ಪ್ರಮುಖ ಸುದ್ದಿ

ಗಜಲ್ ಓದಿ ಹೊನ್ಕಲ್ರಿಗೆ ಪತ್ರ ಬರೆದ ಬಿ.ಎಲ್.ವೇಣು

ಪ್ರಿಯ ಗೆಳೆಯ ಸಿದ್ಧರಾಮ ಹೊನ್ಕಲ್
ಅವರಿಗೆ ವಂದನೆಗಳು

ನಿಮ್ಮ ಗಜಲ್ ಗಳ ಸಂಕಲನ *ಆಕಾಶಕ್ಕೆ ಹಲವು ಬಣ್ಣಗಳು* ಓದಿದೆ. ಗುಲ್ಬರ್ಗಾದಲ್ಲಿ ನಾನು ಸರ್ಕಾರಿ ಕೆಲಸದಲ್ಲಿದ್ದಾಗ ಶಾಹಿರ್ ಗಳನ್ನು ಕೇಳುವ ಹವ್ಯಾಸವಿತ್ತು . ಶಾಂತರಸರು, ಮುಕ್ತಾಯಕ್ಕರನ್ನು ನಂತರ ಓದಿಕೊಂಡಿದ್ದೆ.

*ಹೃದಯದ ಭಾಷೆ ಗೊತ್ತಿರುವವರಿಗೆ ಪ್ರೇಮದ ದಾಹ, ವಿರಹ, ಸೋಲು ಅನುಭವಿಸಿದವರ ಮನದ ಮದ್ದು ಈ ಗಜಲ್ ಗಳು* . ನಿಮ್ಮ ಬಯೋಡಾಟಾ ನೋಡಿದೆ. ನಿಮ್ಮ ಸಾಧನೆಯೇನು ನೀವು ಹೇಳಿದಂತೆ ಸಣ್ಢದಲ್ಲ ಸರ್. ಮೀಡಿಯಾಗಳು ಗುರುತಿಸೋದು ಬೆಂಗಳೂರಿಗಷ್ಟೇ ಈಗಲೂ ಸೀಮಿತವಾಗಿ ಬಿಟ್ಟಿದೆ. ಇಷ್ಟಾಗಿಯೂ ನಿಮಗೆ ನಿಮ್ಮದೇ ಆದ ಸ್ಥಾನ ಸಾಹಿತ್ಯ ಲೋಕದಲ್ಲಿ ನಿಮಗಿದ್ದೆ ಇದೆ.

ಕಿರಿಯರಿಗೆ ಪ್ರೋತ್ಸಾಹಿಸಬಲ್ಲ ನಿಮ್ಮ ಔದಾರ್ಯ ಕೂಡ ಅನುಕರಣೀಯ.ಸರಳ ಪದಗಳಿಂದ ಸಿಂಗಾರಗೊಂಡಿರುವ ಗಜಲ್ ಗಳು ಮನುಷ್ಯ ಸಂಬಂಧಗಳ,ಪ್ರೀತಿ ಪ್ರೇಮಗಳ ಶೋಧನೆಯಂತಿವೆ.ಹೆಸರೂ ಕೂಡ ಭಾವನೆಗಳ ಬಣ್ಣವನ್ನೇ ವ್ಯಕ್ತಪಡಿಸಿದೆ. ನಾನು ಓದಿದ ಗಜಲ್ ಗಳಲ್ಲಿನ ಮನಸೆಳೆದ ಸಾಲುಗಳನ್ನಿಲ್ಲಿ ಹಂಚಿಕೊಂಡಿದ್ದೇನೆ .

ಕಾಯುವುದರಲ್ಲೂ ಸುಖವಿದೆ ಎಂಬ ಭಾವ

ಮರಣ ತಾ ಕೈ ಚಾಚುವವರೆಗೆ ಬದುಕಿಗೆ ಮುಖ ತಿರುಗಿಸದಿರು

ಮಧು ಬಟ್ಟಲಲ್ಲಿಯ ವಿಷ ನಿನ್ನಧರಗಳೊಂದಿಗೆ ಬೆರೆತು ಅಮೃತವೇ ಆಯಿತಲ್ಲ

ನೆಲದ ಮೇಲಿದ್ದರೂ ಆಕಾಶದ ಹರವಿನವಳು ಅವಳು
ಬಿದ್ದ ಮನಸ್ಸುಗಳೊಂದಿಗೆ ಮಣ್ಣಾದವಳು ಅವಳು

ಕನಸ ಕಂಗಳಲ್ಲಿ ಆಕಾಶದ ಹಲವು ಬಣ್ಣಗಳ ತೋರಿಸುವವಳು

ಭತ್ತಿಸರಾಗವ ಹಾಡಲು ಹಚ್ಚಿ ವೀಣೆಯ ತಂತಿ ಮುರಿಯುವವಳು

ಕೂಡುವುದು ದೊಡ್ಡದಲ್ಲ ಕೂಡಿದ ಮೇಲೆ ಕೆಡದಿರುವುದು

ಮಧುಶಾಲೆಯ ಮತ್ತಿಗೂ ನಿನ್ನ ಈ ಘಮ್ಮತ್ತಿಲ್ಲ ಸಖಿ

ಕೆಲವರಿಗೆ ಜಾತಿಯದ್ದು ಹಲವರಿಗೆ ಧರ್ಮದ್ದು ಹೀಗೆ ಹೊನ್ನು ಹೆಣ್ಣು ಮಣ್ಣಿನ ಹುಚ್ಚು

ಸಹಸ್ರ ಗೋಪಿಕೆಯರಿದ್ದರೂ ಕಾತರಿಸಿದವನು ರಾಧೆಗಾಗಿ

ಈ ಊರು ಎಲ್ಲರದು ಬರೀ ನಮ್ಮದು ನಿಮ್ಮದಲ್ಲ ಈಗ

ಬಂದವರೆಲ್ಲ ಒಂದು ದಿನ ಹೋಗಲೇಬೇಕಲ್ಲ ಕೆಲವರು ಮುಂದೆ ಮುಂದೆ ನಾವು ನೀವು ಅವರ ಹಿಂದೆ ಹಿಂದೆ

ಇಂತಹ ಅನೇಕ ಸಾಲುಗಳು ಅರ್ಥಪೂರ್ಣವಾಗಿಯೂ ಮುದ ನೀಡಿದವು. *ನವಿಲು ಗರಿಯ ಮೃದುತ್ವ ನಿಮ್ಮ ಗಜಲ್ ಸಾಲುಗಳಲ್ಲಿದೆ. ಗಜಲ್ ಗಳಿಗೆ ತಕ್ಕಂತೆ ಮೋಹಕ ಚಿತ್ರಗಳು ಮನ ಸೆಳೆಯದಿರಲಾರವು*. ಪುಸ್ತಕ ಕಳುಹಿಸಿ ಗಜಲ್ ಗಳ ರುಚಿ ಹತ್ತಿಸಿದ ನಿಮಗೆ ಧನ್ಯವಾದಗಳು ಹೊನ್ಕಲ್. ನಿಮ್ಮ ಸಾಹಿತ್ಯಯಾನ ಮುಂದೆ ಸಾಗಲಿ. ಓದುಗರ ಹೃದಯ ಸೇರಲೆಂದು ಆಶಿಸಿ ಶುಭಕೋರುತ್ತೇನೆ.ವಂದನೆಗಳು

ಡಾ.ಬಿ.ಎಲ್.ವೇಣು
ಚಿತ್ರದುರ್ಗ.

Related Articles

Leave a Reply

Your email address will not be published. Required fields are marked *

Back to top button