ನಿಂದಕರಿರಲಿ ಮನೆಯಂಗಳದಲ್ಲಿ ಜಯಶ್ರೀ ಅಬ್ಬಿಗೇರಿ ಬರಹ
ತಪ್ಪುಗಳನ್ನು ತೀಡುವ ಶಕ್ತಿ ಟೀಕೆಗಳಿಗಿದೆ.!?
ಜಯಶ್ರೀ.ಜೆ. ಅಬ್ಬಿಗೇರಿ.9449234142
ಇಷ್ಟವಾದುದನ್ನು ಪ್ರೀತಿಯಿಂದ ಮಾಡುತ್ತೇವೆ. ಬಾನೆತ್ತರಕ್ಕೆ ಹಾರಿ ಖುಷಿ ಸಂಭ್ರಮಿಸುವ ಸಂದರ್ಭವೂ ಬರುತ್ತದೆ. ತನ್ನನ್ನು ಹಿಡಿಯುವವರು ಯಾರೂ ಇಲ್ಲ. ಎಂದುಕೊಳ್ಳುತ್ತಿರುವಾಗ ಅನಿರೀಕ್ಷಿತವಾಗಿ ಎಲ್ಲಿಂದಲೋ ಹಾರಿ ಬಂದ ಧೂಳು ಕಣ್ಣಿಗೆ ಬಿದ್ದಂತೆ ಟೀಕಾಕಾರರು ಹಾಜರಾಗುತ್ತಾರೆ.
ಇಷ್ಟು ಹೊತ್ತು ಹಿತೈಷಿಗಳೆಲ್ಲ ಬೆನ್ನು ತಟ್ಟಿದ್ದು ಕ್ಷಣಾರ್ಧದಲ್ಲಿ ಮಾಯವಾಗಿ ಬಿಡುತ್ತದೆ. ಮನಸ್ಸು ಗಾಳಿ ತೆಗೆದ ಸೈಕಲ್ ಗಾಲಿಯಂತಾಗಿ ಬಿಡುತ್ತದೆ. ಗಗನದಲ್ಲಿ ಹಾರುತ್ತಿದ್ದ ಮನವು ಒಮ್ಮಿಂದೊಮ್ಮೆಲೇ ಇಲ್ಲ ಸಲ್ಲದ ಟೀಕೆಯ ಗೂಡಿನಲ್ಲಿ ಬಿದ್ದು ನರಳುತ್ತದೆ. ಮುಂಜಾನೆಯ ಮಂಜು, ಬಾಲ ರವಿಯ ಮುಗಳ್ನಗು, ಚುಮು ಚುಮು ಬೆಳಗು, ತಂಪಾಗಿ ಸೂಸುವ ತಂಗಾಳಿ, ಹೆತ್ತವ್ವನ ಕೈ ತುತ್ತು, ಗೆಳೆಯನ ಮನಸೆಳೆಯುವ ಮಾತುಗಳು ಇವು ಯಾವವೂ ಹಿತ ನೀಡವು.
ಟೀಕೆಗಳು ನಮ್ಮನ್ನು ಈ ರೀತಿಯಾಗಿ ಕೊಲ್ಲುತ್ತವೆಯೇ? ಇನ್ನಿಲ್ಲದಂತೆ ನುಂಗಿ ಬಿಡುತ್ತವೇಯೇ? ಹೌದು, ಮನಸ್ಸನ್ನು ಅಲ್ಲೋಲ ಕಲ್ಲೋಲ ಮಾಡುವ ಶಕ್ತಿ ಟೀಕೆಗಳಿಗಿದೆ. ತಪ್ಪುಗಳನ್ನು ತಿದ್ದಿ ಹೇಳುವ ವಿಶಿಷ್ಟ ಬಲ ಅವುಗಳಿಗಿದೆ.
ಆದರೆ ನಾವೆಲ್ಲ ನಿಂದಕರನ್ನು ವಿಮರ್ಶಕರನ್ನು ಟೀಕಾಕಾರನ್ನು ದೂರವೇ ಇಡುತ್ತೇವೆ. ಸ್ವ ವಿಮರ್ಶೆಗೆ ಹಚ್ಚುವ ಅಗಾಧ ತಾಕತ್ತು ನಿಂದನೆಗಳಿಗಿದೆ. ‘ನಿಂದಕರಿಗೆ ಮನೆಯ ಅಂಗಳದಲ್ಲಿ ಜಾಗ ನೀಡಬೇಕು. ಸಾಬೂನು ಮತ್ತು ನೀರಿಲ್ಲದೇ ಅವರು ನಮ್ಮ ಸ್ವಭಾವವನ್ನು ಶುದ್ದೀಕರಿಸುತ್ತಾರೆ” ಎಂದಿದ್ದಾರೆ ನಿಂದಕರ ಮಹತ್ತರ ಪಾತ್ರ ತಿಳಿದ ಕಬೀರದಾಸರು ‘ಟೀಕಾಕಾರರನ್ನು ನಿನ್ನ ಗೆಳೆಯರನ್ನಾಗಿಸಿಕೋ’ ಎನ್ನುತ್ತಾರೆ ಬಲ್ಲವರು.
ರಾಜಕೀಯ ಪಕ್ಷಗಳು, ಸಾರ್ವಜನಿಕರು, ಧರ್ಮಾನುಯಾಯಿಗಳು ಟೀಕೆ ಮಾಡುವುದನ್ನು ನಿತ್ಯ ಸಮೂಹ ಮಾಧ್ಯಮಗಳಲ್ಲಿ ಕಾಣುತ್ತೇವೆ ನಿರ್ಧಾರದ ಮೌಲ್ಯ ಮಾಪನಕ್ಕೆ ಟೀಕೆ ಅವಶ್ಯಕ.ಯೋಜನೆಗಳ, ಕ್ರಿಯಾತ್ಮಕ ನಡೆಗಳ ಸಾಧಕ ಬಾಧಕಗಳನ್ನು ತಿಳಿಯಲು ಟೀಕೆ ಸಹಕಾರಿ. ಕಣ್ಣಲ್ಲಿ ತುಂಬಿದ ಕನಸುಗಳಿಗೆ ಜೀವ ತುಂಬಲು ಹೆತ್ತವರು ಶಿಕ್ಷಕರು ಹಿತೈಷಿಗಳಾಗಿರುತ್ತಾರೆ. ಕನಸೆಂಬ ಏಣಿಯ ಹತ್ತಲು ಸದಾ ನಮ್ಮ ಬೆನ್ನಿಗಿರುತ್ತಾರೆ. ಇದು ಗೆಲುವಿಗಿರುವ ಒಂದು ಮುಖವಾದರೆ ಟೀಕಾಕಾರದು ಇನ್ನೊಂದು ಮುಖ. ನಿಜವಾದ ಟೀಕಾಕಾರರು ನಮ್ಮ ಸಾಮಥ್ರ್ಯಕ್ಕೆ ಸವಾಲೆಸೆಯುತ್ತಾರೆ. ಅಂತರಂಗದ ಮೃದಂಗದ ಸುಶ್ರಾವ್ಯದ ಸಿರಿ ಹೊರ ಬರುವಂತೆ ಮಾಡುತ್ತಾರೆ. ಎಂಬುದು ಡಿವಿಜಿಯವರ ನುಡಿ.
ಬೀಳುವದ ನಿಲ್ಲಿಪುದು ಬಿದ್ದುದನು ಕಟ್ಟುವುದು
ಹಾಲೊಡೆಯೆ ಕಡೆದದನು ತಕ್ರವಾಗಿಪುದು
ಹಾಳ ಹಾಳಾಗಿಪುವುದು ಹಳದ ಹೊಸತಾಗಿಪುದು
ಬಾಳಗಿದೆ ಚಿರಧರ್ಮ ಮಂಕುತಿಮ್ಮ
ಹೊಟ್ಟೆಕಿಚ್ಚಿನ ಮಾತುಗಳಿಗೆ, ಬೇಜವಾಬ್ದಾರಿ ನುಡಿಗಳಿಗೆ, ಅಪನಿಂದೆಗಳಿಗೆ ಕಿವಿಗೊಡಬಾರದು. ಗುರಿಗಳಿಂದ ಹಿಮ್ಮೆಟ್ಟಬಾರದು. ಸುಮ್ಮ ಸುಮ್ಮನೇ ಮೂಗು ತೂರಿಸಿಕೊಂಡು ಬರುವ ಜಾಯಮಾನದ ಜನರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದರೆ ನಮ್ಮ ನಿರ್ಧಾರದ ಹಳಿ ತಪ್ಪುವುದು ಖಚಿತ. ಕೆಡಕು ಬಯಸುವವರಿಗೆ ನಾವು ಒಳ್ಳೆಯವರೆಂದು ಸಾಬೀತು ಪಡಿಸಲು ಅಮೂಲ್ಯವಾದ ಶಕ್ತಿ, ಸಮಯ, ಸಾಮರ್ಥ್ಯ ವ್ಯಯಿಸುವುದು ಮೂರ್ಖತನ. ಇಂಥ ಉಡಾಫೆ ಜನರ ನಿಂದೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಮನೋಬಲದಿಂದ ಇಂಥ ನಿಂದೆಗಳನ್ನು ಸಮರ್ಥವಾಗಿ ಎದುರಿಸಬಹುದು.
ದೌರ್ಬಲ್ಯಗಳನ್ನು ತಿದ್ದಿಕೊಳ್ಳಲು ಸಲಹೆ ನೀಡುವ, ಮಲಗಿದ ಅಂತಸತ್ವವನ್ನು ಚೇತನಗೊಳಿಸುವ, ಸಭ್ಯ, ಸಮಯೋಚಿವಾದ, ಔಚಿತ್ಯಪೂರ್ಣವಾದ ವಿಮರ್ಶೆಗಳನ್ನು ಧನಾತ್ಮಕವಾಗಿ ಸ್ವೀಕರಿಸುವುದನ್ನು ಮರೆಯುವಂತಿಲ್ಲ. ಒರಟಾದ ನೇರ ನಿಂದೆಗಳನ್ನು ನಿರ್ಲಕ್ಷಿಸುವುದೇ ಮದ್ದು. ಪುರುಷೋತ್ತಮನಾದ ಶ್ರೀ ರಾಮನಿಗೆ ಟೀಕೆ ತಪ್ಪಲಿಲ್ಲ ಅಂಥದ್ದರಲ್ಲಿ ನಮ್ಮಂಥ ಹುಲುಮಾನವರದೇನು ಪಾಡು? ಸಾಧು ಸಂತರು ಸಿದ್ಧಿ ಪುರುಷರು ಉದ್ರೇಕ ಉದ್ವೇಗಗಳನ್ನು ನಿಯಂತ್ರಣದಲ್ಲಿರಿಸಿಕೊಂಡು ಟೀಕೆಗಳನ್ನು ಎದುರಿಸಿದ್ದಾರೆ. ಟೀಕೆಯ ಜಗತ್ತಿನಲ್ಲಿ ಬದುಕುತ್ತಿರುವ ನಾವು ಟೀಕೆಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಅಕ್ಕ
‘ಲೋಕದಲ್ಲಿ ಹುಟ್ಟಿದ ಬಳಿಕ ಸ್ತುತಿ ನಿಂದೆಗಳು
ಬಂದೊಡೆ ಮನದಲ್ಲಿ ಕೋಪವ ತಾಳದೇ ಸಮಾಧಾನಿಯಾಗಿರಬೇಕು.
.ಎಂದು ಸೂಚಿಸಿದ್ದಾಳೆ. ಹಿಂದೆ ಇಟ್ಟ ತಪ್ಪು ಹೆಜ್ಜೆಗಳ ತಿದ್ದಿಕೊಂಡು ಸ್ವ ವಿಮರ್ಶೆ ಮಾಡಿಕೊಂಡು ಮುಂದಡಿ ಇಡುವುದೇ ನಮಗಿರುವ ಉತ್ತಮ ಮಾರ್ಗ.