ಮುದನೂರಿನಲ್ಲಿ ಕೋರಿಸಿದ್ದೇಶ್ವರ ಜಾತ್ರಾ ಮಹೋತ್ಸವ
ಸುರಪುರಃಧಾರ್ಮಿಕ ಕಾರ್ಯಕ್ರಮದಿಂದ ಮನಸ್ಸು ಪರಿವರ್ತನೆ
ಯಾದಗಿರಿಃ ಭಕ್ತಿಯಿಂದ ಭಗವಂತನನ್ನು ಪೂಜಿಸಿದರೆ, ಭಗವಂತ ನಮ್ಮ ಕೈ ಬಿಡುವುದಿಲ್ಲ, ಗುರುವಿನ ಮೂಲಕ ಭಗವಂತನನ್ನು ಕಾಣಬಹುದು ಎಂದು ಮುದನೂರ ಕೋರಿಸಿದ್ದೇಶ್ವರ ಶಾಖಾ ಮಠದ ಮಲ್ಲಿಕಾರ್ಜುನ ದೇವರು ಹೇಳಿದರು. ಸುರಪುರ ತಾಲೂಕಿನ ಮುದನೂರ ಗ್ರಾಮದ ಕೋರಿಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಶ್ರೀಕೋರಿಸಿದ್ದೇಶ್ವರರ 19ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಪಾಶ್ಚಾತ್ಯ ಸಂಸ್ಕೃತಿಯಿಂದ ಇಂದಿನ ಯುವಕರು ಹಾಳಾಗುತ್ತಿದ್ದಾರೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮನಸ್ಸು ಪರವರ್ತನೆಯಾಗಲಿದೆ. ಬದುಕಿಗೆ ಉತ್ತಮ ಮಾರ್ಗ ದೊರೆಯಲಿದೆ ಎಂದು ತಿಳಿಸಿದರು.
ಭೀಮರಾಯ ಸಾಹುಕಾರ ಹೊಟ್ಟಿ ಮಾತನಾಡಿ ಇಲ್ಲಿ ಅನೇಕ ಶರಣರು, ಸಂತರು, ದಾರ್ಶನಿಕರು ಕಾಯಕದ ಮೂಲಕ ನಾಡನ್ನು ಕಟ್ಟುವ ಕೆಲಸ ಮಾಡಿದ್ದಾರೆ. ಮಠ ಮಾನ್ಯಗಳು ಶಿಕ್ಷಣದ ಬಗ್ಗೆ ಒಲವು ತೋರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಕರಡಕಲ್ ಕೋರಿಸಿದ್ಧೇಶ್ವರ ಶಾಖಾ ಮಠದ ಶಾಂತರುದ್ರಮುನಿ ಸ್ವಾಮಿಗಳು, ಗುಳಬಾಳ ಹುಚ್ಚೇಶ್ವರ ಸ್ವಾಮೀಜಿ, ಶಿವಮೂರ್ತಿ ಶಿವಾಚಾರ್ಯರು ಉಪಸ್ಥಿತರಿದ್ದರು. ಮಾಜಿ ಶಾಸಕ ವೀರಬಸವಂತರಡ್ಡಿ ಮುದ್ನಾಳ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಾಜಿ ಶಾಸಕ ಗಂಗಾಧರ ನಾಯಕ ಮಾನವಿ, ಚಂದ್ರೇಗೌಡ ಗೋಗಿ, ಸಂಗನಗೌಡ ವಜ್ಜಲ್, ಯಮನಣ್ಣ ವಜ್ಜಲ, ರಾಮನಗೌಡ ಡವಳಗಿ, ಬಸವರಾಜ ಬಂಟವನೂರ ಇದ್ದರು.
ಶಾಂತರಡ್ಡಿ ಚೌದ್ರಿ ನಿರೂಪಿಸಿದರು, ವೈ.ಹೆಚ್.ವಜ್ಜಲ ಸ್ವಾಗತಿಸಿದರು, ಕೃಷ್ಣಾ ವಂದಿಸಿದರು. ಇದೇ ಸಂದರ್ಭದಲ್ಲಿ ಯಡ್ರಾಮಿ ಹಿರೇಮಠದ ರುದ್ರಮುನಿ ಶೀವಾಚಾರ್ಯರಿಂದ ಹನುಮಾನ ದೇವರ ಪುರಾಣ ಜರುಗಿತು.