ಪ್ರಮುಖ ಸುದ್ದಿ

ಜುಲೈ 31ರೊಳಗಾಗಿ ಕೃಷಿ ಯೋಜನೆ ಅನುಷ್ಠಾನ ಖಡಕ್ ಸೂಚನೆ

ಕೃಷಿ ಕಲ್ಯಾಣ ಅಭಿಯಾನ ಪ್ರಗತಿ ಪರಿಶೀಲನಾ ಸಭೆ

ಜುಲೈ 31ರೊಳಗೆ ಕೃಷಿ ಯೋಜನೆಗಳನ್ನು ಅನುಷ್ಠಾನಗೊಳಿಸಿ

ಯಾದಗಿರಿಃ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ “ಕೃಷಿ ಕಲ್ಯಾಣ ಅಭಿಯಾನ” ಕಾರ್ಯಕ್ರಮದಡಿ ಆಯ್ಕೆ ಮಾಡಲಾಗಿರುವ ಯಾದಗಿರಿ ಜಿಲ್ಲೆಯ 25 ಗ್ರಾಮಗಳಲ್ಲಿ ವಿವಿಧ ಇಲಾಖೆಗಳಿಂದ ಕೈಗೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಜುಲೈ 31ರೊಳಗಾಗಿ ಅನುಷ್ಠಾನಗೊಳಿಸಬೇಕು ಎಂದು ಅಭಿಯಾನದ ಜಿಲ್ಲೆಯ ನೋಡಲ್ ಅಧಿಕಾರಿಗಳು ಹಾಗೂ ಬಳ್ಳಾರಿಯಲ್ಲಿರುವ ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣಾ ಸಂಸ್ಥೆಯ ಪ್ರಧಾನ ವಿಜ್ಞಾನಿಗಳಾದ ಡಾ.ಎಸ್.ಎಲ್. ಪಾಟೀಲ್ ಅವರು ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ “ಕೃಷಿ ಕಲ್ಯಾಣ ಅಭಿಯಾನ” ಕಾರ್ಯಕ್ರಮದಡಿ ಜಿಲ್ಲೆಯ 25 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಿರುವ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಅಭಿಯಾನಕ್ಕೆ ಸಂಬಂಧಪಟ್ಟ ಇಲಾಖೆಗಳು ಎಲ್ಲಾ ಕಾರ್ಯಕ್ರಮಗಳ ಫಲಾನುಭವಿಗಳ ಪಟ್ಟಿಯನ್ನು ಆಧಾರ್ ಸಂಖ್ಯೆ ಒಳಗೊಂಡಂತೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಿಗೆ ನೀಡಬೇಕು. ಅವರು ಈ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದು ಅವರು ಹೇಳಿದರು.

ಅಪರ ಜಿಲ್ಲಾಧಿಕಾರಿಗಳಾದ ಪ್ರಕಾಶ ಜಿ.ರಜಪೂತ ಅವರು ಮಾತನಾಡಿ, ನಿಗದಿತ ಅವಧಿಯಲ್ಲಿ ಸರಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಬೇಕು. ಜಿಲ್ಲೆಗೆ ಕೇಂದ್ರ ಸರಕಾರದ ನೋಡಲ್ ಅಧಿಕಾರಿಗಳು ಬಂದಾಗ ಪ್ರಗತಿ ಬಗ್ಗೆ ನಿಖರ ವರದಿ ಒಪ್ಪಿಸಬೇಕು. ಇಲ್ಲವಾದರೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಂಟಿ ಕೃಷಿ ನಿರ್ದೇಶಕರಾದ ದೇವಿಕಾ ಆರ್. ಅವರು ಮಾತನಾಡಿ, 25 ಗ್ರಾಮಗಳಲ್ಲಿ ನಿಗದಿಪಡಿಸಿದ್ದ 4,476 ಮಣ್ಣು ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ. ಈ ಪೈಕಿ 3,088 ಮಣ್ಣು ಮಾದರಿಗಳನ್ನು ಪರೀಕ್ಷೆ ಮಾಡಲಾಗಿದ್ದು, ಇಲ್ಲಿವರೆಗೆ 2,773 ಮಣ್ಣು ಆರೋಗ್ಯ ಚೀಟಿಗಳನ್ನು ರೈತರಿಗೆ ವಿತರಿಸಲಾಗಿದೆ. ಪ್ರತಿ ಹಳ್ಳಿಗೆ 200 ರೈತರಂತೆ ಒಟ್ಟು 5,000 ರೈತರಿಗೆ 4 ಕೆ.ಜಿ.ಯ ತೊಗರಿ ಬೀಜದ ಕಿರು ಚೀಲಗಳನ್ನು ವಿತರಿಸಲಾಗಿದೆ.

ಹಳ್ಳಿಗೆ 20ರಂತೆ ನಡಾಫ್ ಗೊಬ್ಬರದ ಗುಂಡಿಗಳನ್ನು ನಿರ್ಮಿಸಲು ಮತ್ತು ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ರೈತ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ತೋಟಗಾರಿಕೆ ಹಾಗೂ ಅರಣ್ಯ ಇಲಾಖೆಗಳ ವತಿಯಿಂದ ಪ್ರತಿ ಗ್ರಾಮದಲ್ಲಿ 100 ಜನ ರೈತರಿಗೆ ತಲಾ 5 ಸಸಿಗಳನ್ನು ವಿತರಿಸಲಾಗುತ್ತಿದೆ ಎಂದು ಇಲಾಖೆಗಳ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಈ ಎಲ್ಲಾ ಗ್ರಾಮಗಳಲ್ಲಿ ಪಶುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ವರದಿ ಒಪ್ಪಿಸಿದರು.

ಪ್ರತಿ ಗ್ರಾಮದಲ್ಲಿ ಜೇನು ಸಾಕಾಣಿಕೆ, ಅಣಬೆ ಬೇಸಾಯ, ಕೈತೋಟ ಸೇರಿದಂತೆ ಇತರೆ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದ್ದು, ಈ ಪೈಕಿ 23 ಗ್ರಾಮಗಳಲ್ಲಿ ರೈತರಿಗೆ ತರಬೇತಿ ನೀಡಲಾಗಿದೆ ಎಂದು ಕವಡಿಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಉಮೇಶ್ ಬಾರಿಕರ್ ಅವರು ಸಭೆಯ ಗಮನಕ್ಕೆ ತಂದರು.
ಕೃಷಿ ತಾಂತ್ರಿಕ ಅಧಿಕಾರಿ ರಾಜಕುಮಾರ್ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button