ಯುವಕರು ಕೃಷಿಯತ್ತ ಮುಖ ಮಾಡಲಿ – ಭಾಸ್ಕರರಾವ್ ಮುಡಬೂಳ
ನಮ್ಮ ನಡೆ ಕೃಷಿಯ ಕಡೆ ಸಂಘದಿಂದ ನಡೆದ ಕಾರ್ಯಕ್ರಮ
ಯಾದಗಿರಿ, ಸುರಪುರ: ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ನಾಶ ಮಾಡಿಕೊಳ್ಳಬೇಡಿ. ಮರಳಿ ನಾವೆಲ್ಲರೂ ಕೃಷಿಯ ಕಡೆ ಮುಖ ಮಾಡಬೇಕು. ಕೃಷಿಯು ದೈಹಿಕ ಶ್ರಮದ ಜೊತೆಗೆ ಮಾನಸಿಕ ನೆಮ್ಮದಿಯ ದಿವ್ಯ ಶಕ್ತಿಯನ್ನು ಹೊಂದಿದೆ ಎಂದು ರೈತ ಮುಖಂಡ ಭಾಸ್ಕರರಾವ ಮುಡಬೂಳ ತಿಳಿಸಿದರು.
ತಾಲ್ಲೂಕಿನ ದೇವರಗೋನಾಲದ ನಮ್ಮ ನಡೆ ಕೃಷಿಯ ಕಡೆ ಸಂಘವು ಭಾನುವಾರ ಹಮ್ಮಿಕೊಂಡಿದ್ದ ಪ್ರಕೃತಿ ಫರ‍್ಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜಕೀಯದ ಬೆನ್ನು ಹತ್ತಿದವರಿಗೆ ನಿರಾಶೆಯ ಮೂಡಿಸುವುದು ಗ್ಯಾರಂಟಿ. ಶ್ರಮವಹಿಸಿ ದುಡಿಯುವ ಕಲೆಯನ್ನು ಕರಗತಮಾಡಿಕೊಳ್ಳಿ. ಕೃಷ್ಣೆಯ ಸಮೃದ್ಧಿ ನೀರು ನಮ್ಮ ಪಾಲಿಗೆ ವರವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾವಂತ ಯುವಕರು ಕೃಷಿಯ ಆಧುನಿಕತೆಯನ್ನು ಉಪಯೋಗಿಸಿಕೊಂಡು ಕುರಿ ಸಾಕಾಣಿಕೆ, ತೋಟಗಾರಿಕೆ,ಜೇನು ಸಾಕಾಣಿಕೆ, ಹೈನುಗಾರಿಕೆ ಹೀಗೆ ಹಲವಾರು ಉಪ ಕಸುಬುಗಳ ಮೂಲಕ ಲಾಭದಾಯಕ ಉತ್ಪನ್ನವನ್ನಾಗಿ ಮರ‍್ಪಡಿಸಿಕೊಳ್ಳುತ್ತಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದರು.
ನಮ್ಮ ನಡೆ ಕೃಷಿಯ ಕಡೆ ಸಂಘದ ಸಂಚಾಲಕ ಮಲ್ಲಿಕರ‍್ಜುನ ಪಡದಳ್ಳಿ ಮಾತನಾಡಿ, ಯುವಕರು ಮೊದಲು ಧನಾತ್ಮಕವಾಗಿ ಚಿಂತನೆ ಮಾಡಬೇಕು. ಕೃಷಿಯಿಂದ ನಾವು ಎಂದಿಗೂ ನಿರಾಸೆಯಾಗಬಾರದು. ಮೊದಲು ನೀರಿನ ಲಭ್ಯತೆಯನ್ನು ಆಯ್ಕೆ ಮಾಡಿಕೊಂಡು ಮುಂದೆಜ್ಜೆ ಇಡಬೇಕು.
ಆರಂಭದಲ್ಲಿ ನಾವು ಕೃಷಿಯಲ್ಲಿ ತೊಡಗಿದಾಗ ನಗೆಪಾಟಲಿಗೆ ಈಡಾಗುತ್ತೇವೆ .ಅದನ್ನು ಧರ‍್ಯವಾಗಿ ಮೆಟ್ಟಿನಿಂತು ಗುರಿಯತ್ತ ಸಾಗಿದಾಗ ಫಲ ಸಿಗುವುದರಲ್ಲಿ ಅನುಮಾನವಿಲ್ಲ. ಸಮಗ್ರ ಕೃಷಿ ನಮ್ಮ ಮೊದಲ ಆಯ್ಕೆಯಾಗಲಿ ಎಂದರು.
ಪ್ರಕೃತಿ ಫರ‍್ಮ ನ ಮುಖ್ಯಸ್ಥ ಪ್ರಕಾಶ ಟಿ.ನಾಯಕ, ತಾಲ್ಲೂಕು ಪಂಚಾಯಿತಿ ಸದಸ್ಯ ಹಣಮಂತರಾಯ ದೊರೆ ದಳಪತಿ, ನಾಟಕಕಾರ ಎಲ್‌ಬಿಕೆ ಆಲ್ದಾಳ, ಕೃಷಿ ಅಧಿಕಾರಿ ನಾಗರಾಜ ಸಜ್ಜನ,ಶರಣಪ್ಪ ಗುಮ್ಮಾ, ಶರಣಗೌಡ ಪಾಟೀಲ್, ಆರ್.ಚೆನ್ನಬಸ್ಸು ವನದರ‍್ಗ, ವಸಂತ ಸುರಪುರಕರ್, ರವಿ.ಹಿರೇಮಠ, ಮಲ್ಲಿಕಾರ್ಜುನಯ್ಯ ಕಡೆಚೂರ, ಹಣಮಂತರಾಯ ಬೇಟೆಗಾರ, ಚಂದ್ರಶೇಖರ ಚಂದನಕೇರಿ, ರಮೇಶ ಪತ್ತಾರ, ಅಂಬ್ಲಯ್ಯ ಬೇಟೆಗಾರ ಇದ್ದರು.