ಯಾದಗಿರಿಃ ಬಡವರ ಮನೆಯಲ್ಲಿ ಉದ್ಭವಿಸಿದ ಗಂಗೆ..!
ಶಹಾಪುರಃ ನೀರಿನ ಸೆಲೆಯಲ್ಲಿ ಬೆರೆತ ಬಡವರ ಕಣ್ಣೀರು.!
ಬಡವರ ಮನೆಯಲ್ಲಿ ಉಕ್ಕಿ ಹರಿಯುತ್ತಿರವ ಗಂಗೆ..! ಹುಸೇನ್ ಪಟೇಲ್ ಮನೆಯಲ್ಲಿ ನೀರೋ ನೀರು..
ಮಲ್ಲಿಕಾರ್ಜುನ ಮುದ್ನೂರ
ಯಾದಗಿರಿ: ಕುಡಿಯಲು ನೀರು ಸಿಗದೆ ಪರದಾಡಿದ ಆ ದಿನಗಳ ಕಥೆ ನಡೆದಿರುವಾಗಲೇ ಮಳೆ ಸುರಿಯಲಾರಂಭಿಸಿದೆ. ಕಳೆದ ಹದಿನೈದು ದಿನಗಳಿಂದ ಮಳೆ ಆಗಾಗ ಸುರಿದು ಇಡಿ ವಾತಾವರಣ ತಂಪೆರೆದು, ಕೆಲವಡೆ ಅವಘಡಗಳು ಸಂಭವಿಸಿದವು. ಮತ್ತೆ ಹಲವಡೆ ಮಳೆ ಆರ್ಭಟದಿಂದ ಪ್ರಾಣ ಹಾನಿ, ಬೆಳೆ ಹಾನಿಯಂತಹ ಸುದ್ದಿಗಳು ಸಾಕಷ್ಟು ಕಂಡಿದ್ದೀವಿ ಓದಿದ್ದೀವಿ.
ಆದರೆ ವಿಭಿನ್ನ ಸುದ್ದಿಯೊಂದು ಇಲ್ಲಿದೆ. ಮನೆ ತುಂಬಾ ನೀರು ಸಂಗ್ರಹಗೊಂಡಿದ್ದು, ಅತಿಯಾದ ಮಳೆಯಿಂದ ಮನೆ ಸೋರಿದೆ ಮತ್ತು ಗ್ರಾಮಕ್ಕೆ ನುಗ್ಗಿದ ನೀರು ಮನೆಯೊಳಗೆ ಪ್ರವೇಶಗೊಂಡ ಪರಿಣಾಮ ಅಪಾರ ಪ್ರಮಾಣದಲ್ಲಿ ನೀರು ನಿಂತಿರಬಹುದು ಎಂದು ನೀವು ಊಹಿಸಿದ್ದರೆ ತಪ್ಪು. ಅಲ್ಲದೆ ಸ್ವತಹಃ ಮನೆಯವರು ಇದೇ ರೀತಿ ತಿಳಿದು, ನೀರನ್ನು ಖಾಲಿ ಮಾಡಲು ಹರಸಾಹಸ ಪಟ್ಟರೂ ಯಾವುದೇ ಪ್ರಯೋಜನೆ ಆಗಿಲ್ಲ. ಬೆಳೆಗಳಿಗೆ ಔಷಧಿ ಸಿಂಪಡಿಸುವ ಯಂತ್ರದ ಸಹಾಯದಿಂದ ಸಾಕಷ್ಟು ಜನರು ಸೇರಿ ನೀರು ಖಾಲಿ ಮಾಡಿದರೂ ಮತ್ತೆ ಮತ್ತೇ ನೀರು ಸಂಗ್ರಹಗೊಳ್ಳುತ್ತಲೇ ಇದೆ.
ಹೀಗಾಗಿ ತಬ್ಬಿಬ್ಬಾದ ಜನ ಮನೆಯಲ್ಲಿ ಹಾಸಿರುವ ಕಲ್ಲು ಪರಸಿಗಳನ್ನು ತೆಗೆದಾಗ ನೀರಿನ ಬುಗ್ಗೆ ಉಕ್ಕುತ್ತಿರುವುದು ಕಂಡು ಬಂದಿದೆ. ನಲ್ಲಿ ಪೈಪ್ ಒಡೆದಾಗ ಭೂಮಿಯೊಳಗಿಂದ ನೀರು ಹೇಗೆ ಜಿನುಗುತ್ತದೆ ಅದೇ ತರಹ ನೀರು ಉಕ್ಕುತ್ತಿದೆ. ಅದನ್ನು ಮುಚ್ಚಲು ಪ್ರಯತ್ನ ಮಾಡಿದರೂ ನೀರು ಜಿನುಗುವುದು ನಿಂತಿಲ್ಲ. ಮನೆ ತುಂಬಾ ನೀರು ಸಂಗ್ರಹಗೊಳ್ಳುತ್ತಿರುವುದು ಕಂಡು ಜನ ಆಶ್ಚರ್ಯಚಕಿತರಾಗಿದ್ದಾರೆ.
ಹೌದು.. ಜಿಲ್ಲೆಯ ಶಹಾಪುರ ತಾಲೂಕಿನ ಗುಂಡ್ಲೂರ ಗ್ರಾಮದ ಹುಸೇನ್ ಪಟೇಲ್ ಎಂಬುವರ ಮನೆಯಲ್ಲಿ ಹಠಾತ್ತನೆ ಗಂಗೆ ಉಕ್ಕಿ ಹರಿಯುತ್ತಿದ್ದಾಳೆ. ಬಡತನ ರಾರಾಜಿಸುತ್ತಿರುವ ಈ ಮನೆಯಲ್ಲಿ ಗಂಗೆ ಉದ್ಭಸಿರುವುದು ಮನೆ ಸದಸ್ಯರಿಗೆ ನೂತನ ಸಮಸ್ಯೆ ಉಂಟು ಮಾಡಿದೆ ಎಂದರೆ ತಪ್ಪಿಲ್ಲ.
ಕಳೆದ ಎರಡು ದಿನಗಳಿಂದ ಧಾರಕಾರವಾಗಿ ಸುರಿದ ಮಳೆಯಿಂದ ಇಡಿ ಗ್ರಾಮ ತಲ್ಲಣಗೊಂಡಿದೆ. ಇಂತಹ ಸಂದರ್ಭದಲ್ಲಿ ಇವರ ಮನೆಯಲ್ಲಿಯೇ ಗಂಗೆ ಜನ್ಮವೆತ್ತಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ.
ಕಳೆದ ನಾಲ್ಕು ತಿಂಗಳ ಹಿಂದೆ ಇದೇ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಸಿಗದೆ ನಾಗರಿಕರು ಪರದಾಡಿದ್ದಾರೆ. ಆ ವೇಳೆಗೆ ಇದೇ ಮನೆಯ ಹುಸೇನ್ ಪಟೇಲ್ ಸಹ ನೀರಿಗಾಗಿ ಹರಸಾಹಸ ಪಟ್ಟಿದ್ದಾನೆ. ಪ್ರಸ್ತುತ ಗಂಗಾ ದೇವತೆ ಇವರ ಮನೆಯಲ್ಲಿಯೇ ನೆಲೆನಿಂತಿದ್ದಾಳೆ ಎಂದರೆ ನಿಜಕ್ಕೂ ಇದು ಆಶ್ಚರ್ಯಚಕಿತವೇ ಸರಿ. ಬೇಸಿಗೆಯಲ್ಲಿ ಸಂಪೂರ್ಣ ಬತ್ತಿ ಹೋದ ಅಂತರ ಜಲ, ಪ್ರಸ್ತುತ ಸಾಕಷ್ಟು ಮಳೆಯಾದ ಪರಿಣಾಮ ಮತ್ತೇ ಅಂತರ ಜಲ ಜಾಗೃತಗೊಂಡಿರಬಹದು. ಆದರೆ ಒಮ್ಮೆಯೂ ಈ ರೀತಿ ನೀರು ಜಿನುಗಿರುವ ಘಟನೆ ನಡೆದಿಲ್ಲ. ಇದೇ ಮೊದಲ ಬಾರಿಗೆ ಕಾಣುತ್ತಿದ್ದೇವೆ ಎನ್ನುತ್ತಾರೆ ಹುಸೇನ್ ಪಟೇಲ್.
ನೀರಿನ ಸೆಲೆ ಪ್ರತ್ಯಕ್ಷದಿಂದ ಮನೆಯವರು ಕಂಗಾಲು..!
ಹುಸೇನ್ ಅವರಿಗೆ ಈ ಮನೆ ಬಿಟ್ಟರೇ ಬೇರೆ ಮನೆಯಿಲ್ಲ, ಸದ್ಯ ಇವರು, ಪಕ್ಕದ ಗುಡಿಸಲಲ್ಲಿ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಮನೆ ತುಂಬಾ ನೀರು ಸಂಗ್ರಹಗೊಳ್ಳುತ್ತಿದೆ. ನೀರಿನ ಸೆಲೆ ಪ್ರತ್ಯಕ್ಷವಾದ ಪರಿಣಾಮ ನೀರು ಸಂಗ್ರಹಗೊಳ್ಳತ್ತಿದೆ. ಹೀಗಾಗಿ ಮನೆಯವರ ಜೀವನ ಅಸ್ತವ್ಯಸ್ತಗೊಂಡಿದೆ. ಏನ್ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ. ನೀರಿನ ಬುಗ್ಗೆಯಿಂದ ಮನೆಯವರು ಕಂಗಾಲಾಗಿದ್ದಾರೆ. ವಾಸಿಸಲು ಸಮರ್ಪಕ ವ್ಯವಸ್ಥೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವ ಅಗತ್ಯವಿದೆ. ನೊಂದ ಕುಟುಂಬಕ್ಕೊಂದು ಆಶ್ರಯ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಗ್ರಾಮದ ಪಂಚಾಯತಿ ಸದಸ್ಯ ಮಹಿಬೂಬ ಮನವಿ ಮಾಡಿದ್ದಾರೆ.
–ಮಹಿಬೂಬ್ ಗುಂಡ್ಲೂರ. ಗ್ರಾಪಂ ಸದಸ್ಯ..