ಆರೋಗ್ಯ-ಅರಿವು ಬೀದಿ ನಾಟಕ ಮೂಲಕ ಜನಜಾಗೃತಿ
ಯಾದಗಿರಿ:ಆರೋಗ್ಯ ಯೋಜನೆಗಳ ಕುರಿತು ಬೀದಿ ನಾಟಕಗಳ ಮೂಲಕ ಜನರಲ್ಲಿ ಜನಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಆರ್‍ಸಿಹೆಚ್ ಅಧಿಕಾರಿ ಡಾ.ವಿವೇಕಾನಂದ ಟೆಂಗೆ ಹೇಳಿದರು.
ಜಿಲ್ಲಾಧಿಕಾರಿಗಳ ಆಡಳಿತ ಕಚೇರಿ ಎದುರು ಬುಧವಾರ 2017-18 ನೇ ಸಾಲಿನ ಜಾನಪದ ಕಲಾ ತಂಡಗಳ ಮೂಲಕ ಇಂದ್ರ ಧನುಷ್ ಅಭಿಯಾನ, ತಾಯಿ ಮತ್ತು ಮಗುವಿನ ಆರೋಗ್ಯ ಹಾಗೂ ಹೆಣ್ಣು ಭ್ರೂಣ ಹತ್ಯೆ ಬಗ್ಗೆ ಜನ ಜಾಗೃತಿ ಮೂಡಿಸುವ ನಿಮಿತ್ತ ಬೀದಿ ನಾಟಕಗಳ ಕಲಾಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲೆಯ ಶಾಹಪುರ, ಸುರಪುರ, ಯಾದಗಿರಿ ನಗರ ಸೇರಿದಂತೆ ಒಟ್ಟು 30 ಗ್ರಾಮಗಳಲ್ಲಿ ಈ ಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವುದು ಹಾಗೂ ತಾಯಿ ಮತ್ತು ಮಗುವಿನ ಆರೋಗ್ಯ ಪೂರ್ಣವಾಗಿರಲು ಇಂದ್ರಧನುಷ್ ಅಭಿಯಾನ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುವುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಲಕ್ಷ್ಮಿಕಾಂತ್ ಮಾತನಾಡಿ, ಟಿವಿ ಮಾಧ್ಯಮಕ್ಕೆ ಮೊರೆ ಹೋದ ಜನರಿಗೆ ಬೀದಿ ನಾಟಕಗಳಿಂದ ಅರಿವು ಮೂಡಿಸಿದಾಗ ಅವರಿಗೆ ಮನದಟ್ಟಾಗುತ್ತಿದೆ, ಹೀಗಾಗಿ ಜನಪದ ಕಲಾವಿದರಿಂದ ಹಳ್ಳಿಯ ಸೊಗಡಿನ ಮಾದರಿಯಲ್ಲಿ ನಾಟಕ ಪ್ರದರ್ಶಿಸಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಂಕರ ಬಿರಾದಾರ, ನಂದಣ್ಣ ಪಾಟೀಲ, ಸತ್ಯನಾರಾಯಣ, ಎಂ.ಭೀಮಾಶಂಕರ ಕಲಾ ತಂಡದವರು ಸೇರಿದಂತೆ ಇನ್ನಿತರರಿದ್ದರು.