ವಾಲ್ಮೀಕಿ ಭವನಕ್ಕೆ ಅಡಿಗಲ್ಲು ನೆರವೇರಿಸಿದ ದರ್ಶನಾಪುರ
2 ಕೋಟಿ ವೆಚ್ಚದಲ್ಲಿ ವಾಲ್ಮೀಕಿ ಭವನ ನಿರ್ಮಾಣ – ದರ್ಶನಾಪುರ
ಶಹಾಪುರಃ ವಾಲ್ಮೀಕಿ ಭವನ ನಿರ್ಮಿಸುವ ಕನಸು ಹಲವಾರು ವರ್ಷಗಳಿಂದ ಇತ್ತು. ಪ್ರಸ್ತುತ ಆ ಕನಸು ನನಸಾಗುತ್ತಿದೆ. ಆಯಾ ಸಮುದಾಯಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಲಾಗುತ್ತಿದೆ. ವಾಲ್ಮೀಕಿ ಸಮುದಾಯಕ್ಕೆ ಭವನದಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಹೊರಲವಯದ ಚಾಂದ್ ಪ್ಯಾಲೇಸ್ ಸಮೀಪದಲ್ಲಿ ಹಮ್ಮಿಕೊಂಡ ವಾಲ್ಮೀಕಿ ಭವನ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿ ಆಯೋಜಿಸಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು.
ವಾಲ್ಮೀಕಿ ಸಮುದಾಯ ಭವನಕ್ಕೆ ಈಗಾಗಲೇ 1 ಕೋಟಿ ವೆಚ್ಚ ಅನುದಾನ ಕಲ್ಪಿಸಲಾಗಿದೆ. ಇದು ಸುಮಾರು ಎಂಟು ವರ್ಷದ ಹಿಂದೆ ತಯಾರಿಸಲಾಗಿದ್ದ ವೆಚ್ಚವಿದ್ದು, ಸಮರ್ಪಕ ಸೌಲಭ್ಯದೊಂದಿಗೆ ನಿರ್ಮಿಸಲು ಇನ್ನೂ ಒಂದು ಕೋಟಿ ಅಗತ್ಯವಿದೆ ಎಂದು ಸಮಾಜದ ಮುಖಂಡರು ತಿಳಿಸಿದ್ದಾರೆ. ಅದರಂತೆ ಇನ್ನೂ ಒಂದು ಕೋಟಿ ರೂ. ಒದಗಿಸುವ ಪ್ರಯತ್ನ ಮಾಡುವೆ.
ಭೂಸೇನಾ ನಿಗಮದವರು ಕಟ್ಟಡ ಕಾರ್ಯದ ಜವಬ್ದಾರಿ ಹೊಂದಿದ್ದು, ಸುಸಜ್ಜಿತವಾಗಿ ಕಟ್ಟಡ ನಿರ್ಮಾಣ ಮಾಡಬೇಕಿದೆ. ಆ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕು. ಅಲ್ಲದೆ ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಗೊಲ್ಲಪಲ್ಲಿಯ ವಾಲ್ಮೀಕಿ ಆಶ್ರಮದ ವರದಾನಂದ ಸ್ವಾಮೀಜಿ ಮಾತನಾಡಿ, ಸಮುದಾಯ ಭವನಕ್ಕೆ ಇನ್ನೂ ಒಂದು ಕೋಟಿ ಅನುದಾನ ಅಗತ್ಯವಿದ್ದು, ಅದನ್ನು ಒದಗಿಸುವ ಪ್ರಯತ್ನವನ್ನು ನಾನು ಮತ್ತು ಶಾಸಕರು ಸೇರಿ ಪ್ರಯತ್ನಿಸುವದಾಗಿ ತಿಳಿಸಿದರು.
ಅಲ್ಲದೆ ಸಮುದಾಯ ನಾಯಕರು ಎಲ್ಲಾ ಸಮುದಾಯದವರೊಂದಿಗೆ ಉತ್ತಮ ಬಾಂಧ್ಯವ್ಯದೊಂದಿಗೆ ಇರಬೇಕು. ಪಕ್ಷಾತೀತವಾಗಿ ಜಾತ್ಯತೀತವಾಗಿ ಸಮುದಾಯದ ಬೆಳವಣಿಗೆಗೆ ಶ್ರಮಿಸಬೇಕು ವಾಲ್ಮೀಕಿ ಸಮುದಾಯ ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕವಾಗಿ ಸಬಲರಾಗಬೇಕಿದೆ. ಆ ನಿಟ್ಟಿನಲ್ಲಿ ಹಿರಿಯರು ಯುವಕರು ಕೆಲಸ ಮಾಡಬೇಕು ಎಂದು ತಿಳಿಸಿದರು.
ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಮರೆಪ್ಪ ಪ್ಯಾಟಿ ಅಧ್ಯಕ್ಷವಹಿಸಿದ್ದರು. ನಗರಸಭೆ ಅಧ್ಯಕ್ಷೆ ಶಹನಾಜ್ ಬೇಗಂ ದರ್ಬಾನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ಶರಣಪ್ಪ ಸಲಾದಪುರ, ತಾಪಂ ಅಧ್ಯಕ್ಷ ಹಣಮಂತ್ರಾಯ ದಳಪತಿ, ಎಪಿಎಂಸಿ ಅಧ್ಯಕ್ಷ ವೀರಣ್ಣ ಸಾಹು, ಹಣಮೇಗೌಡ ಮರಕಲ್, ಆರ್.ಚನ್ನಬಸವ ವನದುರ್ಗ, ದೇವಿಂದ್ರಪ್ಪಗೌಡ ಗೌಡಗೇರಿ, ಶಿವರಾಜ ಹೂಗಾರ, ಸಮಾಜ ಕಲ್ಯಾಣ ಅಧಿಕಾರಿ ರಾಹುತಪ್ಪ ಹವಲ್ದಾರ, ಶೇಖರ ದೊರೆ, ಮಾನಸಿಂಗ್ ಚವ್ಹಾಣ ಉಪಸ್ಥಿತರಿದ್ದರು. ಯೋಧ ದುರ್ಗಪ್ಪ ನಾಯಕ ಸ್ವಾಗತಿಸಿ ವಂದಿಸಿದರು.
ಶಹಾಪುರ ಕ್ರೀಡಾಂಗಣಕ್ಕೆ ಏಕಲವ್ಯ ಹೆಸರಿಡಲು ಮನವಿ
ಸಮಾರಂಭದಲ್ಲಿ ವಾಲ್ಮೀಕಿ ಸಮಾಜ ಅಧ್ಯಕ್ಷರು ಮತ್ತು ಮುಖಂಡರು ಶಹಾಪುರ ನಗರದ ಡಿಗ್ರಿ ಕಾಲೇಜು ಹತ್ತಿರದ ಕ್ರೀಡಾಂಗಣಕ್ಕೆ ಏಕಲವ್ಯ ಕ್ರೀಡಾಂಗಣ ಎಂದು ಹೆಸರಿಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಭರವಸೆ ನೀಡಿದ ಶಾಸಕ ದರ್ಶನಾಪುರ, ಈ ಮೊದಲೊಮ್ಮೆ ಏಕಲವ್ಯ ಎಂದು ಕ್ರೀಡಾಂಗಣಕ್ಕೆ ಹೆಸರಿಡಲು ಸಮಾಜದವರು ತಿಳಿಸಿದ್ದರು. ಹೀಗಾಗಿ ಈ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮಕೈಗೊಳ್ಳಲು ಸೂಚಿವೆ ಎಂದು ಅವರು ಭರವಸೆ ನೀಡಿದರು. ಸಮುದಾಯ ಜನರು ಸಂತ ವ್ಯಕ್ತಪಡಿಸಿ ಚಪ್ಪಾಳೆ ತಟ್ಟುವ ಮೂಲಕ ಶಾಸಕರ ಭರವಸೆಯನ್ನು ಸ್ವಾಗತಿಸಿದರು.