ಕೇಂದ್ರ ಸಚಿವ ಹೆಗಡೆ ಹೇಳಿಕೆ ಖಂಡಿಸಿ ಪ್ರತಿಭಟನೆ, ಪ್ರತಿಕೃತಿ ದಹನ
ಯಾದಗಿರಿಃ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಸಂವಿಧಾನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಜಿಲ್ಲೆಯ ಶಹಾಪುರ ನಗರದಲ್ಲಿ ಎಸ್ಡಿಪಿಐ ಮತ್ತು ಡಿಎಸ್ಎಸ್ ಸಂಘಟನೆಗಳು ಜಂಟಿಯಾಗಿ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.
ಸಂವಿಧಾನದ ಬಗ್ಗೆ ಗೌರವವಿಲ್ಲದ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರು ಕೂಡಲೇ ರಾಜೀನಾಮೆ ನೀಡಬೇಕು. ದೇಶದ ಪ್ರಧಾನಮಂತ್ರಿ ಮೋದಿಯವರು ಸಂವಿಧಾನವೇ ನಮ್ಮ ದೇಶದ ಗ್ರಂಥವೆಂದು ಒಂದಡೆ ಹೇಳಿದರೆ, ಅವರದೇ ಸರ್ಕಾರದ ಕೇಂದ್ರ ಸಚಿವ ಸಂಪುಟದ ಅನಂತಕುಮಾರ ಹೆಗಡೆಯವರು ಸಂವಿಧಾನ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಎಂದರೆ ಇವರಿಗೆ ತಮ್ಮ ಜವಬ್ದಾರಿ ಬಗ್ಗೆ ಅರಿವಿಲ್ಲ. ರಾಜ್ಯದಲ್ಲಿ ಬೆಂಕಿ ಹಚ್ಚಲು ಇಂತಹ ಅಸಾಮಥ್ರ್ಯ ವ್ಯಕ್ತಿಯನ್ನು ಕೇಂದ್ರದ ಮಂತ್ರಿಯನ್ನಾಗಿ ಮಾಡಲಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಹೇಳಿಕೆ ಮೂಲಕ ಸಮಾಜಿಕ ಸ್ವಾಸ್ಥವನ್ನು ಹದಗೆಡಿಸುವದಲ್ಲದೆ ಕೋಮುವಾದ ಸೃಷ್ಟಿಸಿ ರಾಜ್ಯದಲ್ಲಿ ಕಿಚ್ಚು ಹೊತ್ತಿಸಿ ಅಧಿಕಾರ ಪಡೆಯಬೇಕೆಂಬ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.
ಸಂವಿಧಾನದ ಬಗ್ಗೆ ವಿಶ್ವಾಸ ಇಲ್ಲದವರು. ಸಚಿವ ಸ್ಥಾನಕ್ಕೆ ಅರ್ಹರಲ್ಲ. ಕೂಡಲೇ ಸಚಿವ ಅನಂತಕುಮಾರ ನೈತಿಕತೆ ಹೊಂದಿದ್ದರೆ ರಾಜೀನಾಮೆ ನೀಡಲಿ. ಅಲ್ಲದೆ ಕೇಂದ್ರ ಸರ್ಕಾರ ಸಚಿವ ಸಂಪುಟದಿಂದ ಅವರನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಚಿವ ಹೆಗಡೆ ಅವರ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಸಂವಿಧಾನ ವಿರೋಧಿ ಅನಂತಕುಮಾರ ತೊಲಗಲಿ ಎಂಬ ಘೋಷಣೆಗಳು ಕೂಗಿದರು.
ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ಸೋಮಶೇಖರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಎಸ್ಡಿಪಿಐ ಜಿಲ್ಲಾಧ್ಯಕ್ಷ ಸೈಯ್ಯದ್ ಖಾಲಿದ್, ಕೆ.ಎಂ.ಪಾಶಾ, ಅಬ್ದುಲ್ ಸಲಾಂ, ಜಾಕೀರ, ಶೇಕ್ ಇರ್ಫಾನ್, ರಿಯಾಜ್, ಬಾಷಾಭಾಯಿ, ದಸಂಸ ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ, ನಾಗಣ್ಣ ಬಡಿಗೇರ, ರಾಮಣ್ಣ ಸಾದ್ಯಾಪುರ, ತಾಪಂ ಸದಸ್ಯ ಪರಶುರಾಮ ಕುರಕುಂದಿ, ಪರಶುರಾಮ ಕಾಂಬಳೆ, ಬಾಲರಾಜ ಖಾನಾಪುರ, ಹೊನ್ನಪ್ಪ ಗಂಗನಾಳ, ಇಸ್ಮಾಯಿಲ್ ಸೇರಿದಂತೆ ಇತರರು ಭಾಗವಹಿಸಿದ್ದರು.