆಯ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಮನೆ-ಮನೆಗೆ ಮುಟ್ಟಿಸುವ ವೀರಕೇಸರಿ ಅಭಿಯಾನ ಶಹಾಪುರ ನಗರದಲ್ಲಿ ಯುವ ಬ್ರಿಗೇಡ್ ಹಾಗೂ ಗ್ರಾಮೀಣ ಗೆಳೆಯರ ಬಳಗದ ಸಂಯುಕ್ತಾಶ್ರಯದಲ್ಲಿ ನಡೆಯಿತು.
ವಿವೇಕಾನಂದರು ಚಿಕ್ಯಾಗೋದಲ್ಲಿ ಭಾಷಣ ಮಾಡಿದ ನೆನಪಿಗಾಗಿ ಸೆಪ್ಟೆಂಬರ್ 11 ರಂದೇ ಅಭಿಯಾನ ಪ್ರಾರಂಭಿಸಲಾಗಿದೆ. ಸೋಮವಾರ ಶಹಾಪುರ ನಗರದಲ್ಲಿ ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಸ್ವಾಮಿ ವಿವೇಕರ ಪುಸ್ತಕಗಳನ್ನು ವಿತರಿಸುವ ಮೂಲಕ ವಿನೂತನವಾಗಿ ಜಾಗೃತಿ ಮತ್ತು ವಿವೇಕರ ಆದರ್ಶ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮೀಣ ಗೆಳೆಯರ ಬಳಗದ ಅಧ್ಯಕ್ಷ ಮಾಂತೇಶ ವಿ.ಗಿಂಡಿ, ವಿವೇಕಾನಂದರು ಅಮೇರಿಕಾದಲ್ಲಿ ಸಾರಿದ ಹಿಂದುತ್ವದ ಸಂದೇಶವನ್ನು ಮನೆಮನೆಗೆ ಮುಟ್ಟಿಸಿ ಬರಲಾಗುತ್ತಿದ್ದು, ಜೊತೆಗೆ ಮನೆಯ ಬಾಗಿಲ ಮೇಲೆ ವಿವೇಕಾನಂದರ ಸಂದೇಶವುಳ್ಳ ಒಂದು ಸ್ಟಿಕರ್ ಹಚ್ಚುವುದರ ಜೊತೆಗೆ ವೀರಕೇಸರಿ ಎಂಬ ಪುಟ್ಟ ಪುಸ್ತಕವೊಂದನ್ನು ನೀಡುತ್ತಿದ್ದೇವೆ. ಜೊತೆಗೆ ಕೊರೊನಾ ಬಗ್ಗೆ ಭಯ ಆತಂಕ ಬೇಡ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ ಎಂದು ಸಲಹೆ ನೀಡುತ್ತಿದ್ದೇವೆ.
ಒಟ್ಟಾರೆ ಶಹಾಪುರದಲ್ಲಿ 500 ಮನೆಗಳ ಸಂಪರ್ಕ ಬೆಸೆಯುವ ಗುರಿ ಹೊಂದಿದ್ದು, ಭಾನುವಾರ ಮತ್ತು ಸೋಮವಾರ 100 ಮನೆಗಳ ಸಂಪರ್ಕ ಮಾಡಲಾಗಿದ್ದು, ಎಲ್ಲೆಡೆ ಜನರ ಪ್ರತಿಕ್ರಿಯೇ ಅದ್ಭುತವಾಗಿದೆ. ಉತ್ಸಾಹದಿಂದ ಪುಸ್ತಕವನ್ನು ಸ್ವೀಕರಿಸಿ ತಮ್ಮ ಮಿತ್ರರ ಮನೆಗೆ ಹೋಗುವಂತೆ ಕೇಳಿಕೊಳ್ಳುತ್ತಿದ್ದಾರೆ. ಸಮಾಜ ಸದಾ ಹಸನಗೊಂಡ ಭೂಮಿ, ಸಸಿ ನೆಡಲು ನಾವು ಸಿದ್ದರಾಗಿರಬೇಕಷ್ಟೆ. ಮುಂದಿನ ವಾರಾಂತ್ಯದಲ್ಲಿ ಅಭಿಯಾನ ಮುಂದುವರೆಯಲಿದೆ. ವಿವೇಕಾನಂದರು ಹೇಳಿದ ಹಾಗೆ, ಇತರರಿಗಾಗಿ ಮಾಡುವ ಅಲ್ಪ ಕಾರ್ಯವು ನಮ್ಮಲ್ಲಿ ಶಕ್ತಿಯನ್ನು ಉದ್ದೀಪನಗೊಳಿಸುವುದು ಹಾಗೂ ಕ್ರಮೇಣ ನಮ್ಮ ಹೃದಯದಲ್ಲಿ ಸಿಂಹಬಲವನ್ನು ಮೂಡಿಸುವುದು ಸತ್ಯವೆನಿಸುತ್ತಿದೆ ಸಾಕಾರಗೊಳ್ಳುತ್ತಿದೆ ಇದು ಸ್ವನಾಭವ ಎಂದರು.
ಮತ್ತು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು. ಈ ಸಂದರ್ಭದಲ್ಲಿ ಸಂಗಮೇಶ ಮುತ್ತಿನ, ವಿರೇಶ ಉಳ್ಳಿ, ಚನ್ನಯ್ಯಸ್ವಾಮಿ ಸ್ಥಾವರಮಠ, ವೆಂಕಟೇಶ ಕುಲಕರ್ಣಿ, ರಮೇಶ ಶಿರ್ಣಿ, ವಿಶ್ವನಾಥ ಸ್ಥಾವರಮಠ ಇತರರಿದ್ದರು.
