ಪ್ರಮುಖ ಸುದ್ದಿಸಾಹಿತ್ಯ

ಗಂಡಸರು ಉತ್ಪಾದಿಸುವ ಕವಿತ್ರಿಯರು! : ಅರುಣ್ ಜೋಳದಕೂಡ್ಲಗಿ ಬರಹ

ವಿಶಿಷ್ಟ ಲೇಖನಗಳಿಂದ ಹೊಸ ಚಿಂತನೆಗೆ ಹಚ್ಚುವ ಮೂಲಕ ರಾಜ್ಯದ ಗಮನ ಸೆಳೆದಿರುವ ಬರಹಗಾರ ಅರುಣ್ ಜೋಳದಕೂಡ್ಲಗಿ ಅವರ ಫೇಸ್ ಬುಕ್ ಪೇಜ್ ನಲ್ಲಿದ್ದ  ಈ ಕೆಳಗಿನ ಬರಹವನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ…

ಸೋಷಿಯಲ್ ಮೀಡಿಯಾದಲ್ಲಿ ಗಂಡಸರು ಉತ್ಪಾದಿಸುವ ಮಹಿಳಾ ಕವಿ/ಲೇಖಕಿ/ಚಿಂತಕಿಯರು.. 

**

ಪುರುಷ ಲೇಖಕರು ಪ್ರತಿಭೆಯಿದ್ದೂ ಅವಕಾಶ ವಂಚಿತ ಲೇಖಕಿಯರನ್ನು ಮುನ್ನಲೆಗೆ ತಂದು ಪರಿಚಯಿಸಿದ್ದಕ್ಕೆ ದೊಡ್ಡ ಪರಂಪರೆಯೇ ಇದೆ. ಲಂಕೇಶರು ಮತ್ತವರ ಪತ್ರಿಕೆ ತತಕ್ಷಣ ನೆನಪಿಗೆ‌ ಬರುವ ಸಾಕ್ಷ್ಯ…
ಹೀಗೆ ಮುನ್ನಲೆಗೆ ತರುವಲ್ಲಿ ಮಹಿಳೆಯರ ಪ್ರಖರ ಪ್ರತಿಭೆ ಜೊತೆಗೆ ಸಹಜವಾದ ವಿರುದ್ದ ಲಿಂಗದ ಆಕರ್ಷಣೆ ಇರುವುದು ಸುಳ್ಳಲ್ಲ.
ಹೀಗೆ ಮುನ್ನಲೆಗೆ ತರುವ ಭರದಲ್ಲಿ ಕೆಲವು ಅಂದದ ಮಹಿಳೆಯರು ಕನಿಷ್ಠ ಪ್ರತಿಭೆಯಲ್ಲಿ ಗರಿಷ್ಠ ಪ್ರಚಾರ ಅವಕಾಶ ಪಡೆದದ್ದೂ ಇದೆ. ಮತ್ತವರು ಈಗ ಮರೆತು ಹೋದದ್ದೂ ವಾಸ್ತವ. ನಿಜ ಪ್ರತಿಭೆಯಿದ್ದೂ ಗಂಡಸು ಲೇಖಕರಿಂದ ಅವಕಾಶ ಪಡೆದವರು ದೊಡ್ಡ ಲೇಖಕಿಯರಾಗಿ ಪರಿಚಯಿಸಿದ ಲೇಖಕರಿಗಿಂತಲೂ ಎತ್ತರದಲ್ಲಿರುವುದೂ ನಮ್ಮ ಕಣ್ಣಮುಂದೆ ಇದೆ. ಒನಕೆ ಓಬವ್ವನ ಗಂಡ ಊಟಕ್ಕೆ ಕೂರದಿದ್ದರೆ ಅವಳ ದೈರ್ಯ ಸಾಹಸ ಲೋಕಕ್ಕೆ ತಿಳಿಯುತ್ತಿರಲಿಲ್ಲ..ಹಾಗೆಯೇ ಗಂಡನ ಅಕಾಲಿಕ ಮರಣ ಸಂಭವಿಸಿದ ಕಾರಣಕ್ಕೇ ಜಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಒಳಗೊಂಡಂತೆ ಹತ್ತಾರು ರಾಣಿಯರು ತಮ್ಮ ದೈರ್ಯ ಸಾಹಸವನ್ನು ತೋರಲಾಗುತ್ತಿರಲಿಲ್ಲ. ಇದನ್ನು ಬರಹಕ್ಕೆ ಹೋಲಿಸಿಕೊಂಡರೆ ಸೃಜನಶೀಲತೆ ಯಾವ ಲಿಂಗಕ್ಕೂ ಸೀಮಿತವಲ್ಲ, ತೋರ್ಪಡಿಕೆಗೆ ಅವಕಾಶ ದಕ್ಕಬೇಕಷ್ಟೆ ಎನ್ನುವುದನ್ನು ಸೂಚಿಸುತ್ತದೆ. ಇದರಲ್ಲಿ ಗಂಡು ಪ್ರಥಮ ದರ್ಜೆ ಹೆಣ್ಣು ದ್ವಿತೀಯ ದರ್ಜೆಯ ಶ್ರೇಣೀಕರಣ ಮಣ್ಣಾಗುವುದನ್ನು ಕಾಣಬಹುದು. ಒಟ್ಟಾರೆ ಇದನ್ನು ಪರಸ್ಪರ ಪ್ರೋತ್ಸಾಹಕರ ಬೆಳವಣಿಗೆ ಎಂದು ಪರಿಭಾವಿಸಬಹುದು.

ಇದೀಗ ಸೊಷಿಯಲ್ ಮೀಡಿಯಾದಲ್ಲೂ ಗಂಡಸರು ಮಹಿಳಾ ಕವಯಿತ್ರಿ/ಲೇಖಕಿ/ಚಿಂತಕಿಯರನ್ನು‌ ಬೆಳೆಸುತ್ತಿದ್ದಾರೆ. ಹಿಂದೆ ಲೇಖಕ ಚಿಂತಕರು ಮಾತ್ರ ಕೆಲವರನ್ನು ಗುರುತಿಸಿ ಬೆಳೆಯಲು ಅವಕಾಶ ಮಾಡುತ್ತಿದ್ದರು. ಇದರಲ್ಲಿ ಆರಂಭಕ್ಕೆ ಪ್ರತಿಭೆಯೇ ಮಾನದಂಡವಾಗುತ್ತಿತ್ತು. ಇದೀಗ ಈ ಬೆಳೆಸುವ ಅವಕಾಶ ಕೇವಲ ಚಿಂತಕ ಲೇಖಕರಿಗೆ‌ ಮಾತ್ರವಲ್ಲದೆ ಬರಹ ಮಾಡದ ಓದುಗ ಪುರುಷರಿಗೂ ಲಭ್ಯವಾಗಿದೆ. ಇದೀಗ ಸೋಷಿಯಲ್ ಮೀಡಿಯಾದ ಚುಟುಕು ಓದುವರ್ಗವೂ ಮಹಿಳಾ ಕವಿ/ಲೇಖಕಿ/ಚಿಂತಕಿಯರನ್ನು‌ ಬೆಳೆಸುತ್ತಿದೆ. ಈ ಬೆಳೆಸುವ ವಿಮರ್ಶೆ ಹೇಗಿರುತ್ತೆ ಅಂದರೆ ಮೊದಲನೆಯದಾಗಿ ಏನನ್ನೂ ಅಕ್ಷರದಲ್ಲಿ ಸೂಚಿಸದ ಸಿಂಬಲ್ಲುಗಳಲ್ಲಿರುತ್ತೆ. ಲೈಕು,ಹೆಬ್ಬೆರಳು ಸೆಟೆಸುವುದು..ಇತ್ಯಾದಿ. ಇನ್ನು ಅಕ್ಷರ ರೂಪದಲ್ಲಿ ಸೂಪರ್, ಬಿವ್ಟಿಫುಲ್, ವಂಡರ್ ಫುಲ್ ಇತ್ಯಾದಿ. ಈ ಎಲ್ಲದರಲ್ಲೂ ಎಂಥದ್ದೇ ಬರಹಕ್ಕೂ ಶೇ 90 ರಷ್ಟು‌ ಮೆಚ್ಚುಗೆಯ ಬೆಂಬಲ..ಇದರಲ್ಲಿ ಶೇ 10 ರ ಭಿನ್ನಾಭಿಪ್ರಾಯಕ್ಕೆ ಕೈಯೊರಸಿ ಬಿಸಾಕುವ ಟಿಶ್ಶು ಪೇಪರಿನ ಸ್ಥಾನ.

ಇಂತಹ ಗಂಡಸರ ಲೈಕು ಕಮೆಂಟಾದಿಗಳಿಂದ ಹೊರಹೊಮ್ಮುವ ಲೇಖಕಿ/ಕವಯಿತ್ರಿ/ಚಿಂತಕಿಯರನ್ನು ಪ್ರೋತ್ಸಾಹದಾಯಕ ಬೆಳವಣಿಗೆ ಎಂದು ಕರೆಯದೆ ಗಂಡಸರು ಉತ್ಪಾದಿಸುತ್ತಿರುವ ಕವಯಿತ್ರಿ/ಲೇಖಕಿ/ಚಿಂತಕಿಯರು ಎಂದು ಕರೆಯುವೆ. ಇದರಲ್ಲೂ ನಿಜ ಪ್ರತಿಭೆಯಿದ್ದ ಮಹಿಳೆಯರೂ ಇದ್ದಾರೆ. ಆದರೆ ಅವರು ಈ ಲೈಕು ಕಮೆಂಟಾದಿಗಳಿಗೆ ಉಬ್ಬದೆ, ಅವನ್ನೆಲ್ಲಾ ಅನುಮಾನದಿಂದ ನೋಡುತ್ತಾ, ವಿಮರ್ಶೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿ ತಮ್ಮ ಬರಹವನ್ನು ಎಚ್ಚರದಿಂದ ಕಾಯ್ದುಕೊಂಡಿದ್ದಾರೆ. ಆದರೆ ಈ ಲೈಕು ಕಮೆಂಟಾದಿಗಳಿಗೆ ಉಬ್ಬಿ ತೋಚಿದ್ದನ್ನೆಲ್ಲಾ ಗೀಚುವ ಮಹಿಳೆಯರ ಸಂಖ್ಯೆ ದೊಡ್ಡದಿದೆ. ಇವರ ಬರಹಕ್ಕೆ‌ ನಿಷ್ಠುರ ವಿಮರ್ಶೆ ಬಂದರೆ, ಅಂತಹ ವಿಮರ್ಶೆಗವರು ಕಿವಿಯಾಗಿ ತಿದ್ದಿಕೊಂಡರೆ ಅವರೂ ಘನವಾದದ್ದನ್ನು ಬರೆಯಬಲ್ಲರು. ಆದರೆ ಇಂತಹವರು ಈ ಲೈಕು ಕಮೆಂಟಾದಿಗಳ ಮೋಹದಲ್ಲಿ ಕಳೆದು ವಿಮರ್ಶೆ ಟೀಕೆಗೆ ಕಿವುಡಾದದ್ದೇ ಹೆಚ್ಚು.
ಅಂತಹ ಮಹಿಳೆಯರು ಆತ್ಮಾವಲೋಕನ‌ಮಾಡಿಕೊಳ್ಳಲು‌ ಇನ್ನೂ ಸಮಯಾವಕಾಶವಿದೆ.

ಈ ಟಿಪ್ಪಣಿಯೇ ಗಂಡು ಪ್ರಧಾನ ಸಮಾಜದ ಪ್ರತಿಸ್ಪಂದನೆ, ಗಂಡಾಳ್ವಿಕೆ‌ ಸಮಾಜದ ಪ್ರತಿಬಿಂಬ ಎಂದು ದೂಷಿಸುವ ಸಾಧ್ಯತೆ ಇದೆ. ಕೆಲವು ಮಹಿಳೆಯರು ಕಡು ಕೋಪವನ್ನೂ ತೋರಬಹುದು. ಆದರೆ ಈ ತರಹದ ಗಂಡಸರ ಹುಸಿ ಪ್ರತಿಕ್ರಿಯೆ ಪ್ರೋತ್ಸಾಹಗಳಿಂದ ರೂಪುಗೊಂಡ ಲೇಖಕಿ/ಚಿಂತಕಿ/ಕವಯಿತ್ರಿಯರು ತನ್ನ ಹೆಣ್ಣುಭಾಷೆ ಅಥವಾ ಲಿಂಗನಿರಸನದ ಭಾಷೆಯನ್ನು ಮರೆತು, ಗಂಡುಭಾಷೆಯನ್ನೆ ಅಭ್ಯಾಸ ಮಾಡಿಕೊಳ್ಳುವ ಸಾಧ್ಯತೆಯಿದೆ. ಇದರಿಂದಾಗಿ ಮಹಿಳೆಯರ ಬರಹಗಳೂ ಗಂಡಾಳ್ವಿಕೆ ಸಮಾಜದ‌ ನಡಾವಳಿಗೆ ಮುದ್ರೆ ಒತ್ತುವ ಅಪಾಯವಿದೆ ಎನ್ನುವ ಆತಂಕದಲ್ಲಿ ಈ ಟಿಪ್ಪಣಿ ಬರೆದಿರುವೆ..

ಹಾಗಾದರೆ, ಹೆಣ್ಣುಮಕ್ಕಳು ಉತ್ಪಾದಿಸುವ ಗಂಡಸು ಕವಿ/ಲೇಖಕ/ಚಿಂತಕರಿಲ್ಲವೇ ಎಂದು ಕೇಳಬಹುದು, ಹೀಗೆ ಹೆಣ್ಣು ಉತ್ಪದಿಸಿದ ಬಹುಪಾಲು ಬರಹಗಾರರು ತನ್ನ ‘ಗಂಡು’ಭಾಷೆಯನ್ನೇ ಇನ್ನಷ್ಟು ಬೆಳೆಸುತ್ತಾರೆಯೇ ವಿನಃ ಲಿಂಗನಿರಸನದ ಭಾಷೆಯನ್ನು ರೂಪಿಸಿಕೊಳ್ಳಲಾರರು. ಉಳಿದಂತೆ ಅದರ ಸ್ವರೂಪ ಬೇರೆಯಾಗಿದೆ ಮುಂದೆಂದಾದರೂ ಆ ಬಗ್ಗೆಯೂ ವಿವರವಾಗಿ ಬರೆಯುವೆ.

ಓದು-ಬರಹವೆ ಸೂಕ್ಷ್ಮಾತಿಸೂಕ್ಷ್ಮವಾದ ಸಂಗತಿಗಳು. ಇವೂ ಅಸೂಕ್ಷ್ಮವಾಗಬಾರದು. ನಿಜಕ್ಕೂ ಈ ಓದು-ಬರಹದ ಸೂಕ್ಷ್ಮತೆ ಇದ್ದ ಯಾವುದೇ ಬರಹಗಾರ್ತಿ/ಬರಹಗಾರರಿಗೂ ತಮ್ಮ ಬರಹದ ಶೇ 70 ರಷ್ಟು ಮಿತಿಗಳು ತಮಗೇ ತಿಳಿದಿರುತ್ತವೆ. ಎಷ್ಟೋ ಬಾರಿ ಈ ಮಿತಿಗಳು ಹೊರಗಿನವರಿಗೆ ತಿಳಿದಿರುವುದಿಲ್ಲ. ಹಾಗಾಗಿ ನಮ್ಮೊಳಗಿನ ವಿಮರ್ಶಕಿ/ವಿಮರ್ಶಕರಿಗೆ ಕಿವಿಗೊಟ್ಟು ನಮ್ಮನ್ನು ನಾವು ತಿದ್ದಿಕೊಂಡರೂ ಸಾಕು ನಮ್ಮ ನಮ್ಮ ಬರಹ ಮತ್ತು ಆಲೋಚನ ಕ್ರಮದಲ್ಲಿ ತುಂಬಾ ಬದಲಾವಣೆಗೆ ತೆರೆದುಕೊಳ್ಳಬಹುದು. ಹೀಗಾದಲ್ಲಿ ಮೇಲೆ ಹೇಳಿದ ಲಿಂಗಾಧರಿದ ಪರಸ್ಪರ ಪ್ರೋತ್ಸಾಹದ ಮಿತಿಗಳನ್ನೂ ಮೀರಬಹುದು.

Related Articles

Leave a Reply

Your email address will not be published. Required fields are marked *

Back to top button