ಯಾದಗಿರಿ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಃ ಮುಂದುವರೆದ ವಕೀಲರ ಧರಣಿ
ಧರಣಿ ಸ್ಥಳಕ್ಕೆ ಚಿಂಚನಸೂರ ಭೇಟಿ, ಧರಣಿ ಹಿಂಪಡೆಯಲು ಮನವಿ
ಒಪ್ಪದ ವಕೀಲರುಃ ಧರಣಿ ಮುಂದುವರಿಕೆ
ಯಾದಗಿರಿ: ಜಿಲ್ಲಾ ನ್ಯಾಯಾಲಯಕ್ಕೆ ಭೂಮಿ ನೀಡುವಂತೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದಿಂದ ನಡೆಯುತ್ತಿರುವ ಹೋರಾಟ ಇಂದು ಎರಡನೇ ದಿನವೂ ಮುಂದುವರಿಯಿತು.
ಹೋರಾಟ ಸ್ಥಳಕ್ಕೆ ಕರ್ನಾಟಕ ಗಡಿ ಪ್ರದೇಶಾಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರೂ ಆಗಿರುವ ಶಾಸಕ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಭೇಟಿ ನೀಡಿ,ಬರುವ ಗುರುವಾರ ನಡೆಯುವ ಸಂಪುಟ ಸಭೆಯಲ್ಲಿ ಭೂಮಿ ನೀಡುವುದಕ್ಕೆ ಅನುಮೋದನೆ ನೀಡಲಾಗುವುದು ಕಾರಣ ಧರಣಿ ವಾಪಸ್ಸು ಪಡೆಯುವಂತೆ ಮನವಿ ಮಾಡಿದರು.
ಪ್ರತಿಭಟನಾ ಸ್ಥಳದಲ್ಲೇ ವಕೀಲರ ಸಮ್ಮುಖದಲ್ಲಿ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಕ್ಯಾಬಿನೆಟ್ ಸೆಕ್ರೆಟರಿ ಅವರನ್ನು ಮೊಬೈಲ್ ಮೂಲಕ ಸಂಪರ್ಕಿಸಿ ಭೂಮಿ ನೀಡುವ ಪ್ರಸ್ತಾವನೆ ಬರುವ ಕ್ಯಾಬಿನೆಟ್‍ನಲ್ಲಿ ಮಂಡಿಸಿ ಅನುಮೋದನೆ ನೀಡಲಾಗುವುದೆಂದು ಹೋರಾಟಗಾರರಿಗೆ ಖಚಿತ ಪಡಿಸಿದರು. ಇಂದಿನಿಂದಲೇ ಧರಣಿ ಕೈ ಬಿಡುವಂತೆ ವಕಿಲರನ್ನು ಮನವಿ ಮಾಡಿದರು.
ಆದರೆ, ಪಟ್ಟು ಸಡಿಲಿಸದ ವಕೀಲರು ನಿಮ್ಮ ಬಗ್ಗೆ ನಮಗೆ ಗೌರವವಿದೆ. ಈಗಾಗಲೇ ಬೆಂಗಳೂರಿಗೆ ತೆರಳಿದ ವಕೀಲರ ನಿಯೋಗವನ್ನು ಎರಡು ಬಾರಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಸಿದ್ದೀರಿ. ನೀವು ನೀಡುವ ಭರವಸೆ ಮೇಲೆ ನಮಗೆ ವಿಶ್ವಾಸವಿದೆ ಆದರೆ, ಸರ್ಕಾರ ವಿಶ್ವಾಸ ಉಳಿಸಿಕೊಂಡಿಲ್ಲ. ಈ ಹಿಂದೆಯೇ ಉಸ್ತುವಾರಿ ಸಚಿವರು ಇದೇ ಭರವಸೆ ನೀಡಿದ್ದರು. ಆದರೆ, ಹತ್ತು ತಿಂಗಳು ಕಳೆದರೂ ಯಾವುದೇ ಪ್ರಯೋಜನೆಯಾಗಿಲ್ಲ. ಭೂಮಿ ಮಂಜೂರು ಮಾಡಿ ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದರು.
ಮಗ ಹುಟ್ಟಿದಾಕ್ಷಣ ಡಾಕ್ಟರಾಗಲ್ಲರೀ…, ಅದಕ್ಕೂ ಸಮಯ ಬೇಕು ತಾನೆ ಎಂದು ಚಿಂಚನಸೂರ ಹಾಸ್ಯ ಚಟಾಕಿ ಹಾರಿಸುವ ಮೂಲಕ ಕೇಳಿದಾಕ್ಷಣ ಭೂಮಿ ಸಿಗಲ್ಲಾರೀ… ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ಮುಗಿಯಬೇಕಿದೆ. ಅಲ್ಲಿಯ ವರೆಗೆ ಸರ್ಕಾರದೊಂದಿಗೆ ಸಹಕರಿಸಿ. ಕಕ್ಷಿದಾರರಿಗೆ ತೊಂದರೆಯಾಗಲಿದೆ ಎಂದು ಚಿಂಚನಸೂರ ಅವರು ಪದೇಪದೇ ಮನವಿ ಮಾಡಿದರೂ ವಕೀಲರು ತಮ್ಮ ನಿಲುವು ಬದಲಾಯಿಸದೇ ಧರಣಿ ಮುಂದುವರಿಸುವುದಾಗಿ ಹೇಳಿದರು.
ಗಾಂಧಿ ವೃತ್ತದಲ್ಲಿ ಮಾನವ ಸರಪಳಿ:
ನಗರದ ಪರಮುಖ ಬೀದಿಗಳಲ್ಲಿ ನೂರಾರು ವಕೀಲರು ಬೈಕ್ ರ್ಯಾಲಿ ನಡೆಸಿದರು. ಧರಣಿ ಸ್ಥಳ ತಹಶೀಲ್ ಕಚೇರಿ ಯಿಂದ ಶಾಸ್ತ್ರೀ ವೃತ್ತ, ಗಂಜ್ ಸರ್ಕಲ್,ಮೈಲಾಪುರ ಅಗಸಿ, ಗಾಂಧೀ ವೃತ್ತ, ಕನಕ ವೃತ್ತ,ಸರ್ಕಾರಿ ಪದವಿ ಕಾಲೇಜು ರಸ್ತೆ ಮೂಲಕ ನೇತಾಜಿ ವೃತ್ತದ ವರೆಗೆ ಬೈಕ್ ರ್ಯಾಲಿ ನಡೆಸಿದರು. ಈ ಮಧ್ಯೆ ಗಾಂಧೀ ವೃತ್ತದಲ್ಲಿ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾನವ ಸರಪಳಿ ರಚಿಸಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ನಗರದ ಹೃದಯ ಭಾಗವಾಗಿರುವ ಗಾಂಧೀ ವೃತ್ತದಲ್ಲಿ ಅರ್ಧ ಗಂಟೆ ಕಾಲ ಟ್ರಾಫಕ್ ಜಾಮ್ ಆಗಿ ಸಾರ್ವಜನಿಕರು ತೊಂದರೆ ಅನುಭವಿಸಬೇಕಾಯಿತು. ಅಲ್ಲಿಂದ ಬೈಕ್ ರ್ಯಾಲಿ ಮರಳಿ ತಹಶೀಲ್ ಕಚೇರಿ ತಲುಪಿ,ಧರಣಿ ಮುಂದುವರಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಕಿಲ್ಲನಕೇರಾ, ಉಪಾಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿ ನಿರಂಜನ ಯರಗೋಳ,ಜಂಟಿ ಕಾರ್ಯದರ್ಶಿ ಡಿ.ಕೆ.ದೊಡ್ಡಮನಿ,ಖಜಾಂಚಿ ನಾಗಭೂಷಣ ಬಿ.ಅಡಿಕಿ ಸೇರಿದಂತೆ ಹಿರಿಯ ಮತ್ತು ಕಿರಿಯ ನೂರಾರು ವಕೀಲರು ಭಾಗವಹಿಸಿದ್ದರು. ನ್ಯಾಯವಾದಿ ಎಸ್.ಪಿ.ನಾಡೇಕರ್ ವಿರೂಪಿಸಿದರು. ಮುಸ್ಲಿಂ ಸಮುದಾಯದ ಮುಖಂಡ ಅಸದ್ ಚಾವುಸ್ ಹಾಗೂ ಮಾಧುರಿ ಮಸ್ಕಿ ಅವರು ಹೋರಾಟಕ್ಕೆ ಬೆಂಬಲ ಸೂಚಿಸಿದರು.