ಬಾಣತಿಹಾಳ ಕೊಲೆ ಪ್ರಕರಣಃ ನಾಲ್ವರು ಆರೋಪಿಗಳ ಬಂಧನ
ಯುವಕನ ಕೊಲೆ ಪ್ರಕರಣ ನಾಲ್ವರ ಬಂಧನ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಬಾಣತಿಹಾಳ ಗ್ರಾಮದಿಂದ ನಾಗನಟಗಿ ಗ್ರಾಮಕ್ಕೆ ತೆರಳುವ ಮಾರ್ಗ ಮದ್ಯೆ ಕಾಲುವೆಯೊಂದರಲ್ಲಿ ಈಚೆಗೆ ಯುವಕ ಸುರೇಶ ಗಾಂಜಿ ಎಂಬಾತನನ್ನು ಕೊಲೆ ಮಾಡಿ ಎಸೆಯಲಾಗಿತ್ತು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರ ತನಿಖಾ ತಂಡ ಶುಕ್ರವಾರ ಬೆಳಗ್ಗೆ ಬಂಧಿಸಿದೆ. ಇನ್ನೋರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಾದ ಮಂಜುನಾಥ(25) ಪಾಮಯ್ಯ (32), ಮಲ್ಲಿಕಾರ್ಜುನ(36) ಮತ್ತು ಹಣಮಂತ(48) ಬಂಧಿತ ಆರೋಪಿತರು. ಕೊಲೆಯಾದ ಸುರೇಶ ಎಂಬಾತ ಹೆಣ್ಣುಮಗಳೊಂದಿಗೆ ಅನೈತಿಕ ಸಂಬಂಧ ಹೊಂದಿರುತ್ತಾನೆ. ಆ ಕಾರಣಕ್ಕೆ ಆತನನ್ನು ಕೊಲೆ ಮಾಡಿದ್ದೇವೆ ಎಂದು ಆರೋಪಿತರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಮೃತ ಯುವಕನ ತಂದೆ ಗೋಗಿ ಠಾಣೆಗೆ ಸಲ್ಲಿಸಿದ ದೂರಿನನ್ವಯ ತನಖೆ ಆರಂಭಗೊಳಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಸುರಪುರ ಡಿವೈಎಸ್‍ಪಿ ಶಿವನಗೌಡ ಮಾರ್ಗದರ್ಶನದಲ್ಲಿ ಶಹಾಪುರ ಗ್ರಾಮೀಣ ಠಾಣೆಯ ಸಿಪಿಐ ಮಹ್ಮದ್ ಸಿರಾಜುದ್ದೀನ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿತ್ತು ಎಂದು ತನಿಖಾ ತಂಡ ತಿಳಿಸಿದೆ.
ತಂಡದಲ್ಲಿ ಸಿಪಿಐ ಮಹ್ಮದ್ ಸಿರಾಜುದ್ದೀನ್, ಪಿಎಸ್‍ಐ ಸುರೇಶ ಬಾಬು, ಪಿಸಿಗಳಾದ ರಾಮಲಿಂಗಯ್ಯ, ಶ್ರೀಶೈಲ್ ಸಜ್ಜನ್, ಮಾಳಪ್ಪ, ಮಲ್ಲಿಕಾರ್ಜುನ, ರಮೇಶ ಹಾಗೂ ಇತರೆ ಪೊಲೀಸ್ ಸಿಬ್ಬಂದಿ ಈ ಪ್ರಕರಣವನ್ನು ಭೇದಿಸಿ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.




