ಶಹಾಪುರಃ ಅ.5 ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ- ಚನ್ನಬಸು ವನದುರ್ಗ
ಶಹಾಪುರಃ ಅ.5 ರಂದು ಬೃಹತ್ ಪ್ರತಿಭಟನೆಗೆ ನಿರ್ಧಾರ
ಯಾದಗಿರಿಃ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ಎನ್ನಲಾದ ಯುವತಿ ಮನೀಷಾ ವಾಲ್ಮೀಕಿ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಜಿಲ್ಲೆಯ ಶಹಾಪುರನಲ್ಲಿ ಇದೇ ಅಕ್ಟೊಬರ್ 5 ರಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಹಿರಿಯ ನ್ಯಾಯವಾದಿ ಆರ್.ಚನ್ನಬಸು ವನದುರ್ಗ ವಿನಯವಾಣಿಗೆ ತಿಳಿಸಿದ್ದಾರೆ.
ಶನಿವಾರ ಅವರ ಮನೆಯ ಆವರಣದಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ, ಅತ್ಯಾಚಾರ, ಕೊಲೆಗಳು ನಡೆಯುತ್ತಿದ್ದು, ಅಲ್ಲಿನ ಆಡಳಿತದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಕಾರಣ ಕೂಡಲೇ ಉತ್ತರ ಪ್ರದೇಶ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಲಾಗುವದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖಂಡರಾದ ಅಯ್ಯಣ್ಣ ಕನ್ಯಾಕೋಳೂರ, ದಲಿತ ಮುಖಂಡರಾದ ನೀಲಕಂಠ ಬಡಿಗೇರ, ಗಿರೆಪ್ಪಗೌಡ ಬಾಣತಿಹಾಳ, ನಾಗಣ್ಣ ಬಡಿಗೇರ, ಶಿವಪುತ್ರ ಜವಳಿ, ಸಯ್ಯದ್ ಖಾಲಿದ್, ಮರೆಪ್ಪ ಪ್ಯಾಟಿ, ಹೊನ್ನಪ್ಪ ಗಂಗನಾಳ ಸೇರಿದಂತೆ ಇತರರು ಸಭೆಯಲ್ಲಿ ಭಾಗವಹಿಸಿದ್ದರು.