ಬಾಲ ಜೀವನ್ ಬಿಮಾ ಯೋಜನೆ: ಏನಿದು ಯೋಜನೆ? ಯಾರೆಲ್ಲ ಅರ್ಹರು? ಸಂಪೂರ್ಣ ವಿವರ

ಬೆಂಗಳೂರು: ಮಕ್ಕಳ ಭವಿಷ್ಯ ಉಜ್ವಲವಾಗಿರಬೇಕು ಎನ್ನುವುದು ಪ್ರತಿಯೊಬ್ಬ ಪಾಲಕರ ಕನಸು. ಮಕ್ಕಳು ಸದಾ ಸಂತಸದಿಂದ ಇರಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಏನೇ ತ್ಯಾಗ ಮಾಡಲೂ ಸಿದ್ಧರಿರುತ್ತಾರೆ. ತಮ್ಮಂತೆ ಮಕ್ಕಳು ಕಷ್ಟಪಡಬಾರದೆಂದು ಒದ್ದಾಡುತ್ತಾರೆ. ಇದೇ ಕಾರಣಕ್ಕೆ ಮಕ್ಕಳು ಕೇಳಿದ್ದನ್ನೆಲ್ಲ ತಂದು ಗುಡ್ಡೆ ಹಾಕುತ್ತಾರೆ. ಅದರಲ್ಲಿಯೂ ಮಕ್ಕಳ ಬರ್ತ್‌ಡೇ ಬಂತೆಂದರೆ ಸಾಕು ದುಬಾರಿ ಉಡುಗೊರೆ ನೀಡಲು ಮುಂದಾಗುತ್ತಾರೆ. ನೀವೂ ಮಗುವಿನ ಹುಟ್ಟಿದ ಹಬ್ಬಕ್ಕೆ ಏನಾದರೂ ಗಿಫ್ಟ್ ಕೊಡಬೇಕು ಎನ್ನುವ ಯೋಚನೆಯಲ್ಲಿದ್ದೀರಾ? ಈ ಉಡುಗೊರೆ ಅವರ ಉಜ್ವಲ ಭವಿಷ್ಯಕ್ಕೂ ನೆರವಾಗಬೇಕು ಎಂದು ಯೋಚಿಸುತ್ತಿದ್ದೀರಾ? ಹೌದು ಎಂದಾದರೆ ನೀವು ಅಂಚೆ ಕಚೇರಿಯ ಬಾಲ್ ಜೀವನ್ ಬಿಮಾ (Bal Jeevan Bima) ಯೋಜನೆಯಲ್ಲಿ ಮಗುವಿನ ಹೂಡಿಕೆ ಮಾಡಬಹುದು. ಏನಿದು ಯೋಜನೆ? ಯಾರೆಲ್ಲ ಅರ್ಹರು? ಮುಂತಾದ ಸಂಪೂರ್ಣ ವಿವರ ಇಂದಿನ ಮನಿಗೈಡ್‌ನಲ್ಲಿದೆ.
ಏನಿದು ಯೋಜನೆ?
ಭಾರತೀಯ ಅಂಚೆ ಕಚೇರಿ ಮಕ್ಕಳಿಗಾಗಿಯೇ ಆರಂಭಿಸಿದ ಯೋಜನೆ ಇದು. 5ರಿಂದ 20 ವರ್ಷದೊಳಗಿನ ಮಕ್ಕಳ ಪೋಷಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಪ್ರತಿ ದಿನ ಮಕ್ಕಳ ಹೆಸರಿನಲ್ಲಿ 6 ರೂ. ಹೂಡಿಕೆ ಮಾಡಿದರೆ ಮೆಚ್ಯುರಿಟಿ ಆದಾಗ 1 ಲಕ್ಷ ರೂ. ಪಡೆಯಬಹುದು. ಆಕಸ್ಮಿಕವಾಗಿ ಮೃತಪಟ್ಟರೆ ಬಳಿಕ ಹಣ ಕಟ್ಟಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಪಾಲಕರಿಗೆ 1 ಲಕ್ಷ ರೂ. ಸಂದಾಯವಾಗುತ್ತದೆ.
ಯಾರೆಲ್ಲ ಅರ್ಹರು?
ಅರ್ಜಿ ಸಲ್ಲಿಸುವ ಪಾಲಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು. ಮಗುವಿನ ವಯಸ್ಸು ಕನಿಷ್ಠ 5 ವರ್ಷ ಮತ್ತು ಗರಿಷ್ಠ ವಯಸ್ಸು 20 ವರ್ಷ. ಈ ಯೋಜನೆಯಡಿ ಒಂದು ಕುಟುಂಬದ 2 ಮಕ್ಕಳು ಮಾತ್ರ ಪ್ರಯೋಜನಗಳನ್ನು ಪಡೆಯಬಹುದು. ದೈನಂದಿನ ಹೂಡಿಕೆ ಆಯ್ಕೆ ಪಾಲಕರ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಮೊತ್ತವನ್ನು ಮಕ್ಕಳ ಶಿಕ್ಷಣ ಹಾಗೂ ಇತರ ಹಣಕಾಸು ಸಹಾಯಕ್ಕೆ ಬಳಕೆ ಮಾಡಬಹುದು. ಈ ಯೋಜನೆ ಹಣವನ್ನು ಉಳಿತಾಯ ಮಾಡಲೂ ಸಹಕಾರಿ.
ಹೂಡಿಕೆ ಹೇಗೆ?
ಈ ಯೋಜನೆಯಲ್ಲಿ ಕನಿಷ್ಠ ವಿಮಾ ಮೊತ್ತವು 1,00,000 ರೂ. ಮತ್ತು ಗರಿಷ್ಠ ವಿಮಾ ಮೊತ್ತ 3,00,000 ರೂ. ಪ್ರತಿ ದಿನ, ಮಾಸಿಕ, ಪಾಕ್ಷಿಕ, ಅರ್ಧ ವಾರ್ಷಿಕ, ವಾರ್ಷಿಕ ಹೀಗೆ ನಿಮ್ಮ ಆಯ್ಕೆಯ ವಿಧಾನದಲ್ಲಿ ಹೂಡಿಕೆ ಮಾಡಬಹುದು. ಉದಾಹರಣೆ ನೋಡುವುದಾದರೆ, ನೀವು 5 ವರ್ಷಗಳಿಗೆ ಹೂಡಿಕೆ ಮಾಡುತ್ತಿದ್ದರೆ ಪ್ರತಿದಿನ 18 ರೂ. ಪಾವತಿಸಬೇಕು. ಅದೇ 20 ವರ್ಷಗಳವರೆಗೆ ಹೂಡಿಕೆ ಮಾಡುತ್ತಿದ್ದರೆ ದಿನಕ್ಕೆ 6 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ.
ಷರತ್ತುಗಳು
ಪಾಲಿಸಿದಾರ ಮಧ್ಯದಲ್ಲಿಯೇ ಮೃತಪಟ್ಟರೆ ಹಣವನ್ನು ಪಾವತಿಸಬೇಕಾಗಿಲ್ಲ. ಪಾಲಿಸಿ ಅವಧಿ ಮುಗಿದ ಮೇಲೆ ಸಂಪೂರ್ಣ ಹಣ ಸಿಗುತ್ತದೆ. ಮಧ್ಯದಲ್ಲಿಯೇ ಪಾಲಿಸಿ ವಿತ್ ಡ್ರಾ ಮಾಡಲು 5 ವರ್ಷ ಕಾಯಬೇಕು. 5 ವರ್ಷಕ್ಕಿಂತ ಮೊದಲು ಪಾಲಿಸಿ ಹಣ ಪಡೆಯಲು ಸಾಧ್ಯವಿಲ್ಲ. ಸದ್ಯ ಈ ಪಾಲಿಸಿಯಲ್ಲಿ ಸಾಲ ಪಡೆಯಲು ಅವಕಾಶವಿಲ್ಲ.
ಎಲ್ಲಿ ಲಭ್ಯ?
ಬಾಲ ಜೀವನ್ ಬಿಮಾ ಯೋಜನೆ ಪಡೆಯಲು ನಿಮ್ಮ ಸಮೀಪದ ಅಂಚೆ ಕಚೇರಿಗೆ ಭೇಟಿ ನೀಡಿ. ಈ ಯೋಜನೆಯ ಅರ್ಜಿ ಪಡೆದು ಅದನ್ನು ಭರ್ತಿ ಮಾಡಿ ಸಲ್ಲಿಸಿ.
ಏನೆಲ್ಲ ದಾಖಲೆ ಅಗತ್ಯ?
ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಗುವಿನ ಜನನ ದಾಖಲೆ, ಆಧಾರ್ ಕಾರ್ಡ್, ವಿಳಾಸದ ದಾಖಲೆ, ಪಾಲಕರ ಆಧಾರ್ ಕಾರ್ಡ್, ಮೊಬೈಲ್ ನಂಬರ್, ಪಾಸ್‌ಪೋರ್ಟ್ ಗಾತ್ರದ ಫೋಟೋ ಅಗತ್ಯ.