ಪ್ರತಿ ಮಾಸಿಕ ತಾಲೂಕು ಮಟ್ಟದಲ್ಲಿ ಅಹವಾಲು ಸ್ವೀಕಾರ-ಸಿಓ ಶಿಲ್ಪಾ ಶರ್ಮಾ
ಕುಂದುಕೊರತೆ ವಿಚಾರಣೆಗೆ ಸಭೆ ಕರೆಯಲು ಸಿಓ ಸೂಚನೆ
ಯಾದಗಿರಿ, ಶಹಾಪುರಃ ಜನ ಸಾಮಾನ್ಯರ ಅಗತ್ಯ ಬೇಡಿಕೆಗಳಿಗೆ ಸೂಕ್ತ ಸ್ಪಂಧನೆ ನೀಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಾರ್ವಜನಿಕ ಕುಂದು ಕೊರತೆಗಳಿಗಾಗಿ ಅಹವಾಲು ಸ್ವೀಕಾರ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಸಭೆ ಕರೆಯಲಾಗುವದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಲ ದೂರು ಸ್ವೀಕಾರ ಸಭೆಯಲ್ಲಿ ಭಾಗವಹಿಸಿ ಅವರು ಈ ವಿಷಯ ಪ್ರಸ್ತಾಪ ಮಾಡಿದರು. ಮುಂದುವರೆದು ಮಾತನಾಡಿದ ಅವರು, ಜನರು ತಮ್ಮ ಕಾರ್ಯ ಕೆಲಸಗಳಿಗೆ ಅಡ್ಡಿ ಉಂಟಾದಲ್ಲಿ ಯಾದಗಿರಿ ಜಿಪಂ ಕೇಂದ್ರ ಕಚೇರಿಗೆ ಬಂದು ದೂರು ಸಲ್ಲಿಸುವ ಅಗತ್ಯವಿಲ್ಲ. ಆಯಾ ತಾಲೂಕು ಅಧಿಕಾರಿಗಳಿಂದಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಒಟ್ಟು 12 ದೂರುಗಳನ್ನು ಸ್ವೀಕಾರ ಮಾಡಿದ ಅವರು, ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹಾರಕೈಗೊಳ್ಳಲು ಸೂಕ್ತ ಸಲಹೆ ಸೂಚನೆ ನೀಡಿದರು.
ರಸ್ತಾಪುರ ಗ್ರಾಪಂ ವ್ಯಾಪ್ತಿಯ ಶಾರದಳ್ಳಿ ಗ್ರಾಮದ ಓರ್ವ ವಿಕಲಚೇತನ ತನಗೆ ತ್ರಿಚಕ್ರ ವಾಹನ ನೀಡದಿರುವ ಬಗ್ಗೆ ದೂರು ನೀಡಿದರು. ಈ ಕುರಿತು ರಸ್ತಾಪುರ ಪಿಡಿಓ ಅವರಿಗೆ ಪರಿಶೀಲನೆ ನಡೆಸಿ, ಕೂಡಲೇ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು.
ಆಶ್ರಯ ಮನೆಗಳಿಗೆ ಜಿಪಿಎಸ್ ಮಾಡಿದ್ದರೂ ಇಲ್ಲಿವರೆಗೆ ಅನುದಾನ ಕಲ್ಪಿಸದ ಬಗ್ಗೆ ದೂರು ಕೇಳಿ ಬಂದಿತು. ಈ ಕುರಿತು ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಪರಿಶೀಲಿಸಿದ ನಂತರ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಹಲವಸೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದರೂ ಕುಡಿಯಲ ನೀರು ಪೂರೈಕೆಯಾಗುತ್ತಿಲ್ಲ.
ನೀರಿನ ಟ್ಯಾಂಕ್ ನೀರು ಪೂರೈಸಸದೆ ಸ್ಥಗಿತಿಗೊಳಿಸಿರುವ ಬಗ್ಗೆ ದೂರುಗಳು ಸಲ್ಲಿಸಲಾಯಿತು. ಮತ್ತು ಸಾರ್ವಜನಿಕ ಶೌಚಾಲಯ ಮತ್ತು ಅಲೆಮಾರಿ ಸಮುದಾಯದವರಿಗೆ ಮನೆ ಹಂಚಿಕೆ ಮತ್ತು ಪ್ರತಿ ಗ್ರಾಪಂ ಕಚೇರಿಯಲ್ಲಿ ಆಧಾರ ಕಾರ್ಡ್ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು. ಜಿಪಂ ಸಿಓ ಅವರು ದೂರುಗಳನ್ನು ಆಲಿಸಿ ಅವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಪಂಪಾಪತಿ ಹೀರೆಮಠ, ಜಿಪಂ ಎಇಇ ಶರಣಗೌಡ ಕುರುಕುಂದಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ರಾಜಕುಮಾರ ಪತ್ತಾರ, ತಾಲೂಕಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ರಾಹುತಪ್ಪ ಹವಲ್ದಾರ, ಸಿಡಿಪಿಓ ಗುರುಪಾದಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ್, ಬಿಸಿಎಂ ವ್ಯವಸ್ಥಾಪಕ ಸೋಮಶೇಖರ, ತಾಪಂ ವ್ಯವಸ್ಥಾಪಕ ಗೋಪಾಲ ಸುರಪುರ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಿದ್ದರು.