ಧರ್ಮ ಸಂಸತ್ ನಲ್ಲಿ ರಾಮ ಮಂದಿರ ಸೇರಿ 3ಅಂಶಗಳ ಚರ್ಚೆ -ಪೇಜಾವರಶ್ರೀ
ಅಯೋಧ್ಯೆ ವಿವಾದ ನಿವಾರಣೆಗೆ ಮೂರು ಅವಕಾಶಗಳಿವೆ -ಪೇಜಾವರಶ್ರೀ
ಉಡುಪಿ: ನವೆಂಬರ್ 24ರಿಂದ ಮೂರು ದಿನಗಳ ಕಾಲ ಉಡುಪಿಯಲ್ಲಿ ಧರ್ಮ ಸಂಸತ್ ಸಂತರ ಸಮ್ಮೇಳನ ಆಯೋಜಿಸಲಾಗಿದೆ. ಧರ್ಮ ಸಂಸತ್ ನಲ್ಲಿ ದೇಶದ ಮೂಲೆ ಮೂಲೆಗಳಿಂದ ಆಗಮಿಸುವ ಸಾವಿರಾರು ಸಾಧು, ಸಂತರು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಸಮ್ಮೇಳನಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. 26ರಂದು ನಗರದ ಎಂ.ಜಿ.ಎಂ ಕಾಲೇಜು ಮೈದಾನದಲ್ಲಿ ಬೃಹತ್ ಹಿಂದೂ ಸಮಾವೇಶ ನಡೆಯಲಿದ್ದು ಲಕ್ಷಾಂತರ ಜನ ಭಾಗಿಯಾಗಲಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಧರ್ಮ ಸಂಸತ್ ಸಂತರ ಸಮ್ಮೇಳನದಲ್ಲಿ ಸಾವಿರಾರು ಜನ ಸಾಧು, ಸಂತರು ಭಾಗಿಯಾಗಲಿದ್ದು ಈ ವೇಳೆ ಮೂರು ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಗುವುದು. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ಗೋಹತ್ಯೆ ನಿಷೇಧ ಮತ್ತು ಅಸ್ಪೃಶ್ಯತೆ ನಿವಾರಣೆ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ ಎಂದು ಪೇಜಾವರಶ್ರೀಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದೇ ವೇಳೆ ಅಯೋಧ್ಯೆ ವಿವಾದ ನಿವಾರಣೆಗೂ ಮೂರು ಅವಕಾಶಗಳಿವೆ ಎಂದಿರುವ ಪೇಜಾವರಶ್ರೀ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಕಾಯಬಹುದು, ಸರ್ಕಾರ ವಿಶೇಷ ವಿಧೇಯಕ ಮಂಡಿಸಬಹುದು, ಸರ್ಕಾರದ ನೇತೃತ್ವದಲ್ಲೇ ಸಂಧಾನ ನಡೆಸಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಕೇಂದ್ರ ಹಾಗೂ ಉತ್ತರ ಪ್ರದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸ್ಪಂದಿಸುವ ಸರ್ಕಾರಗಳಿವೆ. ಹೀಗಾಗಿ, ಈ ಎಲ್ಲಾ ಆಯಾಮಗಳಲ್ಲೂ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುವುದು ಎಂದಿದ್ದಾರೆ.