ಯಾದಗಿರಿ : ಕಳ್ಳನಿಗೆ ಕಂಬಕ್ಕೆ ಕಟ್ಟಿ ಥಳಿಸಿದ ಜನ!
3 ಲಕ್ಷ ರೂ. ಕದ್ದವರಲ್ಲಿ ಓರ್ವ ಸಿಕ್ಕ ಇನ್ನೋರ್ವ ಪರಾರಿ
ಯಾದಗಿರಿಃ ದುಡ್ಡು ಕದ್ದು ಪರಾರಿಯಾಗುತ್ತಿದ್ದ ಇಬ್ಬರಲ್ಲಿ ಓರ್ವನನ್ನು ಹಿಡಿದ ಸಾರ್ವಜನಿಕರು ಆ ಕಳ್ಳನನ್ನು ಗ್ರಾಮದ ವಿದ್ಯುತ್ ಕಂಬವೊಂಬಕ್ಕೆ ಕಟ್ಟಿ ಥಳಿಸಿದ ಘಟನೆ ತಾಲೂಕಿನ ಕಣಿಕಲ ಗ್ರಾಮದಲ್ಲಿ ನಡೆದಿದೆ.
ಅಜಲಾಪುರ ಗ್ರಾಮದ ರೈತ ಮಾರೆಪ್ಪ ಎಂಬುವರು ಸಮೀಪದ ಸೈದಾಪುರ ಗ್ರಾಮದಲ್ಲಿರುವ ಖಾಸಗಿ ಬ್ಯಾಂಕ್ನಲ್ಲಿ 3 ಲಕ್ಷ ರೂ. ಸಾಲ ಪಡೆದಿದ್ದರು. ಹಣದೊಂದಿಗೆ ತನ್ನ ಮಗನೊಂದಿಗೆ ಬೈಕ್ನಲ್ಲಿ ಮರಳಿ ಅಜಲಾಪುರ ಗ್ರಾಮಕ್ಕೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ಬೈಕ್ ನಿಲ್ಲಿಸಿ ನೀರು ಕುಡಿಯಲು ತೆರಳಿದಾಗ ಕಳ್ಳರಿಬ್ಬರು ತಮ್ಮ ಕೈಚಳಕ ತೋರಿದ್ದಾರೆ ಎನ್ನಲಾಗಿದೆ.
ಬೈಕ್ನ ಪೆಟ್ರೋಲ್ ಟ್ಯಾಂಕ್ ಮೇಲಿನ ಬ್ಯಾಗ್ ನಲ್ಲಿಟ್ಟಿದ್ದ ಕ್ಯಾಶ್ ಬ್ಯಾಗ್ನ್ನು ಕಳ್ಳರಿಬ್ಬರು ದೋಚಿಕೊಂಡು ಪರಾರಿಯಾಗಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ತಂದೆ ಮತ್ತು ಮಗ ಇಬ್ಬರೂ ಕಳ್ಳ ಕಳ್ಳ ಎಂದು ಕೂಗಲು ಆರಂಭಿಸಿದ್ದಾರೆ. ಪರಿಷಾಯ ಸಾರ್ವಜನಿಕರು ಅಲರ್ಟ್ ಆಗುತ್ತಿದ್ದಂತೆ 3 ಲಕ್ಷ ರೂಪಾಯಿಯೊಂದಿಗೆ ಓರ್ವ ಕಳ್ಳ ಪರಾರಿಯಾಗಿದ್ದಾನೆ.
ಇನ್ನೊಬ್ಬ ಕಳ್ಳ ಮಾತ್ರ ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆಗ ಸಾರ್ವಜನಿಕರು ಆತನಿಗೆ ಧರ್ಮದೇಟು ನೀಡಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಕೈಗೊಬ್ಬರಂತೆ ಗೂಸಾ ನೀಡಿದ್ದಾರೆ. ನಂತರ ಸಮೀಪದ ಸೈದಾಪುರ ಪೊಲೀಸ್ ಠಾಣೆಗೆ ಫೋನಾಯಿಸಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.