ಸ್ವಾತಂತ್ರ್ಯೋತ್ಸವ : ಮಾಣಿಕ್ ಷಾ ಮೈದಾನದಲ್ಲಿ ಸೆಲ್ಫಿ ಸಹವಾಸ ಬೇಡ!
ಬೆಂಗಳೂರು : ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಸೆಲ್ಫಿ ಕ್ರೇಜ್ ಇರುವವರು ಮುಜುಗರಕ್ಕೀಡಾಗುವುದು ಗ್ಯಾರಂಟಿ. ಯಾಕಂದ್ರೆ, ಸೆಲ್ಫಿ ತೆಗೆದುಕೊಳ್ಳುವ ಮಂದಿಯಿಂದಾಗಿ ಕಾರ್ಯಕ್ರಮ ವೀಕ್ಷಕರಿಗೆ ಅನಗತ್ಯ ಕಿರಿಕಿರಿ ಆಗುತ್ತದೆ. ಹಾಗಾಗಿ, ಸೆಲ್ಫಿಗೆ ಬ್ರೇಕ್ ಹಾಕಿ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ಸಿದ್ಧತೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು ಸೆಲ್ಫಿ ಕ್ರೇಜ್ ಹೆಚ್ಚಾಗುತ್ತ ಸಾಗಿದ್ದು ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಜನರಿಗೆ ತೊಂದರೆ ಆಗುತ್ತದೆ. ಹಾಗಾಗಿ ಸೆಲ್ಫಿಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಸಿಎಂ ಧ್ವಜಾರೋಹಣ ಮಾಡಲಿದ್ದಾರೆ. 34 ಕ್ಕೂ ತಂಡಗಳು ಪಥ ಸಂಚಲನದಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಎಸ್ ಆರ್ ಪಿ, ಸ್ಕೌಟ್, ಗೈಡ್ ಎನ್ ಸಿಸಿ ಸೇವಾದಳ ಹಾಗೂ ವಿವಿಧ ಶಾಲೆಯ ಮಕ್ಕಳು ಸೇರಿದಂತೆ ಒಟ್ಟು 1130 ಮಂದಿ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.
ಅತಿಗಣ್ಯರಿಗೆ 1200 ಆಸನಗಳು, ಸ್ವಾತಂತ್ರ್ಯ ಹೋರಾಟಗಾರರು, ರಕ್ಷಣಾ ಇಲಾಖೆ ಅಧಿಕಾರಿಗಳು, ಗಣ್ಯ ವ್ಯಕ್ತಿಗಳು, ಪತ್ರಿಕಾ ಪ್ರತಿನಿಧಿಗಳಿಗಾಗಿ 750 ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರಿಗೆ ಒಟ್ಟು 7 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ ಎಂದರು.