ಜನಮನ

ಬಿತ್ತಿದ ಬೀಜದ ಫಲ ಮತ್ಯಾರೋ ಪಡೆದಾರು! – ಭವಿಷ್ಯ ನುಡಿದ ಕೋಡಿಮಠದ ಶ್ರೀ

ಯಾರಾಗ್ತಾರೆ ಮುಂದಿನ ಮುಖ್ಯಮಂತ್ರಿ!

ಬಿತ್ತಿದ ಬೀಜದ ಫಲ ಮತ್ಯಾರೋ ಕೊಯ್ದಾರು, ಬಿತ್ತಿದ ಬೀಜ ಒಂದು, ಫಸಲು ಬರೋದು ಮತ್ತೊಂದು ಎಂದು ಒಗಟು ಹೇಳುವ ಮೂಲಕ ಮುಂಬರುವ ಚುನಾವಣೆಯ ಬಗ್ಗೆ, ಮುಖ್ಯಮಂತ್ರಿ ಯಾರಾಗಬಹುದು ಎಂಬುದರ ಬಗ್ಗೆ ಕೋಡಿಮಠದ ಶಿವಕುಮಾರ್ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಗದಗ ನಗರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು ಮುಂಬರುವ ಚುನಾವಣಾ ಫಲಿತಾಂಶ ಅಚ್ಚರಿದಾಯಕ ಆಗಿರುತ್ತದೆಂದು ಅಭಿಪ್ರಾಯ ಪಟ್ಟಿದ್ದಾರೆ. ಕೋಡಿಮಠದ ಶ್ರೀಗಳ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಒಗಟಿನ ಅರ್ಥದ ಪ್ರಕಾರ ಮುಂದಿನ ಚುನಾವಣೆ ಬಳಿಕ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಬಹುದು. ಅಚ್ಚರಿ ಮೂಡಿಸುವ ಹೊಸ ಮುಖ ಮುಖ್ಯಮಂತ್ರಿ ಗಾದಿಗೇರಬಹುದು ಎಂದು ಅಂದಾಜಿಸಲಾಗುತ್ತಿದೆ.

ಕಾಂಗ್ರೆಸ್, ಬಿಜೆಪಿ ಏನೆಲ್ಲಾ ಕಸರತ್ತು ಮಾಡಿದರೂ ಕೊನೆಗಳಿಗೆಯಲ್ಲಿ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲದ ಅನಿವಾರ್ಯತೆ ಮೂಡಬಹುದು. ಆ ಸಂದರ್ಭದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಎಲೆಮರೆಯ ಕಾಯಿಯಂತಿದ್ದ ನಾಯಕರೊಬ್ಬರು ಸಿಎಂ ಆಗಬಹುದು. ಅಥವಾ ಜೆಡಿಎಸ್ ಕಡಿಮೆ ಸಂಖ್ಯೆಯ ಶಾಸಕರನ್ನು ಹೊಂದಿದ್ದರೂ ಸಹ ಸರ್ಕಾರದ ಚುಕ್ಕಾಣಿ ಹಿಡಿಯಬಹುದು ಎಂಬುದು ಕೆಲವರ ಊಹೆ.

ಮತ್ತೊಂದು ಕಡೆ ಬಿಜೆಪಿಯಲ್ಲಿ ಸಿಎಂ ಅಬ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಮಾಜಿ ಸಿ.ಎಂ, ಬಿಜೆಪಿ ರಾಜ್ಯದ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸುತ್ತದೆ. ಆದರೆ, ಬಿಜೆಪಿ ಬಹುಮತ ಪಡೆದಾಗ ಕೊನೆಯ ಕ್ಷಣದಲ್ಲಿ ಬಿಜೆಪಿಯ ಮೋದಿ- ಅಮಿತ್ ಶಾ ಜೋಡಿ ಬೇರೊಬ್ಬರನ್ನು ಸಿಎಂ ಮಾಡುವ ಮೂಲಕ ಅಚ್ಚರಿ ಮೂಡಿಸಬಹುದು ಎಂದು ರಾಜಕೀಯ ಕಾರ್ಯಕರ್ತರು ಊಹಿಸುತ್ತಿದ್ದಾರೆ

ಇನ್ನು ಕಾಂಗ್ರೆಸ್ ಪಕ್ಷದಲ್ಲೂ ಬಹುತೇಕರು ಈಗಾಗಲೇ ಸಿಎಂ ಸಿದ್ಧರಾಮಯ್ಯ ಅವರ ನೇತೃತ್ವದಲ್ಲೇ ಮುಂಬರುವ ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಿದ್ದಾರೆ. ಅಲ್ಲದೆ ಸಿದ್ಧರಾಮಯ್ಯ ಅವರೇ ಮತ್ತೆ ಸಿಎಂ ಆಗ್ತಾರೆ ಅಂತಲೂ ಕೆಲವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬಂದರೆ ಹೈಕಮಾಂಡ್ ಹೊಸಮುಖವನ್ನು ಸಿಎಂ ಗಾದಿಗೆ ಕೂಡಿಸಬಹುದು ಎಂದು ರಾಜಕೀಯ ನಾಯಕರು ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಆದರೆ, ಕೋಡಿಹಳ್ಳಿ ಮಠದ ಶ್ರೀಗಳ ಭವಿಷ್ಯ ಎಷ್ಟರ ಮಟ್ಟಿಗೆ ಸತ್ಯವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಶ್ರೀಗಳ ಭವಿಷ್ಯ ನಂಬುವವರ ಪ್ರಕಾರ ಶ್ರೀಗಳು ಹೇಳಿದ್ದ ಭವಿಷ್ಯಗಳೆಲ್ಲವೂ ಸತ್ಯವಾಗಿವೆ . ಈಗ ನುಡಿದಿರುವ ಭವಿಷ್ಯವೂ ನಿಜವಾಗಲಿದೆ ಎಂಬುದಾಗಿದೆ.

ಆದರೆ, ಶ್ರೀಗಳ ಭವಿಷ್ಯ ವಾಣಿಗಳಲ್ಲಿ ಈಗಾಗಲೇ ಬಹುತೇಕ ಸುಳ್ಳಾಗಿವೆ. ಹೀಗಾಗಿ, ಈ ಬಗ್ಗೆ ಗಂಭೀರ ಚಿಂತನೆಯ ಅಗತ್ಯವಿಲ್ಲ. ಭವಿಷ್ಯವೇ ಬೇರೆ, ರಾಜಕೀಯವೇ ಬೇರೆ. ಭವಿಷ್ಯ ಒಂದು ಮೌಢ್ಯ, ಅದು ಸತ್ಯವಲ್ಲ ಅನ್ನೋದು ಹಲವರ ವಾದವಾಗಿದೆ.

– ಮುದನೂರ್

Related Articles

One Comment

Leave a Reply

Your email address will not be published. Required fields are marked *

Back to top button