Homeಜನಮನಪ್ರಮುಖ ಸುದ್ದಿ

ರಾಜಸ್ಥಾನದಿಂದ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸ: ಆಹಾರ ಇಲಾಖೆ ಸ್ಪಷ್ಟನೆ

ಬೆಂಗಳೂರು: ರೈಲು ಮೂಲಕ ರಾಜಸ್ಥಾನದಿಂದ ಬೆಂಗಳೂರಿಗೆ ಬಂದಿದ್ದು ನಾಯಿ ಮಾಂಸವಲ್ಲ, ಮೇಕೆ ಮಾಂಸವೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಖಚಿತಪಡಿಸಿದೆ.

ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಸರಬರಾಜು ಆಗುವ ಮಟನ್ ಮಾಂಸದ ಜತೆಗೆ ನಾಯಿ ಮಾಂಸವನ್ನು ತರಲಾಗಿದೆ ಎಂದು ಪುನೀತ್ ಕೆರೆಹಳ್ಳಿ ಆರೋಪ ಮಾಡಿದ್ದರು. ಈ ಬೆಳವಣಿಗೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸಿತ್ತು. ಶುಕ್ರವಾರ ಸಂಜೆಯ ವೇಳೆಗೆ ನಡೆದ ಈ ಘಟನೆ ಕೆಲವೇ ನಿಮಿಷಗಳಲ್ಲಿ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು.

ವಿವಾದವಾಗುತ್ತಿದಂತೆ ಆರೋಗ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ಕೋಟ್ಟು ಮಾಂಸವನ್ನು ವಶಕ್ಕೆ ಪಡೆದು ಅದರ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದರು. ಅದರ ಪರೀಕ್ಷೆ ನಡೆಸಿದ ಪ್ರಯೋಗಾಲಯದವರು ಅದು ಮೇಕೆ ಮಾಂಸ ಎಂದು ವರದಿ ನೀಡಿದ್ದಾರೆ. ಪ್ರಯೋಗಾಲಯದ ಪರೀಕ್ಷೆಯಲ್ಲಿ ಈ ಮಾಂಸವು ನಾಯಿಯದ್ದಲ್ಲ, ಮೇಕೆಯದ್ದು ಎಂದು ತಿಳಿದುಬಂದಿದೆ ಎಂದು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ರಾಜ್ಯ ಆಯುಕ್ತ ಶ್ರೀನಿವಾಸ್ ಕೆ ಅವರು ಸ್ಪಷ್ಟಪಡಿಸಿದ್ದಾರೆ.

ಇದನ್ನು ಸಿರೋಹಿ ಮೇಕೆ ಮಾಂಸ ಎಂದು ಗುರುತಿಸಲಾಗಿದೆ, ಇದು ರಾಜಸ್ಥಾನ ಮತ್ತು ಗುಜರಾತ್‌ನ ಕಚ್-ಭುಜ್ ಪ್ರದೇಶದ ತಳಿಯಾಗಿದೆ. ಈ ತಳಿಯ ಮೇಕೆಗಳು ಮಚ್ಚೆಯುಳ್ಳ ದೇಹ ಮತ್ತು ಸ್ವಲ್ಪ ಉದ್ದವಾದ ಬಾಲವನ್ನು ಹೊಂದಿರುವುದು ವಿಶಿಷ್ಟವಾಗಿದೆ, ಹೀಗಾಗಿ ಈ ಮೇಕೆಗಳು ನಾಯಿಯನ್ನು ಹೋಲುತ್ತವೆ ಎಂದು ತಿಳಿಸಿದ್ದಾರೆ.

ಈ ಮೇಕೆಗಳ ಬಳಕೆ ಕಡಿಮೆಯಿದ್ದರೂ, ಉತ್ಪಾದನೆ ಹೆಚ್ಚಾಗಿದೆ. ಹೀಗಾಗಿ ಕೆಲವು ವ್ಯಾಪಾರಿಗಳು ಈ ಮೇಕೆ ಮಾಂಸವನ್ನು ರಾಜಸ್ಥಾನದಿಂದ ಬೆಂಗಳೂರಿಗೆ ರೈಲಿನ ಮೂಲಕ ಸರಬರಾಜು ಮಾಡಿಸಿಕೊಳ್ಳುತ್ತಾರೆಂದು ಎಫ್‌ಎಸ್‌ಎಸ್‌ಎಐ ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button