ನಡುಗಡ್ಡೆಯಾದ ರೋಜಾ ಗ್ರಾಮಃ NDFR ತಂಡದಿಂದ 50 ಜನರ ರಕ್ಷಣಾ ಕಾರ್ಯಾಚರಣೆ
ನಡುಗಡ್ಡೆಯಾದ ರೋಜಾ ಹೊಸೂರಃ NDFR ತಂಡದಿಂದ 50 ಜನರ ರಕ್ಷಣಾ ಕಾರ್ಯ
ಯಾದಗಿರಿಃ ಜಿಲ್ಲೆಯ ಶಹಾಪುರ ತಾಲೂಕಿನ ರೋಜಾ ಹೊಸೂರ ಗ್ರಾಮ ಸುತ್ತಲೂ ಭೀಮಾ ನದಿ ಸುತ್ತುವರೆದ ಪರಿಣಾಮ ರೋಜಾ ಗ್ರಾಮ ನಡುಗಡ್ಡೆಯಾಗಿದೆ, ಸುಮಾರು 50 ಜನರು ಆ ಗ್ರಾಮದಲ್ಲಿ ಸಿಲುಕಿದ್ದು, NDRF ತಂಡ ಪೊಲೀಸರ ಸಹಕಾರದೊಂದಿಗೆ ಈಗಾಗಲೇ 20 ಜನರನ್ನು ರಕ್ಷಣೆ ಮಾಡಿದ್ದು, ಇನ್ನುಳಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ
ಮಹಾರಾಷ್ಟ್ರದಿಂದ ಅಪಾರ ಪ್ರಮಾಣ ನೀರು ಹರಿಬಿಟ್ಟ ಹಿನ್ನೆಲೆ ಭೀಮಾನದಿ ಭೋರ್ಗರಿಯುತ್ತಿದೆ. ನದಿ ಪಾತ್ರದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ತಾಲೂಕಾಡಳಿತ ನಿರಾಶ್ರಿತರನ್ನು ಹೊಸೂರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ತಂಗಲು ವ್ಯವಸ್ಥೆ ಮಾಡಿದ್ದಾರೆ.
ಹೊಸೂರ ಶಾಲೆಯೊಂದರಲ್ಲಿ ಕಾಳಜಿ ಕೇಂದ್ರವನ್ನು ತೆರೆಯಲಾಗಿದ್ದು, ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಅಣಬಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಮೋಟಗಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ತಾಲೂಕಾಡಳಿತದ ಸೂಚನೆ ಮೇರೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ ತಂಗಿದ್ದು ನಿರಂತರ ಸಂಪರ್ಕ ಹೊಂದುವ ಮೂಲಕ ಮಹಾಮಳೆ ಮತ್ತು ಪ್ರವಾಹದಿಂದ ಉಂಟಾದ ಸಮಸ್ಯೆ ನಿವಾರಿಸುವಲ್ಲಿ, ಜನರ ರಕ್ಷಣೆಯಲ್ಲಿ ನಿರತರಾಗಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ರಾತ್ರಿಯಿಂದಲೇ ಬೀಡು ಬಿಟ್ಟಿದ್ದ ಪಿಡಿಓ ಅವರು, ಪೊಲೀಸ್ ಸಿಬ್ಬಂದಿ ಮತ್ತು, ಕಾರ್ಯಾಚರಣೆ ತಂಡ ಸೇರಿದಂತೆ ನಿರಾಶ್ರಿತರಿಗೆ ಊಟದ ವ್ಯವಸ್ಥೆ ಕಲ್ಪಿಸಿದ್ದರು.
ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಹೊಸೂರ ಗ್ರಾಮದಲ್ಲಿ ಯೇ ತಂಗಿದ್ದು, NDRF ತಂಡಕ್ಕೆ ಬೇಕಾದ ಸಹಕಾರ ನೀಡುತ್ತಿದ್ದು, ರೊಜಾ ಗ್ರಾಮದಲ್ಲಿ ಇನ್ನುಳಿದ ಜನರನ್ನು ಕರೆ ತರುವ ಕಾರ್ಯ ಮುಂದುವರೆದಿದೆ. ಈ ರೀತಿಯಾದ ನೆರೆ ಇದೇ ಮೊದಲು ಬಾರಿ ಈ ಪರಿಯಲ್ಲಿ ಉಂಟಾಗಿದೆ ಎನ್ನುತ್ತಾರೆ ಹೊಸೂರ ಗ್ರಾಮದ ಮುಖಂಡ ಗುರುಲಿಂಗಪ್ಪ ಹೊಸೂರ.