ಹಿಂದಿನ ಪೌರಾಯುಕ್ತರ ವಿರುದ್ಧ ಮರು ತನಿಖೆಗೆ ಜಿಲ್ಲಾಧಿಕಾರಿ ಮಂಜುನಾಥ ಆದೇಶ
ಶಹಾಪುರಃ ನಗರಸಭೆ ಸಾಮಾನ್ಯ ಸಭೆಯಲ್ಲಿ ಡಿಸಿ ಗರಂ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ಶಹಾಪುರ ನಗರಸಭೆ ಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿದ್ದ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿಯೂ ಆದ ಜೆ.ಮಂಜುನಾಥ ಅವರು, ಸಭೆಯಲ್ಲಿ ಹಿಂದಿನ ನಡವಳಿಕೆ ವಿಷಯಗಳ ಕುರಿತು ಅನುಮೋದನೆ ಪಡೆಯಲು ಅಧಿಕಾರಿಗಳು ಕಡತಗಳನ್ನು ಮುಂದಿಟ್ಟಾಗ, ಸಭೆಯಲ್ಲಿ ಹಾಜರಿದ್ದ ಸದಸ್ಯ ವಸಂತಕುಮಾರ ಸುರಪುರ್ ಅನುಮೋದನೆ ನೀಡುವ ಮುಂಚೆ ತಮ್ಮ ಮಾತುಗಳನ್ನು ಆಲಿಸಲು ಮನವಿ ಮಾಡಿದರು.
ಅವರ ಮನವಿಗೆ ಓಗೊಟ್ಟ ಜಿಲ್ಲಾಧಿಕಾರಿಗಳು, ಅವರಿಂದ ಹಿಂದಿನ ನಡವಳಿಕೆ ಮತ್ತು ಅಂದು ನಡೆದ ಹಂಗಾಮಿ ಅಧ್ಯಕ್ಷ ನೇಮಕ ಕುರಿತು ಪೌರಾಡಳಿತ ಕಾಯ್ದೆ ಅನ್ವಯ ನಿಯಮ ಉಲ್ಲಂಘಿಸಿರುವ ಕುರಿತು ಗಮನ ಸೆಳೆದರು.
ಆಗ ಡಿಸಿಯವರು, ಎಲ್ಲವೂ ಪರಿಶೀಲಿಸಲಾಗಿ, ಹಿಂದಿನ ಪೌರಾಯುಕ್ತರು ಹಂಗಾಮಿ ಅಧ್ಯಕ್ಷರನ್ನು ಆಯ್ಕೆ ಮಾಡಿರುವುದು ಸೇರಿದಂತೆ, ವಿವಿಧ ಕಾಮಗಾರಿಗಳ ಖರ್ಚು ವೆಚ್ಚಗಳ ಕುರಿತು ಮರು ತನಿಖೆ ನಡೆಸುವಂತೆ ಸ್ಥಳದಲ್ಲಿದ್ದ ಯೋಜನಾ ನಿರ್ದೇಶಕರಿಗೆ ಸೂಚಿಸಿದರು ಎಂದು ತಿಳಿದು ಬಂದಿದೆ.
ಹಿಂದಿನ ಪೌರಾಯುಕ್ತ ರಮೇಶ ಪಟ್ಟೇದಾರ ಆಡಳಿತವಧಿಯಲ್ಲಿ ನಡೆದ ಆಗಿನ ಜಿಲ್ಲಾಧಿಕಾರಿ ಹಾಗೂ ನಗರಸಭೆ ಆಡಳಿತಾಧಿಕಾರಿ ಗೈರು ಹಾಜರಿಯಲ್ಲಿ ಹಂಗಾಮಿ ಅಧ್ಯಕ್ಷರ ನೇಮಿಸಿ ಒಂದು ವರ್ಷದ ಅವಧಿಯ ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಖರ್ಚು ವೆಚ್ಚ ಕುರಿತು ತೆಗೆದುಕೊಂಡಿದ್ದ ನಿರ್ಣಯಗಳನ್ನು ರದ್ದು ಪಡಿಸಿ ಮರು ತನಿಖೆಗೆ ಆದೇಶ ನೀಡಿದರು. ಅಲ್ಲದೆ ವಿವಿಧ ದಾಖಲೆಗಳನ್ನು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ವಸಂತಕುಮಾರ ಸುರಪುರಕರ್ ಮಾತನಾಡಿ, ಹಿಂದಿನ ಪೌರಾಯುಕ್ತರು ಹಂಗಾಮಿ ಅಧ್ಯಕ್ಷರ ನೇಮಿಸಿ 1 ಕೋಟಿಗೂ ಅಧಿಕ ಮೊತ್ತದ ಖರ್ಚು ವೆಚ್ಚದ ನಡವಳಿ ಪಾಸು ಮಾಡಿದ್ದರು. ಅದು ನಿಯಮ ಬಾಹಿರವಾಗಿದೆ ಎಂದು ಅಂದಿನ ದಿನ ನಾನು ಸೇರಿದಂತೆ 6 ಜನ ಸದಸ್ಯರ ಸಾಮಾನ್ಯ ಸಭೆ ತ್ಯೇಜಿಸಿ ಹೊರ ನಡೆದಿದ್ದೇವು. ಆದಾಗ್ಯು ಅವರು ಅಂದು ನಡವಳಿ ಪಾಸು ಮಾಡಿದ್ದರು. ನಗರಸಭೆ ಆಡಳಿತಾತ್ಮಕ ಕಾನೂನಿನ್ವಯ ಆಡಳಿತಾಧಿಕಾರಿ ಗೈರು ಹಾಜರಿಯಾದಾಗ ಸದಸ್ಯರಲ್ಲಿಯೇ ಹಂಗಾಮಿ ಅಧ್ಯಕ್ಷರ ನೇಮಕ ಕಾನೂನು ಬಾಹಿರವಾಗಿದೆ ಎಂದು ವಿರೋಧ ನಡುವೆಯೂ ಪೌರಾಯುಕ್ತರು ಸೇರಿದಂತೆ ಹಂಗಾಮಿ ಅಧ್ಯಕ್ಷರು ಉಳಿದ ಸದಸ್ಯರೊಂದಿಗೆ ಕೂಡಿಕೊಂಡು ಒಂದು ಕೋಟಿಗೂ ಅಧಿಕ ವೆಚ್ಚದ ಖರ್ಚು ವಿವಿಧ ಕಾಮಗಾರಿ ಹೆಸರಲ್ಲಿ ಅಂದಾಜು ಪತ್ರಿಕೆ ಪಾಸು ಮಾಡಿದ್ದರು.
ಆಡಳಿತಾಧಿಕಾರಿ ಗೈರು ಆಗಿದ್ದಲ್ಲಿ ಜಿಪಂ ಸಿಎಸ್ ಅವರು ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಬೇಕಿತ್ತು. ಆದರೆ ಅಂದು ಕಾನೂನು ಬಾಹಿರವಾಗಿ ಹಂಗಾಮಿ ಅಧ್ಯಕ್ಷರನ್ನು ನೇಮಿಸಿ ಲಕ್ಷಾಂತರ ರೂ.ಖರ್ಚು ವೆಚ್ಚ ತೋರಿಸಿ ಹಣ ಪಡೆಯುವ ಹುನ್ನಾರ ನಡೆಸಿದ್ದರು. ಪೌರಾಡಳಿತ ಕಾನೂನು ಕಾಯ್ದೆ 1964 ಕಲಂ 305 ಕ್ರಮ ಸಂಖ್ಯೆ3-2 ರ ಅನ್ವಯ ಜಿಲ್ಲಾಧಿಕಾರಿ ಹಾಗೂ ಆಡಳಿತಾಧಿಕಾರಿ ಗೈರು ಹಾಜರಿ ಇದ್ದಲ್ಲಿ ಜಿಪಂ ಸಿಎಸ್ ಅವರು ಅಧ್ಯಕ್ಷತೆ ವಹಿಸಬೇಕಾಗುತ್ತದೆ. ಆದರೆ ಹಂಗಾಮಿ ಅಧ್ಯಕ್ಷರ ನೇಮಕ ಬರುವುದಿಲ್ಲ. ಇದು ನಿಯಮ ಬಾಹಿರ ಪೌರಾಡಳಿತ ಕಾಯ್ದೆ ಉಲ್ಲಂಘನೆಯಾಗಿದ್ದು, ಹಿಂದಿನ ಪೌರಾಯುಕ್ತರು ಮತ್ತು ಹಂಗಾಮಿ ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಸದಸ್ಯರ ಆರೋಪ ಆಲಿಸಿದ ಜಿಲ್ಲಾಧಿಕಾರಿಗಳು, ಹಿಂದಿನ ಸಭೆಯ ನಡವಳಿಕೆ ಕುರಿತು ಸಮಗ್ರ ದಾಖಲಾತಿಗಳನ್ನು ಪರಿಶೀಲಿಸಿ, ಹಂಗಾಮಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಕಾಯ್ದೆ ನಿಯಮ ಉಲ್ಲಂಘನೆ ಕಂಡು ಬಂದಿದ್ದು, ಅಲ್ಲದೆ ಆದಾಯ ಮತ್ತು ಖರ್ಚುಗಳಿಗೆ ಅನುಮೋದನೆ ನೀಡದೆ, ಸ್ಥಳದಲ್ಲಿದ್ದ ಯೋಜನಾ ನಿರ್ದೇಶಕರಿಗೆ ಹಿಂದಿನ ಸಭೆಯ ನಡವಳಿಕೆ ನಿರ್ಣಯ ರದ್ದುಗೊಳಿಸಿದ್ದು, ಮತ್ತು ಹಿಂದಿನ ಪೌರಾಯುಕ್ತ ವಿರುದ್ಧ ಮರು ತನಿಖೆಗೆ ಆದೇಶ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ವಾಹನ ಬಳಕೆ ವೆಚ್ಚಃ ನಗರಸಭೆ ಅಧ್ಯಕ್ಷ, ಪೌರಾಯುಕ್ತರು ಸೇರಿದಂತೆ ಕಂದಾಐ ನಿರೀಕ್ಷರ ವಾಃನ ಬಳಕೆ ಲೆಕ್ಕದಲ್ಲಿ 18 ಲಕ್ಷ ಕ್ಕೂ ಹೆಚ್ಚು ಖರ್ಚು ತೋರಿಸಿದ್ದು, ಕಾರ್ಮಿಕರ ವೇತನ ವಿತರಣೆ 54.90000 ಲಕ್ಷ ಸೇರಿದಂತೆ ಇತರೆ ಖರ್ಚುಗಳಿಗೆ 49.62000 ಲಕ್ಷ ವೆಚ್ಚ ಮಾಡಿದ್ದು ಒಟ್ಟು 83 ಲಕ್ಷ ಖರ್ಚು ವೆಚ್ಚ ತೋರಿಸಲಾಗಿದೆ. ಇದರಲ್ಲಿ ಸಮರ್ಪಕವಾದ ಮಾಹಿತಿ ರಸೀದಿ ಇಲ್ಲದಿರುವುದು ಕಂಡು ಬಂದಿದ್ದು, ಮನಬಂದಂತೆ ಖರ್ಚು ತೋರಲಾಗಿದೆ ಎಂದು ತರಾಟೆಗೆ ತೆಗದುಕೊಂಡರು.
ಅಲ್ಲದೆ ಹಂಗಾಮಿ ಅಧ್ಯಕ್ಷರ ನೇಮಿಸಿರುವುದು ನಗರಸಭೆ ಆಡಳಿತ ಕಾನೂನಾತ್ಮಕ ಅನ್ವಯ ತಪ್ಪು. ಅಲ್ಲದೆ ಬೇಕಾಬಿಟ್ಟಿ ಖರ್ಚು ವೆಚ್ಚಗಳ ಲೆಕ್ಕ ಹಚ್ಚಿದ್ದು, ಸಮರ್ಪಕವಾಗಿ ಪರಿಗಣಿಸಿ ನೋಡಿದಾಗ ಸಾಕಷ್ಟು ತಪ್ಪುಗಳು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕಾರಣ ಮರು ತನಿಖೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಿಂದಿನ ಆದಾಯ ಮತ್ತು ಖರ್ಚು ವೆಚ್ಚ ಕುರಿತು ತನಿಖೆ ನಡೆಸುವಂತೆ ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ಕರ ವಸೂಲಿ ಮಾಡದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸೂಚನೆ
ಕಂದಾಯ ನಿರೀಕ್ಷಕ ಮತ್ತು ನಾಲ್ಕು ಜನ ಕರ ವಸೂಲಿಗಾರರ ವೇತನ ತಡೆಗೆ ಸೂಚನೆ
ನಗರಸಭೆ ಅಧಿಕಾರಿಗಳು ಒಂದು ವರ್ಷದಲ್ಲಿ ಒಟ್ಟು 1 ಕೋಟಿ 37 ಲಕ್ಷ ರೂ. ಕರ ವಸೂಲಿ ಮಾಡುವ ಟಾರ್ಗೇಟ್ ಹೊಂದಿತ್ತು. ಆದರೆ ಅದರಲ್ಲಿ 88 ಲಕ್ಷ ಮಾತ್ರ ಕರ ವಸೂಲಿ ಮಾಡಲಾಗಿದೆ. ಇನ್ನುಳಿದ ವಸೂಲಿ ಮಾಡಲು ವಿಳಂಬ ಮಾಡಿರುವ ಕುರಿತು ಮಾಹಿತಿ ಕೇಳಿದ ಕಾರಣ , ಸಂಬಂಧಿಸಿದ ಅಧಿಕಾರಿಗಳಿಂದ ಸಮರ್ಪಕ ಉತ್ತರ ಬಾರದ ಕಾರಣ, ಗರಂ ಆದ ಜಿಲ್ಲಾಧಿಕಾರಿಗಳು, ಕಂದಾಯ ನಿರೀಕ್ಷಕ ಮತ್ತು ನಾಲ್ಕು ಜನ ಕರ ವಸೂಲಿಗಾರರ ವೇತನ ತಡೆ ಹಿಡಿದಿದ್ದು, ಖುದ್ದಾಗಿ ತಮ್ಮ ಒಪ್ಪಿಗೆ ಪಡೆಯದೆ ಇವರಿಗೆ ವೇತನ ತಡೆ ಹಿಡಿಯಲು ಸೂಚಿಸಿದ್ದಾರೆ ಎನ್ನಲಾಗಿದೆ.
ಅಲ್ಲದೆ ನಗರದ ರಸ್ತೆ ಅಗಲೀಕರಣ ಸಂದರ್ಭ ರಸ್ತೆ ಕಟಿಂಗ್ ಕುರಿತು ಆಯ ಮನೆಯವರಿಂದ ಹಣ ವಸೂಲಿ ಮಾಡದಿರುವ ಬಗ್ಗೆ ಗರಂ ಆಗಿದ್ದು, ನಗರದ ಮನೆಗಳ ಕರ ವಸೂಲಿ ಬಾಕಿ 57 ಲಕ್ಷ, ಮತ್ತು ತಿಂಗಳ ನೀರಿನ ಕರ 2.50 ಲಕ್ಷ, ರೂ.ದಲ್ಲಿ ಕೇಲವ 50 ರಿಂದ 60 ಸಾವಿರ ಮಾತ್ರ ವಸೂಲಿಯಾಗಿದ್ದು, ಬಾಕಿ ಉಳಿದ ಕರ ಕೂಡಲೇ ವಸೂಲಿ ಮಾಡಬೇಕೆಂದು ಖಡಕ್ ಆದೇಶ ನೀಡಿದ್ದಾರೆ. ಅಲ್ಲಿವರೆಗೂ ಇವರ ವೇತನ ತಡೆ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ.