ಮಂತ್ರಿಗಿರಿಗಾಗಿ ಅಖಾಡಕ್ಕಿಳಿದ ಶ್ರೀಕೃಷ್ಣ ಯಾದವಾನಂದಶ್ರೀ!
ಬೆಂಗಳೂರು : ಚಿತ್ರದುರ್ಗ ಜಿಲ್ಲೆ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸ್ಥಾನ ನೀಡುವಂತೆ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ. ಚಿತ್ರದುರ್ಗದಲ್ಲಿಂದು ಸುದ್ದಿಗೋಷ್ಠಿ ನಡೆಸಿದ ಅವರು ಕಳೆದ ಹದಿನೈದು ವರ್ಷಗಳಿಂದ ಯಾದವ ಸಮುದಾಯದ ಯಾರೊಬ್ಬರೂ ಶಾಸಕರಾಗಿ ವಿಧಾನಸೌಧ ಪ್ರವೇಶಿಸಿರಲಿಲ್ಲ. ಈಗ ಪೂರ್ಣಿಮಾ ಶ್ರೀನಿವಾಸ್ ಅವರು ಹಿಂದುಳಿದ ಯಾದವ ಸಮುದಾಯದ ಏಕೈಕ ಶಾಸಕಿ ಆಗಿದ್ದು ಅವರಿಗೆ ಮಂತ್ರಿಗಿರಿ ನೀಡುವ ಮೂಲಕ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.
ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಭೇಟಿಯಾದ ಸಂದರ್ಭದಲ್ಲಿ ಮುಂದೆ ನಮ್ಮ ಸರ್ಕಾರ ಬರಲಿದೆ. ಆಗ ಯಾದವ ಸಮುದಾಯಕ್ಕೆ ಸಚಿವ ಸ್ಥಾನ ನೀಡುವುದಾಗಿ ಬಿ.ಎಸ್.ಯಡಿಯೂರಪ್ಪ ಅವರು ನಮ್ಮ ಬಳಿ ಹೇಳಿದ್ದರು. ಈಗ ಅವರೇ ಮುಖ್ಯಮಂತ್ರಿಗಳಾಗಿದ್ದು ಯಾದವ ಸಮುದಾಯದ ಪೂರ್ಣಿಮಾ ಅವರಿಗೆ ಮಂತ್ರಿ ಸ್ಥಾನ ನೀಡಿ ನುಡಿದಂತೆ ನಡೆದುಕೊಳ್ಳಲಿ. ಈ ಬಗ್ಗೆ ಮನವಿ ಸಲ್ಲಿಸಲು ನಾವು ನಿಯೋಗದೊಂದಿಗೆ ತೆರಳಿ ಸಿಎಂ ಯಡಿಯೂರಪ್ಪ ಅವರಿಗೆ ಭೇಟಿ ಮಾಡುತ್ತೇವೆ ಎಂದು ಯಾದವಾನಂದಶ್ರೀಗಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.