ಸುಷ್ಮಾ ಪಯಣ : ವಿದ್ಯಾರ್ಥಿ ಪರಿಷತ್ ನಿಂದ ವಿದೇಶಾಂಗ ಮಂತ್ರಿವರೆಗೆ…
ದೆಹಲಿ : ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಹೃದಯಾಘಾತದಿಂದ ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಉಸಿರು ನಿಲ್ಲಿಸುವ 3ತಾಸು ಮೊದಲು ಟ್ವೀಟ್ ಮಾಡಿ ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ್ದನ್ನು ಶ್ಲಾಘಿಸಿ ‘ನಾನು ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ತಿಳಿಸಿದ್ದರು. ಆದರೆ, ಟ್ವೀಟ್ ಮಾಡಿದ ಕೆಲವೇ ತಾಸುಗಳಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
1952ರಲ್ಲಿ ಫೆಬ್ರವರಿ 14ರಂದು ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ ಅವರ ಪುತ್ರಿಯಾಗಿ ಹರಿಯಾಣದ ಅಂಬಾಲಾ ಪಟ್ಟಣದಲ್ಲಿ ಸುಷ್ಮಾ ಜನಿಸಿದರು. ಇಲ್ಲಿನ ಅಂಬಾಲಾ ಕಂಟೋನ್ಮೆಂಟ್ನ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದರು. ಹೆಚ್ಚಿನ ವ್ಯಾಸಾಂಗಕ್ಕಾಗಿ ಪಂಜಾಬ್ ಗೆ ತೆರಳಿ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು. 1973ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ವೃತ್ತಿಯಲ್ಲಿ ತೊಡಗಿದ್ದರು.
ಎಬಿವಿಪಿ ಇಂದ ವಿದೇಶಾಂಗ ಮಂತ್ರಿವರೆಗಿನ ಪಯಣ
1970ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೂಲಕ ರಾಜಕೀಯ ಪ್ರವೇಶಿಸಿದರು. ಜಯಪ್ರಕಾಶ್ ನಾರಾಯಣ ಅವರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಸುಷ್ಮಾ ಅವರು ತುರ್ತು ಪರಿಸ್ಥಿತಿಯ ಬಳಿಕ ಬಿಜೆಪಿಗೆ ಸೇರಿದ್ದರು. ಸುಷ್ಮಾ ಸ್ವರಾಜ್ ಅವರು ದಿಲ್ಲಿಯ ಸಿಎಂ ಆಗಿ 13 ಅಕ್ಟೋಬರ್ 1998ರಿಂದ ಡಿಸೆಂಬರ್ 3, 1998ರ ವರೆಗೆ ಸೇವೆ ಸಲ್ಲಿಸಿದ್ದರು. 7 ಬಾರಿ ಸಂಸತ್ತು ಹಾಗೂ 3 ಬಾರಿ ಹರಿಯಾಣ ರಾಜ್ಯ ವಿಧಾನಸಭೆಗೆ ಪ್ರವೇಶಿಸಿದ್ದರು.
1990ರಲ್ಲಿ ಎಪ್ರಿಲ್‌ನಲ್ಲಿ ಮೊದಲ ಬಾರಿ ರಾಜ್ಯಸಭೆಯ ಮೂಲಕ ಸಂಸತ್ತು ಪ್ರವೇಶಿಸಿದ್ದರು. 1996ರಲ್ಲಿ ಲೋಕಸಭೆಗೆ ಆಯ್ಕೆಯಾದರು. ಬಳಿಕ 13 ದಿನಗಳ ವಾಜಪೇಯಿ ಸರಕಾರದಲ್ಲಿ ಮಂತ್ರಿಯಾಗಿದ್ದರು. 1998ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ 12ನೇ ಲೋಕಸಭೆಯಲ್ಲಿ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಖಾತೆಯ ಮಂತ್ರಿಯಾದರು. ಬಳಿಕ ಲೋಕಸಭೆಯ ವಿಪಕ್ಷ ನಾಯಕಿಯಾಗಿಯೂ ಅವರು ಸೇವೆ ಸಲ್ಲಿಸಿದ್ದರು. ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದರು.
ಕರ್ನಾಟಕ ನಂಟು
1999ರಲ್ಲಿ 13ನೇ ಲೋಕಸಭೆ ಚುನಾವಣೆ ವೇಳೆ ರಾಜ್ಯದ ಬಳ್ಳಾರಿಯಿಂದ ಬಿಜೆಪಿ ಅಬ್ಯರ್ಥಿಯಾಗಿ ಕಣಕ್ಕಿಳಿದು ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಸ್ಪರ್ದೆಯೊಡ್ಡಿದ್ದರು. ಸೋನಿಯಾ ವಿರುದ್ಧ ಸೋಲುಂಡರು ಆದರೆ ಬಳ್ಳಾರಿಯಲ್ಲಿ ಕಮಲ ಪಕ್ಷಕ್ಕೆ ಭದ್ರ ಬುನಾದಿ ಹಾಕುವಲ್ಲಿ ಯಶಸ್ವಿಯಾದರು.